ADVERTISEMENT

ನೆರೆ ಸಂತ್ರಸ್ತರಿಗೆ ಸದ್ಯದಲ್ಲೇ ಪರಿಹಾರ

ವಿಪಕ್ಷಗಳಿಗೆ ಜನರೇ ಉತ್ತರ ಕೊಡುತ್ತಾರೆ: ಸಂಸದ ಮುನಿಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 15:42 IST
Last Updated 2 ಅಕ್ಟೋಬರ್ 2019, 15:42 IST

ಕೋಲಾರ: ‘ರಾಜ್ಯದ ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರವು ಸದ್ಯದಲ್ಲೇ ಪರಿಹಾರ ನೀಡಲಿದ್ದು, ಸೂಕ್ತ ಮಾಹಿತಿಯಿಲ್ಲದೆ ರಾಜಕೀಯ ದುರುದ್ದೇಶಕ್ಕೆ ಸುಳ್ಳು ಆರೋಪ ಮಾಡುವ ವಿಪಕ್ಷಗಳ ಮುಖಂಡರಿಗೆ ಜನರೇ ಉತ್ತರ ಕೊಡುತ್ತಾರೆ’ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಉತ್ತರ ಕರ್ನಾಟಕದ ಪ್ರವಾಹಪೀಡಿತ ಜಿಲ್ಲೆಗೆ ರಾಜ್ಯ ಸರ್ಕಾರ ಈಗಾಗಲೇ ತಲಾ ₹ 50 ಕೋಟಿ ಪರಿಹಾರ ನೀಡಿದೆ. ಕೇಂದ್ರದಿಂದ  3 ದಿನದೊಳಗೆ ಪರಿಹಾರ ಹಣ ಬಿಡುಗಡೆಯಾಗಲಿದೆ’ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವರು ಪ್ರವಾಹಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಬಳಿಯೂ ಮಾಹಿತಿ ಇದೆ. ಕೇಂದ್ರದವರು ಸಮೀಕ್ಷೆ ನಡೆಸಿ, ಪಡೆದಿರುವ ವರದಿ ಆಧರಿಸಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲಾಗುತ್ತದೆ’ ಎಂದು ವಿವರಿಸಿದರು.

ADVERTISEMENT

‘ಪಕ್ಷವು ರಾಜ್ಯದ ಜನರನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಪಕ್ಷದ 25 ಸಂಸದರೂ ಒಗ್ಗಟ್ಟಾಗಿದ್ದೇವೆ. ರಾಜ್ಯ ಸರ್ಕಾರ ಪಕ್ಷಾತೀತವಾಗಿ ಹಾಗೂ ಜಾತ್ಯಾತೀತವಾಗಿ ಪರಿಹಾರ ಕಲ್ಪಿಸುತ್ತಿದೆ. ಅಧಿಕಾರ ಇಲ್ಲದವರು ಏನೇನೊ ಮಾತನಾಡಿದರೆ ಅದಕ್ಕೆಲ್ಲ ಉತ್ತರ ಕೊಡುವುದಕ್ಕೆ ಆಗಲ್ಲ’ ಎಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ವಿರುದ್ಧ ಹರಿಹಾಯ್ದರು.

‘ಯಡಿಯೂರಪ್ಪ ಅವರನ್ನು ಡಮ್ಮಿ ಮಾಡುವ ಪ್ರಶ್ನೆಯಿಲ್ಲ. ಅವರು ಇಳಿ ವಯಸ್ಸಿನಲ್ಲೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಓಡಾಡುತ್ತಿದ್ದಾರೆ. ಪರಿಹಾರಕ್ಕಾಗಿ ಸತತ ಪ್ರಯತ್ನ ಮಾಡುತ್ತಿದ್ದು, ಕೇಂದ್ರದಿಂದ ಹಣ ಬಂದೇ ಬರುತ್ತದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದರು.


ಪರಿಹಾರ ಕಲ್ಪಿಸಬೇಕು: ‘ಬಿಜೆಪಿ ಸರ್ಕಾರ ಪರಿಪೂರ್ಣವಾಗಿಲ್ಲ. ಹೀಗಾಗಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಸ್ವಲ್ಪ ತಡವಾಗಿದೆ. ಬಿಜೆಪಿಗೆ ಸ್ಪಷ್ಟ ಬಹುಮತವಿಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಶಾಸಕರನ್ನು ಪಕ್ಷಕ್ಕೆ ಕರೆದುಕೊಳ್ಳುತ್ತಿರುವುದರಿಂದ ಗೊಂದಲಗಳಾಗಿವೆ. ಬಿಜೆಪಿಯವರು ನೆರೆ ಪರಿಹಾರಕ್ಕೆ ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರ ನೆರೆ ಸಂತ್ರಸ್ತರಿಗೆ ಶೀಘ್ರವೇ ಪರಿಹಾರ ಕಲ್ಪಿಸಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಒತ್ತಾಯಿಸಿದರು.

‘ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಜೆಡಿಎಸ್ ಕಾರಣ ಎಂದು ಆ ಪಕ್ಷದ ಸತ್ಯಶೋಧನಾ ಸಮಿತಿ ವರದಿ ಸಲ್ಲಿಸಿರುವುದು ನಿಜ. ನಾನು ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಅವರಿಗೆ ಬೆಂಬಲ ನೀಡಿದ್ದೆ. ವಿಧಾನಸಭೆ ಚುನಾವಣೆಯಲ್ಲಿ ನನಗೆ ತೊಂದರೆ ಮಾಡಿದ್ದ ಕಾಂಗ್ರೆಸ್‌ನ ಮುನಿಯಪ್ಪಗೆ ಯಾಕೆ ಸಹಾಯ ಮಾಡಲಿ’ ಎಂದು ಹೇಳಿದರು.

‘ಮೈತ್ರಿ ವಿಚಾರ ನನಗೆ ಸಂಬಂಧಿಸಿದ್ದಲ್ಲ. ಆ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ನಿರ್ಧಾರ ಕೈಗೊಳ್ಳುತ್ತಾರೆ. ಲೋಕಸಭೆ ಚುನಾವಣೆ ವೇಳೆ ಸ್ಥಳೀಯವಾಗಿ ರಾಜಕಾರಣದಲ್ಲಿ ವ್ಯತ್ಯಾಸಗಳಾಗಿತ್ತು. ಮುನಿಯಪ್ಪ ವಿರುದ್ಧ ಎದ್ದಿದ್ದ ಅಲೆಯೇ ಅವರ ಸೋಲಿಗೆ ಕಾರಣವಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.