ADVERTISEMENT

ದೇಶದಲ್ಲಿ ಆಧುನಿಕ ಉದ್ಯಮವಾದ ಧರ್ಮ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 15:06 IST
Last Updated 14 ಡಿಸೆಂಬರ್ 2019, 15:06 IST
ಕೋಲಾರದಲ್ಲಿ ಶನಿವಾರ ಸಮುದಾಯ ಕರ್ನಾಟಕ ಸಂಘಟನೆಯ ರಾಜ್ಯ ಸಮ್ಮೇಳನದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಎನ್‌ಎಸ್‌ಡಿ ನಿರ್ದೇಶಕ ಸಿ.ಬಸವಲಿಂಗಯ್ಯ ಮಾತನಾಡಿದರು.
ಕೋಲಾರದಲ್ಲಿ ಶನಿವಾರ ಸಮುದಾಯ ಕರ್ನಾಟಕ ಸಂಘಟನೆಯ ರಾಜ್ಯ ಸಮ್ಮೇಳನದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಎನ್‌ಎಸ್‌ಡಿ ನಿರ್ದೇಶಕ ಸಿ.ಬಸವಲಿಂಗಯ್ಯ ಮಾತನಾಡಿದರು.   

ಕೋಲಾರ: ‘ದೇಶದಲ್ಲಿ ಧರ್ಮವು ಆಧುನಿಕ ಉದ್ಯಮವಾಗಿದ್ದು, ರಾಜಕಾರಣಿಗಳು ಜನರನ್ನು ವಿಭಜಿಸಿ ರಾಜಕಾರಣ ಮಾಡುತ್ತಿದ್ದಾರೆ’ ಎಂದು ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ನಿರ್ದೇಶಕ ಸಿ.ಬಸವಲಿಂಗಯ್ಯ ಅಭಿಪ್ರಾಯಪಟ್ಟರು.

ಇಲ್ಲಿ ಶನಿವಾರ ಸಮುದಾಯ ಕರ್ನಾಟಕ ಸಂಘಟನೆಯ ರಾಜ್ಯ ಸಮ್ಮೇಳನದಲ್ಲಿ ನಡೆದ ‘ಬಹುತ್ವ ಭಾರತಕ್ಕಾಗಿ ಸಾಂಸ್ಕೃತಿಕ ಅನುಸಂಧಾನ’ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿ, ‘ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದೆ ದೇವರು ಧರ್ಮವನ್ನು ಮುಂದೆ ತಂದು ಜನಸಾಮಾನ್ಯರ ಬದುಕು ಬೀದಿಗೆ ತಂದಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದರು.

‘ಬಹುತ್ವವನ್ನು ಭಕ್ತಿಯಲ್ಲಿ ಮಾತ್ರ ತೋರಿಸಲು ಹೊರಟಿದ್ದಾರೆ. ಮತಾಂತರಕ್ಕೆ ಸಂವಿಧಾನ ಅವಕಾಶ ನೀಡಿದ್ದರೂ ದಮನಿತ ಜನಾಂಗವು ದೇವರ ಭಯದಲ್ಲಿ ಬದುಕುತ್ತಿದೆ. ಬುದ್ಧನ ಕಾಲದ ಸಂಘಟನೆಗಳು ಪ್ರಸ್ತುತ ಕಾಲಕ್ಕೆ ಪರಿಕಲ್ಪನೆಯಾಗಬೇಕು. ಸಮಾನತೆಯ ಸಂಘಗಳ ಬದಲಿಗೆ ಮಠಗಳು, ಅಗ್ರಹಾರಗಳು, ದೇವಾಲಯಗಳು ಸೃಷ್ಟಿಯಾಗಿ ಬಂಡವಾಳಶಾಹಿಗಳಿಂದ ರಾಜಕೀಯ ಆರಂಭಿಸಿವೆ’ ಎಂದು ಗುಡುಗಿದರು.

ADVERTISEMENT

‘ತಳ ಸಮುದಾಯಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಷ್ಟೇ ಪ್ರತಿರೋಧ ತೋರಿದರೂ ಬೆಲೆ ಇಲ್ಲವಾಗಿದೆ. ರಾಜಕಾರಣಿಗಳು ತಳ ಸಮುದಾಯಗಳನ್ನು ಮತ ಬ್ಯಾಂಕ್‌ಗೆ ಮಾತ್ರ ಸೀಮಿತಗೊಳಿಸಿದ್ದಾರೆ. ಜ್ಞಾನ ಕೇಂದ್ರಗಳನ್ನು ಮುಚ್ಚುವ ಮೂಲಕ ಆಳುವ ವರ್ಗದ ಗುಲಾಮರಾಗುತ್ತಿದ್ದೇವೆ. ವಿದ್ಯೆಯು ಮತ್ತೆ ಶೋಷಣೆಗೆ ಕಾರಣವಾಗುತ್ತಿದ್ದು, ಜನರಿಗೆ ಸಾಂಸ್ಕೃತಿಕ ಅರಿವು ಮೂಡಿಸಬೇಕು’ ಎಂದು ಹೇಳಿದರು.

ಮೌಲ್ಯಗಳ ನಾಶ: ‘ಬಹುತ್ವದ ಪ್ರಶ್ನೆ ಬಂದಾಗ ಮೌಲ್ಯಗಳನ್ನು ನಾಶ ಮಾಡಿ ಅಧಿಕಾರಕ್ಕಾಗಿ ದ್ರೋಹ ಮಾಡಲು ಸಿದ್ಧರಿದ್ದಾರೆ. ದಮನಿತ ಸಮುದಾಯಗಳ ದುಡಿಮೆ ಬಗ್ಗೆ ಎಲ್ಲಿಯೂ ಹೇಳಲಿಲ್ಲ. ಆಹಾರ ಪದ್ಧತಿ ಬೇರೆಯಾಗಿದ್ದರೂ ಅನುಮಾನದಿಂದ ನೋಡುವಂತಾಗಿದೆ’ ಎಂದು ಮೈಸೂರಿನ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಆರ್.ಚಲಪತಿ ಅಭಿಪ್ರಾಯಪಟ್ಟರು.

‘ಪಠ್ಯದಲ್ಲಿ ಬಹುತ್ವದ ವಿಚಾರ ಬರಬೇಕೆಂದು ಯಾರೂ ಧ್ವನಿ ಎತ್ತುತ್ತಿಲ್ಲ. ಈ ಬಗ್ಗೆ ಮಾತುಕತೆ ಇಲ್ಲದೆ ಸಮುದಾಯಗಳ ಮಧ್ಯೆ ಜಗಳ ನಡೆಯುತ್ತಿದೆ. ಬಹುತ್ವವನ್ನು ತಿಳಿದು ಅಧಿಕಾರಕ್ಕಾಗಿ ಯುವ ಸಮೂಹವನ್ನು ಹಿಡಿದಿದ್ದಾರೆ. ಸವಾಲುಗಳ ಮಧ್ಯೆ ಅಸ್ವಿತ್ವದ ಪ್ರಶ್ನೆಯನ್ನು ಮಾತುಕತೆ ಮೂಲಕ ತರಬೇಕಿದೆ’ ಎಂದು ಪ್ರತಿಪಾದಿಸಿದರು.

ಸಾಹಿತಿ ಆರ್‌.ಕೆ.ಹುಡಗಿ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಕರ್ನಾಟಕ ಸಂಘಟನೆ ಖಜಾಂಚಿ ಎನ್.ಕೆ.ವಸಂತರಾಜ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.