ADVERTISEMENT

ಹಾಲು ಖರೀದಿ ದರ ಹೆಚ್ಚಳಕ್ಕೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 15:42 IST
Last Updated 2 ಫೆಬ್ರುವರಿ 2021, 15:42 IST

ಕೋಲಾರ: ‘ಒಕ್ಕೂಟವು ಈಗಾಗಲೇ ಹಾಲು ಖರೀದಿ ದರ ಹೆಚ್ಚಳ ಮಾಡಿದರು. ಮತ್ತಷ್ಟು ದರ ಹೆಚ್ಚಿಸುವಂತೆ ಸರ್ಕಾರಕ್ಕೆ ಸದ್ಯದಲ್ಲೇ ಪ್ರಸ್ತಾವ ಸಲ್ಲಿಸುತ್ತೇವೆ’ ಎಂದು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಭರವಸೆ ನೀಡಿದರು.

ತಾಲ್ಲೂಕಿನ ಉರಿಗಿಲಿ ಗ್ರಾಮದಲ್ಲಿ ಮಂಗಳವಾರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಮಂಗಳವಾರ ಬಿಎಂಸಿ ಘಟಕ ಉದ್ಘಾಟಿಸಿ ಮಾತನಾಡಿ, ‘ಹೈನೋದ್ಯಮವು ಜಿಲ್ಲೆಯ ರೈತರ ಬೆನ್ನೆಲುಬು. ಬಹುಪಾಲು ರೈತ ಕುಟುಂಬಗಳು ಜೀವನ ನಿರ್ವಹಣೆಗೆ ಹೈನುಗಾರಿಕೆ ಅವಲಂಬಿಸಿವೆ’ ಎಂದು ಹೇಳಿದರು.

‘ತಾಲ್ಲೂಕಿನಾದ್ಯಂತ ಹಂತ ಹಂತವಾಗಿ ಬಿಎಂಸಿ ಕೇಂದ್ರ ಸ್ಥಾಪಿಸುವ ಮೂಲಕ ಹಾಲು ಸಾಗಾಣಿಕೆ ಮಾಡಲಾಗುತ್ತದೆ. ಗುಣಮಟ್ಟದ ಹಾಲು ಸರಬರಾಜು ಮಾಡಿದರೆ ಮಾತ್ರ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಆದ ಕಾರಣ ರಾಸುಗಳ ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ’ ಎಂದು ಸಲಹೆ ನೀಡಿದರು.

ADVERTISEMENT

‘ರೈತರು ಒಕ್ಕೂಟದಿಂದ ಸಿಗುವ ತಾಂತ್ರಿಕ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಹೈನೋದ್ಯಮ ಕ್ಷೇತ್ರದಿಂದ ದೂರ ಸರಿಯಬಾರದು. ಗ್ರಾಮೀಣ ಭಾಗದಲ್ಲಿ ಹಾಲು ಸಂಘಗಳನ್ನು ಅಭಿವೃದ್ಧಿಪಡಿಸಬೇಕು. ಹಾಲು ಖರೀದಿ ದರ ಹೆಚ್ಚಳ ಮಾಡಿದ್ದು, ರೈತರು ಹಾಲು ಶೇಖರಣೆ ಮತ್ತು ಗುಣಮಟ್ಟಕ್ಕೆ ಒತ್ತು ನೀಡಬೇಕು’ ಎಂದು ಕಿವಿಮಾತು ಹೇಳಿದರು.

ಒಕ್ಕೂಟದ ಸವಲತ್ತುಗಳು ಹಾಲು ಉತ್ಪಾದಕರಿಗೆ ಸಕಾಲಕ್ಕೆ ತಲುಪಬೇಕು. ಬೇಸಿಗೆಯಲ್ಲಿ ರಾಸುಗಳಿಗೆ ಮೇವಿನ ಸಮಸ್ಯೆ ಎದುರಾಗದಂತೆ ಈಗಿನಿಂದಲೇ ಮೇವು ಬೆಳೆಯಲು ಆರಂಭಿಸಿ. ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ಇಲ್ಲದಿದ್ದರೆ ಹಾಲಿನ ಉತ್ಪಾದನೆ ಹೆಚ್ಚುತ್ತದೆ’ ಎಂದರು.

ವಂಚಿಸುತ್ತಿವೆ: ‘ಖಾಸಗಿ ಡೇರಿಗಳು ಹಾಲು ಉತ್ಪಾದಕರನ್ನು ವಂಚಿಸುತ್ತಿವೆ. ಆದ ಕಾರಣ ರೈತರು ಖಾಸಗಿ ಡೇರಿಗಳಿಗೆ ಹಾಲು ಹಾಕಬಾರದು. ಹಾಲು ಕಲಬೆರಕೆ ಮಾಡುವುದು ಆಹಾರ ಸುರಕ್ಷತಾ ಕಾಯ್ದೆ ಪ್ರಕಾರ ಅಪರಾಧ. ಹಾಲಿನ ಗುಣಮಟ್ಟದ ಜತೆಗೆ ಜೈವಿಕ ಗುಣಮಟ್ಟ ಕಾಪಾಡಬೇಕು’ ಎಂದು ಕೋಚಿಮುಲ್‌ ಶಿಬಿರ ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ ಹೇಳಿದರು.

ಜಿಲ್ಲಾ ಸಹಕಾರಿ ಒಕ್ಕೂಟದ ನಿರ್ದೇಶಕ ಎಸ್.ಆರ್.ರುದ್ರಸ್ವಾಮಿ ಮಾತನಾಡಿ, ಕೋಚಿಮುಲ್‌ ಶಿಬಿರ ವಿಸ್ತರಣಾಧಿಕಾರಿಗಳಾದ ವಿ.ರಾಜಬಾಬು, ನಾಗಪ್ಪ, ಅಣ್ಣಪ್ಪ, ಸಮೀರ್‌ಪಾಷಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.