ADVERTISEMENT

ಕೋಲಾರ ಮಹಿಳೆಯಲ್ಲಿ ವಿಶೇಷ ರಕ್ತದ ಗುಂಪು ಪತ್ತೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 0:16 IST
Last Updated 31 ಜುಲೈ 2025, 0:16 IST
ಕೋಲಾರದ ಆರ್.ಎಲ್‌.ಜಾಲಪ್ಪ ನಾರಾಯಣ ಹಾರ್ಟ್‌ ಸೆಂಟರ್‌
ಕೋಲಾರದ ಆರ್.ಎಲ್‌.ಜಾಲಪ್ಪ ನಾರಾಯಣ ಹಾರ್ಟ್‌ ಸೆಂಟರ್‌   

ಕೋಲಾರ: ಶ್ರೀನಿವಾಸಪುರ ತಾಲ್ಲೂಕಿನ 38 ವರ್ಷ ವಯಸ್ಸಿನ ಮಹಿಳೆ ವಿಶ್ವದಲ್ಲೇ ವಿಶೇಷ ಹಾಗೂ ಅಪರೂಪದ ರಕ್ತದ ಗುಂಪು ಹೊಂದಿದ್ದಾರೆ. 

ಕಳೆದ ವರ್ಷ ಈ ಮಹಿಳೆ ನಗರ ಹೊರವಲಯದ ಟಮಕದಲ್ಲಿರುವ ಆರ್.ಎಲ್‌.ಜಾಲಪ್ಪ ನಾರಾಯಣ ಹಾರ್ಟ್‌ ಸೆಂಟರ್‌ನಲ್ಲಿ ಹೃದಯ ಸಂಬಂಧಿ ಚಿಕಿತ್ಸೆಗೆಂದು ದಾಖಲಾಗಿದ್ದರು.

ಆ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಗೆ ಮುನ್ನ ‌ಡಾ.ಮುರಳಿ ಬಾಬು ಅವರು ಮಹಿಳೆಯ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಪಕ್ಕದಲ್ಲೇ ಇರುವ ಜಾಲಪ್ಪ ಆಸ್ಪತ್ರೆಗೆ ಕಳಿಸಿದ್ದರು. ಇಲ್ಲಿನ ರಕ್ತನಿಧಿಯಲ್ಲಿ (ಬ್ಲಡ್‌ ಬ್ಯಾಂಕ್‌) ಪರೀಕ್ಷಿಸಿದಾಗ ಆ ಮಾದರಿ ರಕ್ತದ ಹೊಂದಾಣಿಕೆ ಕಷ್ಟವಾಯಿತು.

ADVERTISEMENT

ಹೀಗಾಗಿ, ರಕ್ತನಿಧಿಯ ತಜ್ಞರು ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿನ ಟಿಟಿಕೆ ರಕ್ತಕೇಂದ್ರಕ್ಕೆ ರವಾನಿಸಿದ್ದರು. ನಂತರ ಆ ಕೇಂದ್ರದವರು ಇಂಗ್ಲೆಂಡ್‌ನ ಇಂಟರ್‌ನ್ಯಾಷನಲ್‌ ಬ್ಲಡ್‌ ಗ್ರೂಪ್‌ ರೆಫೆರೆನ್ಸ್‌ ಲ್ಯಾಬೋರೇಟರಿಗೆ (ಐಬಿಜಿಆರ್‌ಎಲ್) ಕಳಿಸಿಕೊಟ್ಟಿದ್ದರು. ಅಲ್ಲದೇ, ಆ ಮಹಿಳೆಯ ಕುಟುಂಬದ 20 ಸದಸ್ಯರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಲಾಗಿತ್ತು ಎಂದು ತಿಳಿದು ಬಂದಿದೆ.

ರಕ್ತದ ಗುಂಪಿಗೆ ಸಿಆರ್‌ಐಬಿ ಹೆಸರು

ಹಲವಾರು ಪರೀಕ್ಷೆ ಬಳಿಕ ಮಹಿಳೆ ರಕ್ತ ವಿಶ್ವದಲ್ಲೇ ವಿಶೇಷ ಹಾಗೂ ಅಪರೂಪ ಮಾದರಿ ಎಂದು ತಿಳಿದು ಬಂದಿತ್ತು. ಅದಕ್ಕೆ ‘ಸಿಆರ್‌ಐಬಿ’ ಎಂದು ಹೆಸರಿಸಿದ್ದಾರೆ. ರಕ್ತದ ಗುಂಪಿನ ವ್ಯವಸ್ಥೆ ಕ್ರೋಮರ್‌–’ಸಿಆರ್‌’ ಎಂದು ರಕ್ತ ಕಳಿಸಿದ ಮೂಲ ಭಾರತದ ಬೆಂಗಳೂರಿನಲ್ಲಿ ಆಗಿದ್ದರಿಂದ ಅದಕ್ಕೆ ‘ಐಬಿ’(ಇಂಡಿಯಾ–ಬೆಂಗಳೂರು) ಎಂದು ಸೇರಿಸಿ ‘ಸಿಆರ್‌ಐಬಿ’ ಎಂಬ ಹೆಸರು ಇಟ್ಟಿದ್ದಾರೆ. ಜೂನ್‌ನಲ್ಲಿ ಇಟಲಿಯ ಮಿಲಾನ್‌ನಲ್ಲಿ ನಡೆದ 35ನೇ ಇಂಟರ್‌ನ್ಯಾಷನಲ್‌ ಸೊಸೈಟಿ ಆಫ್‌ ಬ್ಲಡ್‌ ಟ್ರಾನ್ಸ್‌ಫ್ಯೂಷನ್‌ (ಐಎಸ್‌ಬಿಟಿ) 35ನೇ ಪಾದೇಶಿಕ ಸಮಾವೇಶದಲ್ಲಿ ಈ ವಿಷಯ ಘೋಷಣೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.