ADVERTISEMENT

ಕೋಲಾರ | ಪೋಕ್ಸೊ ಕಾಯ್ದೆ: 20 ವರ್ಷ ಶಿಕ್ಷೆ, ದಂಡದ ಎಚ್ಚರಿಕೆ –ನ್ಯಾ. ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 7:27 IST
Last Updated 13 ಮಾರ್ಚ್ 2025, 7:27 IST
ಕೋಲಾರ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಅಂಕಿಅಂಶದ ಕಿರುಪುಸ್ತಕವನ್ನು ಬುಧವಾರ ಎಂ.ಆರ್‌.ರವಿ, ಪ್ರವೀಣ್‌ ಪಿ.ಬಾಗೇವಾಡಿ, ಸುನಿಲ್‌ ಎಸ್‌.ಹೊಸಮನಿ, ನಿಖಿಲ್‌ ಬಿ., ಕೆ.ಎಂ.ಶಾಂತರಾಜು,  ಡಾ.ಜಿ.ಶ್ರೀನಿವಾಸ್‌, ಡಾ.ಜಗದೀಶ್ ಬಿಡುಗಡೆ ಮಾಡಿದರು
ಕೋಲಾರ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಅಂಕಿಅಂಶದ ಕಿರುಪುಸ್ತಕವನ್ನು ಬುಧವಾರ ಎಂ.ಆರ್‌.ರವಿ, ಪ್ರವೀಣ್‌ ಪಿ.ಬಾಗೇವಾಡಿ, ಸುನಿಲ್‌ ಎಸ್‌.ಹೊಸಮನಿ, ನಿಖಿಲ್‌ ಬಿ., ಕೆ.ಎಂ.ಶಾಂತರಾಜು,  ಡಾ.ಜಿ.ಶ್ರೀನಿವಾಸ್‌, ಡಾ.ಜಗದೀಶ್ ಬಿಡುಗಡೆ ಮಾಡಿದರು    

ಕೋಲಾರ: ‘ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು ಅಕ್ಷಮ್ಯ ಅಪರಾಧ. ಲೈಂಗಿಕ ದೌರ್ಜನ್ಯ ನಡೆಸಿರುವುದು ಸಾಬೀತಾದರೆ ಪೋಕ್ಸೊ ಕಾಯ್ದೆಯಡಿ ಅಂಥವರಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ.ಎ.ಮಂಜುನಾಥ್ ಎಚ್ಚರಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೋಕ್ಸೊ ಕಾಯ್ದೆ ಕುರಿತ ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘18ವರ್ಷದೊಳಗಿನವರನ್ನು ಅಪ್ರಾಪ್ತ ವಯಸ್ಸಿನವರೆಂದು ಪರಿಗಣಿಸಲಾಗುತ್ತದೆ. ಅಂಥವರು ಪೋಕ್ಸೊ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತಾರೆ. ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಪೋಕ್ಸೊ ಕಾಯ್ದೆ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅತ್ಯವಶ್ಯವಾಗಿದೆ’ ಎಂದರು.

ADVERTISEMENT

‘ವೈದ್ಯರು ಸಮಾಜದ ಸುಧಾರಕರು. ಶಿಕ್ಷಕರಷ್ಟೇ ಗೌರವವನ್ನು ವೈದ್ಯರಿಗೂ ನೀಡಲಾಗುತ್ತದೆ. ಪೋಕ್ಸೊ ಪ್ರಕರಣ ವರದಿ ಮಾಡುವಾಗ ಬಹಳ ಜಾಗರೂಕರಾಗಿರಬೇಕಾಗುತ್ತದೆ. ವೈದ್ಯರ ವರದಿಯನ್ನು ಆಧರಿಸಿ ಸಾಕ್ಷಿಗಳ ಹೇಳಿಕೆ ಮೇರೆಗೆ ಪ್ರಕರಣದ ತೀರ್ಪು ನೀಡಲಾಗುತ್ತದೆ. ಅದ್ದರಿಂದ ವೈದ್ಯರು ತಮ್ಮ ಅನುಭವದ ಧಾರೆಯೆರೆದು ವರದಿಗಳನ್ನು ಪ್ರಾಮಾಣಿಕವಾಗಿ ಸಿದ್ಧಪಡಿಸಬೇಕು’ ಎಂದು ಕಿವಿಮಾತು ಹೇಳಿದರು.

ಕೆಜಿಎಫ್‌ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಮಾತನಾಡಿ, ‘ವೈದ್ಯಕೀಯ ಗರ್ಭಸಮಾಪನ ಕಾಯ್ದೆಯ ಕುರಿತು ವೈದ್ಯರಿಗೆ‌ ಸರಿಯಾಗಿ ತಿಳಿದಿರಬೇಕು. ಕೆಲವರ್ಗದ ಮಹಿಳೆಯರಿಗೆ 20 ಮತ್ತು 24 ವಾರಗಳ ನಡುವೆ ಗರ್ಭಧಾರಣೆ ಅಂತ್ಯಗೊಳಿಸಲು ಅನುಮತಿಸಲಾಗುತ್ತದೆ. ಇಂತಹ ಪ್ರಕರಣಗಳನ್ನು ಮೊದಲು ಪೊಲೀಸರಿಗೆ ಮಾಹಿತಿ ನೀಡಬೇಕು. ಆಗ ಮಾತ್ರ ನ್ಯಾಯಬದ್ಧವಾದ ಗರ್ಭಸಮಾಪನ ಪ್ರಕರಣ ಪೂರ್ಣಗೊಳ್ಳುತ್ತದೆ’ ಎಂದರು.

ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ್ ಎಸ್. ಹೊಸಮನಿ, ‘ಕಾರ್ಯನಿಮಿತ್ತ ಜೈಲುಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ 18 ರಿಂದ 20 ವರ್ಷದ ವಯೋಮಿತಿಯೊಳಗಿನ ಯುವಕರು ಪೋಕ್ಸೊ ಪ್ರಕರಣಗಳಲ್ಲಿ ಭಾಗಿಯಾಗಿ ಬಂದಿರುವುದನ್ನು ಕಾಣುತ್ತಿದ್ದೇವೆ. ಈ ಕಾಯ್ದೆಯು ಸಂತ್ರಸ್ತೆಯು ಅಧಿಕಾರಿ ಬಳಿಗೆ ಬರುವ ಬದಲು, ಅಧಿಕಾರಿಗಳೇ ಸಂತ್ರಸ್ತೆಯ ಬಳಿ ತೆರಳಿ ವಿವರ ಮತ್ತು ಹೇಳಿಕೆ ದಾಖಲಿಸಲು ಒತ್ತು ನೀಡುತ್ತದೆ. ಇಂತಹ ಹೇಳಿಕೆಗಳು, ವೈದ್ಯರ ಅಭಿಪ್ರಾಯ ಮತ್ತು ವರದಿ ಆಧರಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ, ‘ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಣೆ ಮಾಡುವ ಪೋಕ್ಸೊ ಕಾನೂನು 2012ರಲ್ಲಿ ಜಾರಿಗೆ ಬಂದಿತು. ನಿರ್ಭಯ ಪ್ರಕರಣದ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ಜಾರಿಗೆ ತರಲಾಗಿದ್ದು, ಈ ಕಾಯ್ದೆಯಲ್ಲಿ ಕೇವಲ 46 ಕಲಂಗಳಿವೆ. ಆದರೆ, ಅತ್ಯಂತ ಶಕ್ತಿಯುತ ಕಾಯ್ದೆಯಾಗಿದೆ. ಈ ಕಾಯ್ದೆಯನ್ನು ಜಾರಿಗೆ ತರುವ ಹಿನ್ನೆಲೆಯ ಆಶಯವನ್ನು ತಿಳಿದುಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಹೀನಕೃತ್ಯವು ಕಡಿಮೆಯಾದಿತು’ ಎಂದು ಅಭಿಪ್ರಾಯಪಟ್ಟರು.

‘ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಬಲ ವ್ಯಕ್ತಿಗಳನ್ನು ನೇಮಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇಂತಹ ಬೆಂಬಲ ವ್ಯಕ್ತಿಗಳನ್ನು ಒದಗಿಸುತ್ತದೆ. ಪ್ರಕರಣಕ್ಕೆ ಒಳಗಾದ ಮಗುವಿಗೆ ಕಾನೂನು ಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ತಕ್ಷಣವೇ ಒದಗಿಸಿಕೊಡಬೇಕು. ಬಾಲ್ಯ ವಿವಾಹವು ವಧುವಿನ ಒಪ್ಪಿಗೆಯಿಂದಾಗಿದ್ದರೂ ಕಾನೂನು ಬಾಹಿರವಾಗಿರುತ್ತದೆ’ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ ಶ್ರೀನಿವಾಸ್, ‘ಸಮಾಜದಲ್ಲಿನ ಪಿಡುಗುಗಳ ವಿರುದ್ಧ ಹೋರಾಟಗಳು ನಿರಂತವಾಗಿ ನಡೆಯುತ್ತಿರುತ್ತವೆ. ಆದರೆ, ಸಾಮಾಜಿಕ ದೌರ್ಜನ್ಯಗಳ ಕುರಿತು ಗಮನಹರಿಸದೆ ಇರುವುದು ದುರ್ದೈವ. ಅದರಲ್ಲಿಯು ಪ್ರಮುಖವಾಗಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ. ಈ ವಿಚಾರಕ್ಕಾಗಿ ಕಾನೂನಿನ ಅಗತ್ಯವಿಲ್ಲದೆ ಸ್ವಯಂ ಪ್ರೇರಿತವಾಗಿ ನಿಯಂತ್ರಣಕ್ಕೆ ಬರಬೇಕಿತ್ತು. ದುರ್ದೈವದಿಂದ ಕಠಿಣ ಕಾನೂನನ್ನು ನಮ್ಮ ಮೇಲೆ ಹೇರಿಕೊಳ್ಳಲಾಗಿದೆ’ ಎಂದರು.

ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಜಿಲ್ಲಾ ಪಂಚಾಯತ್ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಗದೀಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದನ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ನಾರಾಯಣಸ್ವಾಮಿ, ಜಿಲ್ಲಾ ವೈದ್ಯಕೀಯ ಶಿಕ್ಷಣಾಧಿಕಾರಿ ಪ್ರೇಮಾ, ಎಲ್ಲಾ ತಾಲ್ಲೂಕಿನ ವೈದ್ಯಾಧಿಕಾರಿಗಳು ಪಾಲ್ಗೊಂಡಿದ್ದರು.

ವಿಡಿಯೊ ಸಾಕ್ಷ್ಯ ಸಿದ್ಧಪಡಿಸಿಟ್ಟುಕೊಳ್ಳಿ

‘ನುರಿತ ವೈದ್ಯರು ಪೋಕ್ಸೊ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವಾಗ ಸಾಧ್ಯವಾದಷ್ಟು ವಿಡಿಯೊ ಸಾಕ್ಷ್ಯಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು. ಪ್ರಕರಣಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಸಮರ್ಪಕವಾಗಿ ಸಿದ್ಧಪಡಿಸಬೇಕು. ಇದರಿಂದಾಗಿ ಸಂತ್ರಸ್ತೆಯ ಪರವಾಗಿ ವಾದಿಸಲು ಅನುಕೂಲವಾಗುತ್ತದೆ. ವೈದ್ಯರ ಸಾಕ್ಷಿಗಳು ವೈಜ್ಞಾನಿಕವಾಗಿರುತ್ತವೆ. ಆದ್ದರಿಂದ ಸದರಿ ವರದಿಗಳನ್ನು ನೈಜವಾಗಿ ಹಾಗೂ ಸ್ಪಷ್ಟವಾಗಿ ಬರೆಯಬೇಕು. ಅಂತೆಯೇ ಧೈರ್ಯವಾಗಿ ಹಾಗೂ ನಿಷ್ಪಕ್ಷಪಾತವಾಗಿ ವರದಿ ಸಲ್ಲಿಸಬೇಕು. ನಿಗದಿತ ಅವಧಿಯೊಳಗೆ ವರದಿ ಸಲ್ಲಿಸಿದರೆ ಮಾತ್ರ ಸಂತ್ರಸ್ತೆಯರಿಗೆ ನ್ಯಾಯ ಒದಗಿಸಲು ಸಾಧ್ಯ’ ಎಂದು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಸಲಹೆ ನೀಡಿದರು.

1098 ಸಹಾಯವಾಣಿ ಬಳಸಿ

‘1098 ಸಹಾಯವಾಣಿಯನ್ನು ಸರ್ಕಾರವು ಜಾರಿಗೊಳಿಸಿದ್ದು ಒಂದೇ ಸಹಾಯವಾಣಿಯಡಿಯಲ್ಲಿ ಪೊಲೀಸ್ ಆರೋಗ್ಯ ಹಾಗೂ ಅಗ್ನಿತುರ್ತುಗಳಿಗೆ ಬಳಸಬಹುದಾಗಿದೆ. ಈ ಸಹಾಯವಾಣಿಯನ್ನು ಪ್ರತಿಯೊಂದು ಶಾಲೆಗಳಲ್ಲಿ ಮುಖ್ಯವಾಗಿ ಕಾಲೇಜುಗಳಲ್ಲಿ ಸಾರ್ವಜನಿಕರಲ್ಲಿ ಪ್ರಚುರಪಡಿಸಬೇಕು. ಎಲ್ಲಾ ಇಲಾಖೆಗಳ ಮುಖ್ಯಸ್ಥರು ಮತ್ತು ಖಾಸಗಿ ಸಂಸ್ಥೆಗಳ ಮುಖ್ಯಸ್ಥರು ಪೋಕ್ಸೊ ಪ್ರಕರಣ ಕಂಡುಬಂದಲ್ಲಿ ತಕ್ಷಣ ಪೊಲೀಸ್‍ಗೆ ವರದಿ ಮಾಡಬೇಕು. ಇಲ್ಲವಾದಲ್ಲಿ ಅಪರಾಧ ಮಾಡಿದಂತಾಗುವುದು. ಇಂತಹ ಪ್ರಕರಣಗಳಲ್ಲಿ ಹೃದಯ ಹೀನರಾಗಿ ವರ್ತಿಸುವುದು ನಾಚಿಕೆಗೇಡಿನ ಸಂಗತಿ’ ಎಂದು ಜಿಲ್ಲಾಧಿಕಾರಿ ಎಂ.ಆರ್‌.ರವಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.