ADVERTISEMENT

ಕೊರೊನಾ ಸೇನಾನಿಗಳು 2021- ಪ್ರಜಾವಾಣಿ ಗುರುತಿಸಿದ ಕೋಲಾರದ ಕಣ್ಮಣಿಗಳಿವರು

ಜೆ.ಆರ್.ಗಿರೀಶ್
Published 31 ಡಿಸೆಂಬರ್ 2020, 19:32 IST
Last Updated 31 ಡಿಸೆಂಬರ್ 2020, 19:32 IST
ಲಾಕ್‌ಡೌನ್‌ ವೇಳೆ ಕೋಲಾರದ ಮುಜಾಮಿಲ್‌ ಪಾಷಾ ಮನೆ ಮನೆಗೆ ದಿನಸಿ ವಿತರಿಸಿದ ಸಂದರ್ಭ
ಲಾಕ್‌ಡೌನ್‌ ವೇಳೆ ಕೋಲಾರದ ಮುಜಾಮಿಲ್‌ ಪಾಷಾ ಮನೆ ಮನೆಗೆ ದಿನಸಿ ವಿತರಿಸಿದ ಸಂದರ್ಭ   

ಮನೆಯ ಗೋಡೆ ಮೇಲೆ ತೂಗುತ್ತಿದ್ದ ಹಳೆಯ ಕ್ಯಾಲೆಂಡರ್‌ ಬದಲಾಗಿದೆ. ಅದರ ಸ್ಥಳದಲ್ಲಿ 2021ರ ರಂಗುರಂಗಿನ ಹೊಸ ಕ್ಯಾಲೆಂಡರ್‌ ಬಂದು ಕೂತಿದೆ. ಬದುಕಿನ ಬಂಡಿ ಎಳೆಯುವ ಅಂಕಿಗಳ ಮೇಲೆ ಬಣ್ಣ ಮೆತ್ತಿಕೊಂಡಿದೆ. ಹೊಸ ವರ್ಷದ ಮೊದಲ ದಿನ ಸುಮ್ಮನೆ ಕುಳಿತು ಹಿಂದಿನ ವರ್ಷದತ್ತ ಒಮ್ಮೆ ಕಣ್ಣೋಟ ಬೀರಿದರೆ ನೆನಪುಗಳ ದೊಡ್ಡ ಸಂತೆಯ ಬಾಗಿಲು ತೆರೆದುಕೊಳ್ಳುತ್ತದೆ. ಆ ಸಂತೆಯಲ್ಲಿ ಹುಡುಕಿದರೆ ನಲಿವಿಗಿಂತ ನೋವಿನ ಮೂಟೆಗಳೇ ಹೆಚ್ಚು ಸಿಗುತ್ತವೆ.

ಎಲ್ಲರೂ ಕೋವಿಡ್ ಸಂಕಷ್ಟದ ಕುಲುಮೆಯಲ್ಲಿ ಬೇಯುತ್ತಿದ್ದೇವೆ. ಕೊರೊನಾ ತಂದಿತ್ತ ಸಂಕಷ್ಟದ ಹೊರೆಯನ್ನು ತುಸು ಇಳಿಸಿಕೊಂಡು ಹೊಸ ಭರವಸೆಯ ಹೆಜ್ಜೆಗಳನ್ನಿಡುತ್ತಾ ನೂತನ ವರ್ಷವನ್ನು ಬರಮಾಡಿಕೊಳ್ಳುವ ಹೊತ್ತು ಇದಾಗಿದೆ. ಈ ಸುಸಮಯವು ಸಕಾರಾತ್ಮಕ ಆಲೋಚನೆಗಳಿಗೆ ಸ್ಫೂರ್ತಿಯಾಗಲಿ ಎಂಬ ದೃಢ ಸಂಕಲ್ಪದೊಟ್ಟಿಗೆ ‘ಪ್ರಜಾವಾಣಿ’ ದಿಟ್ಟಹೆಜ್ಜೆ ಇಟ್ಟಿದೆ.

ಈ ಸಂಕಷ್ಟದಲ್ಲಿ ತಮ್ಮ ಅವಿರತ ಶ್ರಮದ ಮೂಲಕ ಜನರಿಗೆ ನೆರವಾದ ಸಾಧಕರನ್ನು ಪರಿಚಯಿಸುವ ಕೆಲಸ ಮಾಡಿದ್ದೇವೆ. ಹೊಸ ವರ್ಷದ ಹಾದಿಯಲ್ಲಿ ಇನ್ನಷ್ಟು ಮಂದಿಗೆ ಇದು ಪ್ರೇರಣೆಯಾಗಲಿ ಎಂಬುದೇ ನಮ್ಮ ಆಶಯ ಹಾಗೂ ಹಂಬಲ.

ADVERTISEMENT

ಪ್ರಚಾರಕ್ಕೆ ಹಂಬಲಿಸಿದೇ ಸದ್ದಿಲ್ಲದೆ ಕೆಲಸ ಮಾಡುತ್ತಿರುವ ಇನ್ನೂ ಅನೇಕರೂ ನಮ್ಮ ನಡುವಿದ್ದಾರೆ. ಇಂತಹವರ ಸಂತತಿ ನೂರ್ಮಡಿಯಾಗಲಿ. ಇವರ ಅರ್ಪಣಾ ಮನೋಭಾವ ಹೊಸ ವರ್ಷದ ಹೊಸ್ತಿಲಲ್ಲಿ ಎಲ್ಲರಿಗೂ ಮಾದರಿಯಾಗಲಿ ಎಂಬ ಸದಾಶಯ ನಮ್ಮದು...

1. ಹಸಿದವರ ಬದುಕಿಗೆ ಆಸರೆಯಾದ ಸಹೋದರರು

ತಜ್ಮುಲ್ ಪಾಷಾ

ಕೋವಿಡ್‌ ಹಿನ್ನೆಲೆಯಲ್ಲಿ ಜಾರಿಯಾದ ಲಾಕ್‌ಡೌನ್‌ನಿಂದ ತತ್ತರಿಸಿದ ಜಿಲ್ಲೆಯ ಬಡ ಜನರ ಕಷ್ಟಕ್ಕೆ ಮಿಡಿದ ಸಹೋದರರಿಬ್ಬರು ಮಾನವೀಯತೆ ಮೆರೆದರು.

ಜಿಲ್ಲಾ ಕೇಂದ್ರದ ಹೌಸಿಂಗ್‌ ಬೋರ್ಡ್‌ ಬಡಾವಣೆ ನಿವಾಸಿಗಳಾದ ತಜ್ಮುಲ್ ಪಾಷಾ ಮತ್ತು ಅವರ ಸಹೋದರ ಮುಜಾಮಿಲ್‌ ಪಾಷಾ ಸ್ವಂತ ನಿವೇಶನ ಮಾರಿ ಊರ ಜನರ ಹಿತ ಕಾಯ್ದರು. ನಿವೇಶನ ಮಾರಾಟ ಮಾಡಿ ಬಂದ ₹ 25 ಲಕ್ಷವನ್ನು ಲಾಕ್‌ಡೌನ್‌ನಿಂದ ಬಾಧಿತರಾಗಿದ್ದ ಬಡ ಜನರ ನೆರವಿಗೆ ಮೀಸಲಿಟ್ಟರು.

4ನೇ ತರಗತಿ ಓದಿರುವ ತಜ್ಮುಲ್‌ ಸಹೋದರರು ಊರು ಕೇರಿ ಸುತ್ತಿ ಹಸಿದ ಜನರ ಕಣ್ಣೀರು ಒರೆಸಿದರು. ಕಷ್ಟವೆಂದು ಕರೆ ಮಾಡಿದ ಜನರ ಮನೆ ಬಾಗಿಲಿಗೆ ದಿನಸಿ ಪದಾರ್ಥ ತಲುಪಿಸಿದರು. 15 ದಿನಕ್ಕೆ ಆಗುವಷ್ಟು ಅಕ್ಕಿ, ಮೈದಾ, ತೊಗರಿ ಬೇಳೆ, ಸಕ್ಕರೆ, ಉಪ್ಪು, ಕಾರದ ಪುಡಿ, ಟೀ ಪುಡಿ, ಅರಿಶಿನ ಪುಡಿ, ಅಡುಗೆ ಎಣ್ಣೆಯನ್ನು ಚೀಲದಲ್ಲಿ ತುಂಬಿಸಿ ಮನೆ ಮನೆಗೆ ವಿತರಿಸಿದರು.

ಅಲ್ಲದೇ, ಮನೆಯ ಪಕ್ಕದಲ್ಲೇ ಶಾಮಿಯಾನ ಹಾಕಿ ತಿಂಗಳುಗಟ್ಟಲೇ ಅನ್ನ ದಾಸೋಹ ನಡೆಸಿದರು. ಅಡುಗೆ ಮಾಡಿಕೊಳ್ಳುವ ವ್ಯವಸ್ಥೆಯಿಲ್ಲದ ರಸ್ತೆ ಬದಿಯ ಭಿಕ್ಷುಕರು ಹಾಗೂ ನಿರ್ಗತಿಕರಿಗೆ ಅವರಿದ್ದ ಸ್ಥಳಕ್ಕೆ ಹೋಗಿ ದಿನದ ಮೂರೂ ಹೊತ್ತು ಆಹಾರದ ಪೊಟ್ಟಣ ಹಂಚಿದರು.

ಬಾಲ್ಯದಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು ಅಜ್ಜಿಯ ಆಸರೆಯಲ್ಲಿ ಬೆಳೆದ ಈ ಸಹೋದರರು ಆರಂಭದಲ್ಲಿ ಬಾಳೆ ಹಣ್ಣು ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡರು. ಬಾಲ್ಯದಲ್ಲಿ ತುತ್ತು ಅನ್ನಕ್ಕೂ ಕಷ್ಟಪಟ್ಟಿದ್ದ ಸಹೋದರರು ತಮ್ಮ ಬವಣೆಯ ಬದುಕು ಬೇರೆಯವರಿಗೆ ಬರಬಾರದೆಂದು ಗೆಳೆಯರ ಜತೆಗೂಡಿ ಲಾಕ್‌ಡೌನ್ ಸಂದರ್ಭದಲ್ಲಿ ಹಸಿದವರ ಬದುಕಿಗೆ ಆಸರೆಯಾದರು.

ತಜ್ಮುಲ್ ಪಾಷಾ ಸಹೋದರರು ಬಡ ಜನರಿಗೆ ಹಂಚುವ ಉದ್ದೇಶಕ್ಕೆ ಚೀಲದಲ್ಲಿ ತುಂಬಿಸಿಟ್ಟಿದ್ದ ದಿನಸಿ ಪದಾರ್ಥಗಳು

2. ಅಮ್ಮನ ಕನವರಿಕೆಯಲ್ಲಿ ನಿದ್ದೆಗೆ ಜಾರುವ ಮಗಳು

ಡಾ.ಎಂ.ಚಾರಿಣಿ

ಕೋವಿಡ್‌ ಸಂಬಂಧಿತ ಕಾರ್ಯದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಚಾರಿಣಿ ಅವರದು ದಣಿವರಿಯದ ದುಡಿಮೆ. ಕಂಟೈನ್‌ಮೆಂಟ್‌ ವಲಯ ಹಾಗೂ ಕೋವಿಡ್‌ ಆಸ್ಪತ್ರೆಗೆ ಭೇಟಿ, ದಿನಕ್ಕೆ ಮೂರ್ನಾಲ್ಕು ಸಭೆಯಲ್ಲಿ ಭಾಗಿ, ಸೋಂಕಿತರ ಅಳಲು ಆಲಿಸುವುದು, ವಿಡಿಯೋ ಸಂವಾದ... ಹೀಗೆ ಕೋವಿಡ್‌-ಗೆ ಸಂಬಂಧಿಸಿದ ಕಾರ್ಯ ಚಟುವಟಿಕೆಗಳಲ್ಲೇ ಅವರ ದಿನಚರಿ ಸಾಗಿದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕು ಗಂಭೀರತೆ ಪಡೆದ ಸಂದರ್ಭದಿಂದ ಹಗಲು ರಾತ್ರಿ ಎನ್ನದೆ ಕೆಲಸದಲ್ಲಿ ತೊಡಗಿಸಿಕೊಂಡಿರುವ ಇವರ ಕರ್ತವ್ಯ ಪ್ರಜ್ಞೆ ವೈದ್ಯ ಸಮುದಾಯಕ್ಕೆ ಮಾದರಿಯಾಗಿದೆ. ಚಾರಿಣಿ ಅವರಿಗೆ ಪತಿ ರಘು ಹಾಗೂ 10 ವರ್ಷದ ಮಗಳು ಅದಿತಿಯೇ ಪ್ರಪಂಚ. ಮಾರ್ಚ್‌ ಅಂತ್ಯದವರೆಗೆ ಮನೆ, ಮಗಳು, ಕುಟುಂಬ ನಿರ್ವಹಣೆಯಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ ಇವರಿಗೆ ಈಗ ಮನೆಗೆ ಹೋಗಲು 2 ತಾಸಿನ ಬಿಡುವಿಲ್ಲ.

ಕಾರ್ಯ ಒತ್ತಡದ ನಡುವೆ ಆಗೊಮ್ಮೆ ಈಗೊಮ್ಮೆ ಬಿಡುವು ಮಾಡಿಕೊಂಡು ಮನೆ ಬಾಗಿಲು ಪ್ರವೇಶಿಸುವುದೇ ತಡ ಮೊಬೈಲ್‌ ರಿಂಗಣ. ಮನೆ ಬಳಿ ಹೋದರೂ ಕರ್ತವ್ಯದ ಕರೆಯ ಕಾರಣಕ್ಕೆ ಒಳ ಹೋಗದೆ ಹಿಂದಿರುಗಿದ ಪ್ರಸಂಗಗಳು ಸಾಕಷ್ಟು.

ಮಗಳು ನಿದ್ದೆಯಿಂದ ಏಳುವ ಮುನ್ನವೇ ಮನೆಯಿಂದ ಹೊರಡುವ ಇವರು ಕೆಲಸ ಮುಗಿಸಿ ಮತ್ತೆ ಮನೆ ಸೇರುವಷ್ಟರಲ್ಲಿ ರಾತ್ರಿ 11 ಗಂಟೆ ಆಗಿರುತ್ತದೆ. ಮಗಳು ಅದಿತಿ ಅಮ್ಮನ ಕನವರಿಕೆಯಲ್ಲೇ ಊಟ ಮಾಡಿ ನಿದ್ದೆಗೆ ಜಾರುವುದು ಸಾಮಾನ್ಯವಾಗಿದೆ. ಚಾರಿಣಿಯವರ ಕಾರ್ಯ ಒತ್ತಡ ಅರಿತಿರುವ ಜಿಲ್ಲಾಡಳಿತವು ಅವರ ಮನೆಗೆ ಅಡುಗೆ ಸಿಬ್ಬಂದಿಯೊಬ್ಬರನ್ನು ನಿಯೋಜಿಸಿದೆ.

ಕುಟುಂಬ ಸದಸ್ಯರೊಂದಿಗೆ ಡಾ.ಎಂ.ಚಾರಿಣಿ

ಮಗಳು ನಿತ್ಯವೂ ಕೇಳುವ, ‘ಅಮ್ಮ ಬೇಗ ಮನೆಗೆ ಬರುತ್ತಿಯಾ’ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಲೇ ಚಾರಿಣಿ ಅವರು ಮಗಳ ಕೈಯಿಂದ ತಪ್ಪಿಸಿಕೊಂಡು ಕಾರು ಹತ್ತಿ ಕೆಲಸದತ್ತ ಮುಖ ಮಾಡುತ್ತಾರೆ. ಕೊರೊನಾ ಸೋಂಕು ತಗುಲಿ ಗುಣಮುಖರಾಗಿರುವ ಚಾರಿಣಿ ಅವರಿಗೆ ಕಚೇರಿಯೇ ಮನೆಯಾಗಿದೆ.

3. ಕೊರೊನಾ ಸೋಂಕಿತರ ಸಾಗಿಸಿದ ಸಾರಥಿ

ಜಿಲ್ಲೆಯಲ್ಲೇ ಮೊದಲ ಬಾರಿಗೆ ಮುಳಬಾಗಿಲು ತಾಲ್ಲೂಕಿನಲ್ಲಿ ಮೇ 12ರಂದು ಪತ್ತೆಯಾದ ಕೊರೊನಾ ಸೋಂಕಿತರನ್ನು ಸ್ಥಳಾಂತರಿಸಿರುವ ಹೆಗ್ಗಳಿಕೆ ಆಂಬುಲೆನ್ಸ್‌ ಚಾಲಕ ಲಕ್ಷ್ಮಿನಾರಾಯಣ ಅವರದು.

ಮುಳಬಾಗಿಲು ತಾಲ್ಲೂಕಿನ ಮುಡಿಯನೂರು ಗ್ರಾಮದಲಕ್ಷ್ಮಿನಾರಾಯಣ ಆರೋಗ್ಯ ಇಲಾಖೆಯಲ್ಲಿ 12 ವರ್ಷಗಳಿಂದ ಆಂಬುಲೆನ್ಸ್‌ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೀವ ಭಯದ ನಡುವೆಯೂ ಎದೆಗುಂದದೆ ಕೆಲಸ ಮಾಡಿರುವ ಇವರು ಈವರೆಗೆ 400ಕ್ಕೂ ಹೆಚ್ಚು ಸೋಂಕಿತರನ್ನು ಕೋವಿಡ್‌ ಆಸ್ಪತ್ರೆಗೆ ಕರೆತಂದಿದ್ದಾರೆ.

ಆಂಬುಲೆನ್ಸ್‌ ಚಾಲಕ ಲಕ್ಷ್ಮಿನಾರಾಯಣ

ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ ಕಾರಣಕ್ಕೆ ಕುಟುಂಬ ಸದಸ್ಯರಿಂದ ದೂರ ಉಳಿದು ಮನೆಗೂ ಹೋಗದೆ ಆಂಬುಲೆನ್ಸ್‌ನಲ್ಲೇ ಕಳೆದ ದಿನಗಳಿಗೆ ಲೆಕ್ಕವಿಲ್ಲ. ಪತ್ನಿ ಮತ್ತು ಮಕ್ಕಳನ್ನು ದೂರದಿಂದಲೇ ಮಾತನಾಡಿಸಿ ಕರ್ತವ್ಯಕ್ಕೆ ಹಿಂದಿರುಗಿದ ಇವರ ಸೇವೆ ನಿಜಕ್ಕೂ ಅನುಕರಣೀಯ.

‘ಕೊರೊನಾ ಸೋಂಕಿತರನ್ನು ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲು ಮೊದಲಿಗೆ ಭಯವಾಗುತ್ತಿತ್ತು. ಪತ್ನಿ ಮತ್ತು ಮಕ್ಕಳು ಸಹ ಆತಂಕಗೊಂಡಿದ್ದರು. ಆದರೆ, ಆರೋಗ್ಯ ಇಲಾಖೆ ಸಿಬ್ಬಂದಿಯಾಗಿ ನಾನೇ ಕೊರೊನಾ ಸೋಂಕಿತರನ್ನು ಕರೆದೊಯ್ಯಲು ಹಿಂದೇಟು ಹಾಕಿದರೆ ಜನರ ಪರಿಸ್ಥಿತಿ ಏನೆಂದು ಯೋಚಿಸಿ ಧೈರ್ಯದಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ’ ಎನ್ನುತ್ತಾರೆ ಲಕ್ಷ್ಮಿನಾರಾಯಣ.

‘ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣ ವರದಿಯಾದ ನಂತರ 3 ಬಾರಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದೇನೆ. ದೇವರ ದಯದಿಂದ 3 ಬಾರಿಯೂ ಫಲಿತಾಂಶ ನೆಗೆಟಿವ್‌ ಬಂದಿದೆ. ದೇವರು ದೊಡ್ಡವನು. ಸದ್ಯ ಈವರೆಗೆ ಯಾವುದೇ ಸಮಸ್ಯೆಯಾಗಿಲ್ಲ’ ಎಂದರು.

4. ಶವ ಸಂಸ್ಕಾರಕ್ಕೆ ಹೆಗಲು ಕೊಟ್ಟರು

ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆಗೆ, ಶವ ಸಾಗಣೆಗೆ ಹಾಗೂ ಶವ ಸಂಸ್ಕಾರಕ್ಕೆ ಅಂಜಿಕೆಯಿಲ್ಲದೆ ಹೆಗಲು ಕೊಟ್ಟವರು ಮುಜಿಬ್‌ ಮತ್ತು ಮುನೇಗೌಡ.

ಮುನೇಗೌಡ.

ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಡಿ ಗ್ರೂಪ್‌ ನೌಕರರಾಗಿರುವ ಈ ಇಬ್ಬರು ಶವಾಗಾರ ಮತ್ತು ಶವ ಸಾಗಣೆ ವಾಹನದ ಮೇಲ್ವಿಚಾರಣೆಯ ಕಾರ್ಯ ನಿರ್ವಹಿಸುತ್ತಾರೆ. ಕೊರೊನಾ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಕುಟುಂಬದವರಿಗೆ ಅವಕಾಶವಿಲ್ಲದ ಸಂದರ್ಭದಲ್ಲಿ ಇವರು ಮೃತರ ಬಂಧುವಾಗಿ ಅಂತ್ಯಕ್ರಿಯೆ ನಡೆಸಿದರು. ಜೀವವನ್ನೇ ಲೆಕ್ಕಿಸದೆ ಇವರು ಮಾಡಿದ ಸೇವಾ ಕಾರ್ಯ ನಿಜಕ್ಕೂ ಅನುಕರಣೀಯ.

ಜಿಲ್ಲೆಯಲ್ಲಿ ಈವರೆಗೆ 179 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಈ ಪೈಕಿ 60ಕ್ಕೂ ಹೆಚ್ಚು ಮಂದಿಯ ಶವ ಸಂಸ್ಕಾರವನ್ನು ಮುಜಿಬ್‌ ಮತ್ತು ಮುನೇಗೌಡ ಮುಂದೆ ನಿಂತು ಮಾಡಿದ್ದಾರೆ.

‘ಯಾವುದೇ ಶವಗಳಾದರೂ ಪರವಾಗಿಲ್ಲ, ಕೊರೊನಾ ಸೋಂಕಿತರ ಶವ ಸಂಸ್ಕಾರಕ್ಕೆ ಮಾತ್ರ ಹೋಗಬೇಡಿ ಎಂದು ಕುಟುಂಬ ಸದಸ್ಯರು ಆತಂಕದಿಂದ ಹೇಳುತ್ತಿದ್ದರು. ಆದರೆ, ಈ ಸಂದರ್ಭದಲ್ಲೇ ನಮ್ಮ ಸೇವೆ ಹೆಚ್ಚು ಅಗತ್ಯವೆಂದು ಹೇಳಿ ಕುಟುಂಬ ಸದಸ್ಯರನ್ನು ಸಂತೈಸಿದೆವು’ ಎಂದು ಮುಜಿಬ್‌ ಮತ್ತು ಮುನೇಗೌಡ ತಿಳಿಸಿದರು.

‘ಮನೆಯಲ್ಲಿ ಚಿಕ್ಕ ಮಕ್ಕಳಿದ್ದಾರೆ. ಕುಟುಂಬ ಸದಸ್ಯರ ಸುರಕ್ಷತೆಯೂ ಮುಖ್ಯ. ಮೊದಲು ಮೃತ ಸೋಂಕಿತರ ಶವದ ಬಳಿ ಹೋಗಲು ಭಯವಾಗುತ್ತಿತ್ತು. ಪಿಪಿಇ ಕಿಟ್‌ ಧರಿಸಿ ಅಂತ್ಯಕ್ರಿಯೆ ನಡೆಸಿದೆವು. 10 ಬಾರಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದು, ಪ್ರತಿ ಬಾರಿಯೂ ನೆಗೆಟಿವ್‌ ವರದಿ ಬಂದಿದೆ’ ಎಂದು ನಿಟ್ಟುಸಿರು ಬಿಟ್ಟರು.

ಶವ ಸಾಗಣೆ ವಾಹನ ಸ್ವಚ್ಛಗೊಳಿಸುತ್ತಿರುವ ಮುಜಿಬ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.