ADVERTISEMENT

ಜಿಲ್ಲೆಯಲ್ಲಿ ಗರ್ಭಪಾತ ಪ್ರಕರಣ ಹೆಚ್ಚಳ: ನಾಗಲಕ್ಷ್ಮೀಬಾಯಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2018, 15:25 IST
Last Updated 4 ಸೆಪ್ಟೆಂಬರ್ 2018, 15:25 IST
ಕೋಲಾರದಲ್ಲಿ ಮಂಗಳವಾರ ನಡೆದ ರಾಜ್ಯ ಮಹಿಳಾ ಆಯೋಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಮಾತನಾಡಿದರು.
ಕೋಲಾರದಲ್ಲಿ ಮಂಗಳವಾರ ನಡೆದ ರಾಜ್ಯ ಮಹಿಳಾ ಆಯೋಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಮಾತನಾಡಿದರು.   

ಕೋಲಾರ: ‘ಜಿಲ್ಲೆಯಲ್ಲಿ ಗರ್ಭಪಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿ ಮಂಗಳವಾರ ನಡೆದ ರಾಜ್ಯ ಮಹಿಳಾ ಆಯೋಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ನಿರಂತರವಾಗಿ ಗರ್ಭಪಾತ ಪ್ರಕರಣಗಳು ವರದಿಯಾಗುತ್ತಿದ್ದರೂ ಅಧಿಕಾರಿಗಳು ಏನು ಮಾಡುತ್ತಿದ್ದೀರಿ?’ ಎಂದು ಪ್ರಶ್ನಿಸಿದರು.

‘ಜನರಿಗೆ ಆರೋಗ್ಯ ಸಮಸ್ಯೆ ಎದುರಾದಾಗ ಮೊದಲು ಆಸ್ಪತ್ರೆಗೆ ಬರುತ್ತಾರೆ. ಕಾಯಿಲೆ ನಿಯಂತ್ರಣಕ್ಕೆ ಬೇಕಾದ ಚಿಕಿತ್ಸೆ ಕಲ್ಪಿಸುವುದು ಆರೋಗ್ಯ ಇಲಾಖೆ ಜವಾಬ್ದಾರಿ. ಇಲಾಖೆ ಅಧಿಕಾರಿಗಳು ನಿಯಮಿತವಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೆ ಜಿಲ್ಲೆಯಲ್ಲಿ 279 ಗರ್ಭಪಾತ ಪ್ರಕರಣಗಳು ವರದಿಯಾಗುತ್ತಿರಲಿಲ್ಲ. ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿ ಬಿಟ್ಟು ಹೊರ ಹೋಗಿ ಕೆಲಸ ಮಾಡಿ’ ಎಂದು ತಾಕೀತು ಮಾಡಿದರು.

ADVERTISEMENT

ವರದಿ ನೀಡಿದ್ದಾರೆ: ‘ಜಿಲ್ಲೆಯಲ್ಲಿ ಗರ್ಭಪಾತ ಪ್ರಕರಣಗಳು ಹೆಚ್ಚಿರುವುದಕ್ಕೆ ಕಾರಣವೇನು ಎಂಬ ಬಗ್ಗೆ ವರದಿ ನೀಡುವಂತೆ ವೈದ್ಯರಿಗೆ ತಿಳಿಸಲಾಗಿತ್ತು. ವೈದ್ಯರು ವಿವಿಧ ರೀತಿಯ ವರದಿ ನೀಡಿದ್ದಾರೆ. ಹೆರಿಗೆ ಆಗುವವರೆಗೂ ಆಹಾರ ಸೇವನೆ ಮತ್ತು ವಹಿಸಬೇಕಾದ ಜಾಗೃತೆ ಬಗ್ಗೆ ಅಂಗನವಾಡಿ ಕಾರ್ಯಕರ್ತೆರು ಹಾಗೂ ಆಶಾ ಕಾರ್ಯಕರ್ತೆಯರು ಗರ್ಭಿಣಿಯರಿಗೆ ಅರಿವು ಮೂಡಿಸುತ್ತಿದ್ದಾರೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‌ಕುಮಾರ್ ವಿವರಿಸಿದರು.

ಸಿಬ್ಬಂದಿ ಕೊರತೆ: ‘ಜಿಲ್ಲೆಯ ವಿದ್ಯಾರ್ಥಿನಿಲಯಗಳಲ್ಲಿ ಸಿಬ್ಬಂದಿ ಕೊರತೆಯಿದೆ. ಆದರೂ ಮಕ್ಕಳಿಗೆ ತೊಂದರೆಯಾಗದಂತೆ ಸೌಕರ್ಯ ಕಲ್ಪಿಸಿದ್ದೇವೆ. ಬಹುತೇಕ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಪ್ರತಿ ವಿದ್ಯಾರ್ಥಿನಿಲಯದಲ್ಲೂ ಭದ್ರತಾ ಸಿಬ್ಬಂದಿ ಇದ್ದಾರೆ’ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಎಚ್.ಎಸ್.ಸಿಂಧೂ ಮಾಹಿತಿ ನೀಡಿದರು.

‘ರಾಜ್ಯದ ಪ್ರತಿ ಜಿಲ್ಲೆಯಲ್ಲೂ ವಿದ್ಯಾರ್ಥಿನಿಲಯಗಳ ಪರಿಸ್ಥಿತಿ ಶೋಚನೀಯವಾಗಿದೆ. ಸಮಾಜ ಕಲ್ಯಾಣ ಮತ್ತು ಹಿಂದುಳಿದ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳ ಪರಿಸ್ಥಿತಿ ಹೇಳಲು ಬೇಸರವಾಗುತ್ತದೆ. ವಿಶೇಷವಾಗಿ ಹೆಣ್ಣು ಮಕ್ಕಳ ವಿದ್ಯಾರ್ಥಿನಿಲಯಗಳಲ್ಲಿ ಸಮಸ್ಯೆಗಳು ನಿರಂತರವಾಗಿರುತ್ತವೆ’ ಎಂದು ನಾಗಲಕ್ಷ್ಮೀಬಾಯಿ ಬೇಸರ ವ್ಯಕ್ತಪಡಿಸಿದರು.

ಸ್ಥಳಾಂತರಿಸಿ: ‘ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ವಿದ್ಯಾರ್ಥಿನಿಲಯಗಳಿಗೆ ಹೋಗಿ ಕಟ್ಟಡದ ವಸ್ತುಸ್ಥಿತಿ ಬಗ್ಗೆ ವರದಿ ನೀಡಬೇಕು. ಮಕ್ಕಳ ವಾಸಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿದ್ದರೆ ದುರಸ್ತಿ ಕಾಮಗಾರಿ ಪೂರ್ಣಗೊಳ್ಳುವವರೆಗೆ ಹಾಸ್ಟೆಲ್‌ಗಳನ್ನು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚಿಸಿದರು.

‘ಜಿಲ್ಲೆಯಲ್ಲಿ ದಾಖಲಾಗಿರುವ ವರದಕ್ಷಿಣೆ, ದೌರ್ಜನ್ಯ, ಶೋಷಣೆ, ಹಲ್ಲೆ ಪ್ರಕರಣಗಳ ಸಂಬಂಧ ಆರೋಪಪಟ್ಟಿ ಸಲ್ಲಿಸಿದ್ದು, ಕೆಲ ಪ್ರಕರಣಗಳನ್ನು ಠಾಣೆ ಹಂತದಲ್ಲೇ ಇತ್ಯರ್ಥಪಡಿಸಲಾಗಿದೆ. ಮತ್ತೆ ಕೆಲ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌ ವಿವರಿಸಿದರು.

‘ಜಿಲ್ಲೆಯಲ್ಲಿ 6 ಮಹಿಳಾ ಸಾಂತ್ವನ ಕೇಂದ್ರಗಳಿದ್ದು, ಒಂದು ಬಾಲಕಿಯರ ವಿದ್ಯಾರ್ಥಿನಿಲಯ ಕಾರ್ಯ ನಿರ್ವಹಿಸುತ್ತಿದೆ. ಈವರೆಗೆ 1,512 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 1,447 ಪ್ರಕರಣಗಳು ಇತ್ಯರ್ಥಗೊಂಡಿವೆ. 65 ಪ್ರಕರಣಗಳು ಬಾಕಿಯಿವೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸೌಮ್ಯ ಹೇಳಿದರು.

ಚುರುಕಾಗಿ ಕಾರ್ಯ ನಿರ್ವಹಿಸಿ: ‘ರಾಜ್ಯ ಅನೇಕ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಪರಿಹರಿಸಲು ಇಲಾಖೆಗಳಿಗೆ ನಿರ್ದೇಶನ ನೀಡಿದ್ದೇನೆ. ಈ ಜಿಲ್ಲೆಯಲ್ಲೂ ಸಮಸ್ಯೆಗಳಿದ್ದು, ಅಧಿಕಾರಿಗಳು ಚುರುಕಾಗಿ ಕಾರ್ಯ ನಿರ್ವಹಿಸಬೇಕು. ಯಾವುದೇ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು’ ಎಂದು ನಾಗಲಕ್ಷ್ಮೀಬಾಯಿ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್.ಲತಾಕುಮಾರಿ, ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಲೋಕೇಶ್‌ಕುಮಾರ್ ಹಾಜರಿದ್ದರು.

ಅಂಕಿ ಅಂಶ......
* 279 ಗರ್ಭಪಾತ ಪ್ರಕರಣಗಳು ನಡೆದಿವೆ
* 82 ವಿದ್ಯಾರ್ಥಿನಿಲಯಗಳು ಜಿಲ್ಲೆಯಲ್ಲಿವೆ
* ಶೇ 75ರಷ್ಟು ಸಿಬ್ಬಂದಿ ಕೊರತೆ
* 6 ಮಹಿಳಾ ಸಾಂತ್ವನ ಕೇಂದ್ರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.