ADVERTISEMENT

ಭವಿಷ್ಯ ರೂಪಿಸುವ ಬರವಣಿಗೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 5:44 IST
Last Updated 18 ಆಗಸ್ಟ್ 2019, 5:44 IST
ದಲಿತ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಯಲ್ಲಿ ಸಾಹಿತಿ ಬಿ.ಟಿ.ಲಲಿತಾನಾಯಕ್ ಮಾತನಾಡಿದರು.
ದಲಿತ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಯಲ್ಲಿ ಸಾಹಿತಿ ಬಿ.ಟಿ.ಲಲಿತಾನಾಯಕ್ ಮಾತನಾಡಿದರು.   

ಕೋಲಾರ: ‘ಜನರ ಭವಿಷ್ಯ ರೂಪಿಸುವಂತಹ ಬರವಣಿಗೆ ಹಾಗೂ ಅನುಭವವನ್ನು ರಚಿಸುವ ಅಗತ್ಯವಿದೆ’ ಎಂದು ಸಾಹಿತಿ ಬಿ.ಟಿ.ಲಲಿತಾನಾಯಕ್ ಅಭಿಪ್ರಾಯಪಟ್ಟರು.

ಇಲ್ಲಿ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ‘ದಲಿತ, ರೈತ ಮತ್ತು ಸ್ತ್ರೀ’ ಕುರಿತು ನಡೆದ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಬುಡಕಟ್ಟು ಸಮಾಜದ ಜತೆಗೆ ಇತರೆ ಸಮಾಜದ ಹೆಣ್ಣು ಮಕ್ಕಳು ನೋವು ಅನುಭವಿಸುತ್ತಿದ್ದಾರೆ. ಪುರುಷ ಶ್ರಮ ಜೀವಿಯಾದರೂ ಮಹಿಳೆ ಸಾಮರ್ಥ್ಯದ ಪಾತ್ರ ವಹಿಸುತ್ತಾಳೆ’ ಎಂದರು.

‘ಬುಡಕಟ್ಟು ಜನಾಂಗದವರು ಜಾತಿಗಳಾಗಿ ನಾಗರಿಕತೆಯಿಲ್ಲದೆ ವಿಕೃತ ಮಾರ್ಗದಲ್ಲಿದ್ದು, ಬಂಡಾಯ ಸಾಹಿತ್ಯದ ಮೂಲಕ ಹೊಸ ಆಯಾಮ ಕಂಡುಕೊಳ್ಳಲು ಸಹಕಾರಿಯಾಗಿದೆ. ಸತ್ಯ ಕಂಡುಕೊಳ್ಳುವ ದಿಕ್ಕಿನಲ್ಲಿ ಶಿಕ್ಷಣ ಕೊಡಬೇಕಾಗಿದೆ. ಹೊಸ ಆಲೋಚನೆಗಳು ಹಾದಿ ತಪ್ಪದೆ ಇರುವ ಶಿಕ್ಷಣ ಬುಡಕಟ್ಟು ಜನಾಂಗಕ್ಕೆ ಅಗತ್ಯವಿದೆ. ಆರ್ಥಿಕತೆ ಮತ್ತು ಶಿಕ್ಷಣ ಬಂದಾಗ ಮಾತ್ರ ಬುಡಕಟ್ಟು ಜನಾಂಗದವರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದು ಹೇಳಿದರು.

ADVERTISEMENT

‘ಸಿನಿಮಾ ನಟರು ಮೃತಪಟ್ಟರೆ ಸರ್ಕಾರಿ ಜಾಗದಲ್ಲಿ ಸ್ಮಾರಕ್ಕೆ ನಿರ್ಮಿಸುವ ಬದಲು ಆ ಜಾಗವನ್ನು ನಿರ್ಗತಿಕರಿಗೆ ವಸತಿ, ನಿವೇಶನ ಕಲ್ಪಿಸಲು ಮೀಸಲಿಡಬೇಕು. ಇದಕ್ಕೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಕಣ್ಣೀರಿನ ಕಥೆ: ‘ದಲಿತ ಮಹಿಳಾ ಸಾಹಿತ್ಯ’ ಕುರಿತು ವಿಷಯ ಮಂಡಿಸಿದ ಸಾಹಿತಿ ಸಮತಾ ಬಿ.ದೇಶಮಾನೆ, ‘ದಲಿತ ಸಾಹಿತ್ಯದಲ್ಲಿ ಕೇವಲ ಸೇಡು, ನೋವು, ಕಣ್ಣೀರಿನ ಕಥೆಗಳು ಮಾತ್ರ ಇರುತ್ತದೆ. ಅಂಬೇಡ್ಕರ್ ಅವರ ಬರಹ, ಭಾಷಣವು ದಲಿತ ಮಹಿಳೆಯರ ಮಾನಸಿಕ ನೂರಾರು ವಿದ್ವತ್‌ಪೂರ್ಣವಾದ ಪ್ರಗತಿಯ ಪ್ರಖರತೆಯ, ಪ್ರಜ್ವಲತೆಯ ಚಿಂತನೆ ಸಾಹಿತ್ಯ ರಚಿಸಲು ಪ್ರೇರಣೆಯಾಯಿತು’ ಎಂದರು.

‘ದಲಿತರು ಮತ್ತು ದಲಿತೇತರರು ದಲಿತ ಪ್ರಜ್ಞೆಯನ್ನು ಒಳಗುಮಾಡಿಕೊಂಡು ರಚಿಸಿದ ಸಾಹಿತ್ಯವನ್ನು ದಲಿತ ಸಾಹಿತ್ಯವೆಂದು ವ್ಯಾಖ್ಯಾನಿಸಬಹುದು. ಕನ್ನಡ ಸಾಹಿತ್ಯ ಮತ್ತು ಈ ನೆಲದ ಚಳವಳಿಗಳು ಪರಸ್ಪರ ಒಂದರೊಳಗೊಂದು ತೆಕ್ಕೆ ಹಾಕಿಕೊಂಡಿವೆ. ಅದರ ನಡಿಗೆಯು ವಚನ ಸಾಹಿತ್ಯ ಅಥವಾ ಚಳವಳಿಯ ಕಾಲಘಟ್ಟದಿಂದ ಈವರೆಗೆ ಅವಿಚ್ಛಿನ್ನವಾಗಿ ಸಾಗಿ ಬಂದಿದೆ’ ಎಂದು ವಿವರಿಸಿದರು.

ಸಾಹಿತಿ ಬಿ.ಯು.ಸುಮಾ ‘ಸ್ತ್ರೀ ಬಿಕ್ಕಟ್ಟು’ ಕುರಿತು ವಿಷಯ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.