ಬಂಗಾರಪೇಟೆ: ತಾಲ್ಲೂಕಿನಾದ್ಯಂತ ನಿರ್ಮಾಣಗೊಂಡಿರುವ ರೈಲ್ವೆ ಕೆಳ ಸೇತುವೆಗಳು ಪ್ರತಿವರ್ಷ ಮುಂಗಾರು ಮಳೆ ಪ್ರಾರಂಭವಾದರೆ ಕೆರೆ, ಕುಂಟೆಗಳಾಗಿ ಮಾರ್ಪಾಡು ಆಗುತ್ತಿವೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದರೂ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪ್ರತಿ ಮುಂಗಾರು ಮಳೆ ಆರಂಭವಾದರೆ ಗಂಗಮ್ಮನಪಾಳ್ಯ, ಕುಂಬಾರಪಾಳ್ಯ, ಚಿಕ್ಕ ಅಂಕಂಡಹಳ್ಳಿ, ದೊಡ್ಡೇರಿ, ಸಕ್ಕನಹಳ್ಳಿ ತಿಮ್ಮಾಪುರ, ಚಿನ್ನಕೋಟೆ, ಇಂದಿರಾನಗರ, ಹೋಸಕೋಟೆ, ದೊಡ್ಡಹಸಾಳ, ದೊಡ್ಡಹಸಾಲ ಬಾವರಹಳ್ಳಿ, ಬೀರಂಡಹಳ್ಳಿ ಗ್ರಾಮಗಳಿಗೆ ಸಂಪರ್ಕ ರಸ್ತೆಗಳಲ್ಲಿ ರೈಲ್ವೆ ಕ್ರಾಸಿಂಗ್ ಸಮಸ್ಯೆ ತಪ್ಪಿಸಲು ನಿರ್ಮಾಣ ಮಾಡಿರುವ ರೈಲ್ವೆ ಕೆಳ ಸೇತುವೆಗಳು ಜನಸಾಮಾನ್ಯರ ಪಾಲಿಗೆ ಮೃತ್ಯು ಕೂಪಗಳಾಗಿವೆ.
ಮಳೆಗಾಲದಲ್ಲಿ ದ್ವಿಚಕ್ರ ವಾಹನ, ಲಾರಿ, ಟೆಂಪೊ, ಕಾರು ಯಾವುದು ಕೂಡ ಸಂಚರಿಸಲು ಸಾಧ್ಯವಾಗುವುದಿಲ್ಲ. ಮತ್ತು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜುಗಳಿಗೆ ತೆರಳಲು ಹಾಗೂ ರೈತರು ತರಕಾರಿ ಮಾರುಕಟ್ಟೆಗೆ ಸಾಗಣೆ ಮಾಡಲು ಸಾಧ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ರೈಲ್ವೆ ಕೆಳ ಸೇತುವೆಗಳಿಂದ ಆಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ ಎನ್ನುತ್ತಾರೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಉಪಾಧ್ಯಕ್ಷ ಕೆ.ನಾರಾಯಣಗೌಡ.
ಅವೈಜ್ಞಾನಿಕ ಕೆಳಸೇತುವೆ ಸರಿಪಡಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ ಎಂದು ಮಗರಲ್ ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ಪ್ರತಿವರ್ಷ ಮಳೆಗಾಲದಲ್ಲಿ ಸಮಸ್ಯೆಯಾಗುತ್ತಿದ್ದರೂ ರೈಲ್ವೆ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ ಎಂದು ದಲಿತ ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್ ದೂರಿದ್ದಾರೆ.
ಮಳೆನೀರು ಸಂಗ್ರಹವಾಗದಂತೆ ಹೊರ ಹೋಗಲು ವ್ಯವಸ್ಥೆ ಮಾಡಬೇಕು ಎಂದು ರೂಪಾ ತಿಮ್ಮಾಪುರ ಒತ್ತಾಯಿಸಿದ್ದಾರೆ.
ರೈಲ್ವೆ ಕೆಳ ಸೇತುವೆ ನಿರ್ವಹಣೆ ಮಾಡುತ್ತಿಲ್ಲ. ಗಿಡ ಗಂಟಿ ಬೆಳೆದಿದ್ದು ಮತ್ತು ಸ್ವಚ್ಛತೆ ಮರಿಚೀಕೆಯಾಗಿದೆ. ಸೊಳ್ಳೆಗಳ ಹಾಗೂ ವಿಷ ಜೀವಿಗಳ ಆವಾಸ ಸ್ಥಾನವಾಗಿದೆ ಎಂದು ಕೊತ್ತೂರು ಗ್ರಾಮ ಪಂಚಾಯಿತಿ ಸದಸ್ಯ ಚಲಪತಿ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.