ನಾಪತ್ತೆ (ಪ್ರಾತಿನಿಧಿಕ ಚಿತ್ರ)
ಮುಳಬಾಗಿಲು: ತಾಲ್ಲೂಕಿನ ಕಪ್ಪಲಮಡಗು ಕೆರೆ ಬಳಿ ವ್ಯಕ್ತಿಯೊಬ್ಬರ ಕಾರು ಹಾಗೂ ಚಪ್ಪಲಿ ಇದ್ದ ಪರಿಣಾಮ ಮುಳಬಾಗಿಲು ಗ್ರಾಮಾಂತರ ಪೊಲೀಸರು ಶನಿವಾರ ರಾತ್ರಿಯಿಂದ ಭಾನುವಾರ ಸಂಜೆಯವರೆಗೂ ಇಡೀ ಕೆರೆಯ ನೀರಿನಲ್ಲಿ ಹುಡುಕಾಟ ನಡೆಸಿರುವ ಘಟನೆ ನಡೆದಿದೆ.
ಮುಳಬಾಗಿಲು ತಾಲ್ಲೂಕಿನ ಕೊರವೇನೂರು ಗ್ರಾಮದ ಜೀವ ವಿಮಾ ನಿಗಮದ ಏಜೆಂಟ್ ಕೊರವೆನೂರು ವೆಂಕಟರಾಮರೆಡ್ಡಿ (42) ಎನ್ನುವವರು ಎರಡು ದಿನದ ಹಿಂದೆ ಮನೆಯಿಂದ ಹೋದವರು ವಾಪಸ್ ಬಂದಿಲ್ಲ. ಹಾಗಾಗಿ ಪತ್ನಿ ಮಂಜುಳಾ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪತಿ ಕಾಣೆಯಾಗಿರುವ ಕುರಿತು ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿದ್ದ ಪೊಲೀಸರು ತನಿಖೆ ಪ್ರಾರಂಭಿಸಿದ್ದರು.
ಕಾಣೆಯಾಗಿದ್ದ ವೆಂಕಟರಾಮ ರೆಡ್ಡಿ ಬಳಸುತ್ತಿದ್ದ ಕಾರು ಹಾಗೂ ಚಪ್ಪಲಿಗಳು ತಾಲ್ಲೂಕಿನ ಕಪ್ಪಲಮಡಗು ಗ್ರಾಮದ ಕೆರೆ ಬಳಿ ಇರುವುದು ಶನಿವಾರ ಪೊಲೀಸರಿಗೆ ತಿಳಿದು ಬಂದಿತ್ತು. ಹಾಗಾಗಿ ವ್ಯಕ್ತಿ ಕೆರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂಬ ಸಂಶಯದಿಂದ ಎಎಸ್‌ಪಿ ಮನಿಷಾ, ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಸತೀಶ್ ಕುಮಾರ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಅರುಣ್ ಗೌಡ ಪಾಟೀಲ್ ನೇತೃತ್ವದಲ್ಲಿ ಅಗ್ನಿಶಾಮಕ ಸಿಬ್ಬಂದಿ ಇಡೀ ಕೆರೆಯ ನೀರಿನಲ್ಲಿ ಎರಡು ದಿನ ಹುಡುಕಾಟ ನಡೆಸಿದರು. ಆದರೂ, ಕಾಣೆಯಾಗಿರುವ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಹಾಗಾಗಿ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಹೋದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.