
ಕೋಲಾರ: ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ ಡಿ.21 ರಿಂದ 24 ರವರೆಗೆ ನಡೆಯಲಿದ್ದು ಜಿಲ್ಲೆಯ 5 ವರ್ಷದೊಳಗಿನ 1,63,508 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಶ್ರೀನಿವಾಸ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿಯೊಬ್ಬರು 0–5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಎರಡು ಹನಿ ಪೋಲಿಯೊ ಲಸಿಕೆ ಹಾಕಿಸಬೇಕು. ಕಳೆದ ಬಾರಿ ಶೇ 103 ಸಾಧನೆ ಮಾಡಿದ್ದೆವು. ಈ ಬಾರಿಯೂ ಶೇ 100ರ ಗಡಿದಾಟುವ ವಿಶ್ವಾಸವಿದೆ ಎಂದರು.
ದೇಶವನ್ನು ಪೋಲಿಯೊ ಮುಕ್ತವನ್ನಾಗಿಸಲು 1997ರಲ್ಲಿ ಪಲ್ಸ್ ಪೋಲಿಯೊ ಯೋಜನೆ ಆರಂಭಿಸಲಾಯಿತು. ಕಳೆದ 12 ವರ್ಷಗಳಿಂದ ದೇಶ ಪೋಲಿಯೊ ಮುಕ್ತವಾಗಿದೆ. ಆದರೆ, ಪಕ್ಕದ ಕೆಲ ದೇಶಗಳಲ್ಲಿ ಆಗಾಗ್ಗೆ ಪೋಲಿಯೊ ಪತ್ತೆಯಾಗುತ್ತಿದೆ. ಈ ಮುನ್ನೆಚ್ಚರಿಕೆಯಿಂದ ಇಲ್ಲೂ ಲಸಿಕೆ ಹಾಕುವುದನ್ನು ಮುಂದುವರಿಸಲಾಗಿದೆ. ಅಂಗವೈಕಲ್ಯದಂಥ ತೊಂದರೆ ತಡೆಯಲು ಪೋಲಿಯೊ ಲಸಿಕೆಯನ್ನು ಮಕ್ಕಳಿಗೆ ಹಾಕಲಾಗುತ್ತದೆ ಎಂದು ವಿವರಿಸಿದರು.
ಬೂತ್‍ಗಳಲ್ಲಿ ಡಿ.21 ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ಪೋಲಿಯೊ ಲಸಿಕೆ ಹಾಕಲಾಗುತ್ತದೆ. ಡಿ.22, 23, 24 ರಂದು ಮೂರು ದಿನ ಪ್ರತಿ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಾಗುತ್ತದೆ ಎಂದರು.
ವಿವಿಧ ರಾಜ್ಯಗಳಿಂದ ಉದ್ಯೋಗ ಹುಡುಕಿ ಬಂದಂತಹ ಕಾರ್ಮಿಕ ಕುಟುಂಬ ಮಕ್ಕಳನ್ನೂ ಗುರುತಿಸಿ ಹಾಕಲಾಗುತ್ತದೆ. 738 ಬೂತ್‍ಗಳನ್ನು ಗುರುತಿಸಿದ್ದು, 37 ತಂಡಗಳನ್ನು ರಚಿಸಲಾಗಿದೆ. 3,064 ಲಸಿಕೆದಾರರನ್ನು ನೇಮಿಸಿದ್ದು, 164 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ನಗರಸಭೆ ಮತ್ತು ಇನ್ನಿತರೆ ಸ್ಥಳೀಯ ಸಂಸ್ಥೆಗಳಿಂದ ಪಲ್ಸ್ ಪೋಲಿಯೊ ಕಾರ್ಯಕ್ರಮದ ಕುರಿತು ಪ್ರಚಾರ ಮಾಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು, ಸ್ವಯಂ ಸೇವಕರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲೆಯಾದ್ಯಂತ ತಾಲ್ಲೂಕು ನೋಡಲ್ ಅಧಿಕಾರಿಗಳು ಮೇಲ್ವಿಚಾರಣೆ ಮಾಡಲಿದ್ದಾರೆ ಎಂದು ಹೇಳಿದರು.
ಆರ್‌ಸಿಎಚ್. ಮತ್ತು ರಾಷ್ಟ್ರೀಯ ಪಲ್ಸ್ ಪೋಲಿಯೋ ಜಿಲ್ಲಾ ನೋಡಲ್ ಅಧಿಕಾರಿ ಡಾ.ಚಾರಿಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.