ADVERTISEMENT

ಪಕ್ಷ ನಿಷ್ಠೆಗೆ ಅಧಿಕಾರ– ಅವಕಾಶ

ವಿಧಾನ ಪರಿಷತ್ ನೂತನ ಸದಸ್ಯ ಇಂಚರ ಗೋವಿಂದರಾಜು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 0:51 IST
Last Updated 24 ಜೂನ್ 2020, 0:51 IST
ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಕೋಲಾರಕ್ಕೆ ಮಂಗಳವಾರ ಆಗಮಿಸಿದ ಇಂಚರ ಗೋವಿಂದರಾಜು ಅವರಿಗೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸೇಬಿನ ಹಾರ ಹಾಕಿ ಸ್ವಾಗತ ಕೋರಿದರು.
ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಕೋಲಾರಕ್ಕೆ ಮಂಗಳವಾರ ಆಗಮಿಸಿದ ಇಂಚರ ಗೋವಿಂದರಾಜು ಅವರಿಗೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸೇಬಿನ ಹಾರ ಹಾಕಿ ಸ್ವಾಗತ ಕೋರಿದರು.   

ಕೋಲಾರ: ‘ಜೆಡಿಎಸ್ ವರಿಷ್ಠರು ನನ್ನನ್ನು ವಿಧಾನ ಪರಿಷತ್‌ ಸದಸ್ಯನಾಗಿ ಮಾಡುವ ಮೂಲಕ ಪಕ್ಷ ನಿಷ್ಠೆ ಇರುವ ಸಾಮಾನ್ಯ ಕಾರ್ಯಕರ್ತರಿಗೂ ಅಧಿಕಾರ, ಅವಕಾಶ ಸಿಗುತ್ತದೆ ಎಂಬ ಸಂದೇಶ ರವಾನಿಸಿದ್ದಾರೆ’ ಎಂದು ವಿಧಾನ ಪರಿಷತ್ ನೂತನ ಸದಸ್ಯ ಇಂಚರ ಗೋವಿಂದರಾಜು ತಿಳಿಸಿದರು.

ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ನಂತರ ಮಂಗಳವಾರ ನಗರಕ್ಕೆ ಆಗಮಿಸಿದ ಅವರು ಕೊಂಡರಾಜನಹಳ್ಳಿಯ ಆಂಜನೇಯಸ್ವಾಮಿ ದೇವಾಲಯದ ಬಳಿ ಪಕ್ಷದ ಕಾರ್ಯಕರ್ತರ ಸ್ವಾಗತ ಸ್ವೀಕರಿಸಿ ಮಾತನಾಡಿದರು.

‘ಪಕ್ಷ ನನಗೆ ಜವಾಬ್ದಾರಿಯುತ ಸ್ಥಾನ ನೀಡಿದ್ದು, ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಪಕ್ಷ ಸಂಘಟಿಸಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಪಣ ತೊಟ್ಟಿದ್ದೇನೆ’ ಎಂದು ಘೋಷಿಸಿದರು.

ADVERTISEMENT

‘ಮನುಷ್ಯನಿಗೆ ಪಕ್ಷ ನಿಷ್ಠೆ, ಸ್ವಾಮಿ ನಿಷ್ಠೆ, ಸಾಂಸಾರಿಕ ನಿಷ್ಠೆ ಇರಬೇಕು. ನಿಷ್ಠೆ ನಮ್ಮ ಜತೆಗಿದ್ದರೆ ಸದಾ ಅದೇ ನಮ್ಮನ್ನು ಕಾಪಾಡುತ್ತದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷ ಸಂಘಟನೆ ಮಾಡುತ್ತೇನೆ. ಬಡ ಕುಟುಂಬದಿಂದ ಬಂದ ನಾನು ಎಲ್ಲ ಕ್ಷೇತ್ರಗಳಲ್ಲೂ ಜಯ ಸಾಧಿಸಿದ್ದೇನೆ. ನನ್ನ ಜೀವನ ಚರಿತ್ರೆ ಬಿಳಿ ಹಾಳೆಯಂತಿದ್ದು, ಕೈ ಮತ್ತು ಬಾಯಿ ಶುದ್ಧವಾಗಿದೆ. ಯಾರಿಗೂ ಅನ್ಯಾಯ ಮಾಡಿಲ್ಲ’ ಎಂದರು.

‘ಸಮಾಜಕ್ಕಾಗಿ ದುಡಿಯುತ್ತಾ ಬಂದಿದ್ದೇನೆ. ಇಷ್ಟು ದಿನ ನಮ್ಮ ತಾಲ್ಲೂಕು, ಜಿಲ್ಲೆ ಎನ್ನುತ್ತಿದೆ. ಇದೀಗ ಜಿಲ್ಲೆ, ರಾಜ್ಯ ಎನ್ನುವ ಜವಾಬ್ದಾರಿ ಬಂದಿದೆ. ಕೋಲಾರ ಶಾಸಕ ಕೆ.ಶ್ರೀನಿವಾಸಗೌಡರ ಸಲಹೆ ಸೂಚನೆ, ಅನುಭವ ಪಡೆದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

ಸಮಸ್ಯೆಗೆ ಸ್ಪಂದನೆ: ಗೋವಿಂದರಾಜು ಅವರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಕೆ.ಶ್ರೀನಿವಾಸಗೌಡ, ’ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನ ಗೆಲುವಿಗೆ ಗೋವಿಂದರಾಜು ಶ್ರಮಪಟ್ಟು ಕೆಲಸ ಮಾಡಿದ್ದಾರೆ. ನನ್ನ ಗೆಲುವಿನಲ್ಲಿ ಅವರ ಪಾತ್ರ ಹೆಚ್ಚಿನದು. ಅವರಿಗೆ ನಾನು ಚಿರಋಣಿ’ ಎಂದರು.

‘ನಾನು ಮೊದಲ ಬಾರಿಗೆ ಶಾಸಕನಾದಾಗ ಶಿರಸಿಯಲ್ಲಿದ್ದ ಗೋವಿಂದರಾಜು ಅವರನ್ನು ನಾನೇ ಕೋಲಾರಕ್ಕೆ ಕರೆತಂದಿದ್ದೆ. ಅಂದಿನಿಂದ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ. ಸತತ 2 ಬಾರಿ ಸೋತಿದ್ದ ನನ್ನನ್ನು ಹಿಂದಿನ ಚುನಾವಣೆಯಲ್ಲಿ ಗೆಲ್ಲಿಸಲು ಬಲಗೈ ಬಂಟನಂತೆ ಕೆಲಸ ಮಾಡಿದ್ದಾರೆ. ಇದೀಗ ವಿಧಾನ ಪರಿಷತ್ ಸದಸ್ಯರಾಗಿರುವ ಗೋವಿಂದರಾಜು ಅವಿಭಜಿತ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ’ ಎಂದರು.

ಗೋವಿಂದರಾಜು ಅವರು ಕೊಂಡರಾಜನಹಳ್ಳಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ದರ್ಗಾ, ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ವಿಧಾನ ಪರಿಷತ್ ಸದಸ್ಯ ತೂಪಲ್ಲಿ ಚೌಡರೆಡ್ಡಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಮು, ಎಪಿಎಂಸಿ ಅಧ್ಯಕ್ಷ ಮಂಜುನಾಥ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಾಬುಮೌನಿ, ಬಣಕನಹಳ್ಳಿ ನಟರಾಜ್, ಜಿ.ಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.