ADVERTISEMENT

ಕೋಲಾರದಲ್ಲಿ ಕಳೆಗಟ್ಟಿದ ರಾಷ್ಟ್ರ ಹಬ್ಬದ ಸಂಭ್ರಮ

ಕ್ರೀಡಾಂಗಣದಲ್ಲಿ ರಾಷ್ಟ್ರಗೀತೆ ಅನುರಣನ– ಪಥಸಂಚಲನದ ಮೆರುಗು

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 10:55 IST
Last Updated 27 ಜನವರಿ 2020, 10:55 IST
ಕೋಲಾರದ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಗಣ ರಾಜ್ಯೋತ್ಸವದಲ್ಲಿ ಪೊಲೀಸರು ಪಥಸಂಚಲನ ನಡೆಸಿದರು.
ಕೋಲಾರದ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಗಣ ರಾಜ್ಯೋತ್ಸವದಲ್ಲಿ ಪೊಲೀಸರು ಪಥಸಂಚಲನ ನಡೆಸಿದರು.   

ಕೋಲಾರ: ಕ್ರೀಡಾಂಗಣದ ಮೂಲೆ ಮೂಲೆಯಲ್ಲೂ ರಾಷ್ಟ್ರಗೀತೆಯ ಅನುರಣನ... ಮನ ಮನದಲ್ಲೂ ರಾಷ್ಟ್ರಭಕ್ತಿಯ ಸಿಂಚನ... ಕಣ್ಣು ಹಾಯಿಸಿದಲ್ಲೆಲ್ಲಾ ತ್ರಿವರ್ಣ ಧ್ವಜದ ಸಾಲು... ಎಲ್ಲೆಲ್ಲೂ ರಾಷ್ಟ್ರೀಯ ಹಬ್ಬ ಗಣ ರಾಜ್ಯೋತ್ಸವದ ಸಂಭ್ರಮ....

ಇಲ್ಲಿನ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ದೇಶದ 71ನೇ ಗಣ ರಾಜ್ಯೋತ್ಸವದಲ್ಲಿ ಕಂಡುಬಂದ ದೃಶ್ಯಗಳಿವು. ಜಿಲ್ಲಾಡಳಿತವು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತು.

ಕಾರ್ಯಕ್ರಮ ಆರಂಭಕ್ಕೂ ಒಂದು ತಾಸು ಮುನ್ನವೇ ಶಾಲಾ ಮಕ್ಕಳು, ಪೊಲೀಸರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಕ್ರೀಡಾಂಗಣದತ್ತ ಧಾವಿಸಿದರು. ಪೂರ್ವ ನಿಗದಿಯಂತೆ 9 ಗಂಟೆಗೆ ಸಮಾರಂಭ ಆರಂಭವಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಕ್ರೀಡಾಂಗಣದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ADVERTISEMENT

ಪೊಲೀಸರು ಪ್ರತಿ ವ್ಯಕ್ತಿಯನ್ನು ತಪಾಸಣೆ ಮಾಡಿ ಕ್ರೀಡಾಂಗಣದ ಒಳ ಹೋಗಲು ಬಿಟ್ಟರು. ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಧ್ವಜಾರೋಹಣ ನೆರವೇರಿಸಿದರು. ಶಾಲಾ ಮಕ್ಕಳು, ಪೊಲೀಸರು, ಸೇವಾದಳ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌, ಎನ್‌ಸಿಸಿ ಹಾಗೂ ಗೃಹರಕ್ಷಕ ದಳ ಸಿಬ್ಬಂದಿಯು ಪಥಸಂಚಲನದ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ಸೊಗಸು ಇಮ್ಮಡಿ: ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ಸಮಾರಂಭದ ಸೊಗಸು ಇಮ್ಮಡಿಗೊಳಿಸಿತು. ಮುದುವಾಡಿ ಹೊಸಹಳ್ಳಿ ಸರ್ಕಾರಿ ಶಾಲೆ ಮಕ್ಕಳು ಪ್ರದರ್ಶಿಸಿದ ಕಂಸಾಳೆ ನ್ಯತ್ಯವು ನೋಡುಗರ ಮನಸೊರೆಗೊಂಡಿತು. ಸುವರ್ಣ ಸೆಂಟ್ರಲ್ ಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಗೂ ರೈತ ಗೀತೆ ಹಾಡಿದರು. ಚಿನ್ಮಯ ವಿದ್ಯಾಮಂದಿರ, ಸೇಂಟ್‌ ಆನ್ಸ್‌, ಮಹಿಳಾ ಸಮಾಜ ಸೇರಿದಂತೆ ವಿವಿಧ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್‌ ಹಾಗೂ ನ್ಯಾಯಾಲಯ ಕಟ್ಟಡಗಳಲ್ಲಿ ರಾಷ್ಟ್ರಧ್ವಜ ಹಾರಿಸಿ ಗಣ ರಾಜ್ಯೋತ್ಸವ ಆಚರಿಸಲಾಯಿತು. ಬಸ್‌ ಚಾಲಕರು, ಆಟೊ ಚಾಲಕರು ಹಾಗೂ ಬೈಕ್‌ ಸವಾರರು ವಾಹನಗಳ ಮೇಲೆ ರಾಷ್ಟ್ರಧ್ವಜ ಹಾಕಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ಬಹುಮಾನ ವಿತರಣೆ: ಆಕರ್ಷಕ ಪಥಸಂಚಲನ ನಡೆಸಿದ ಸರ್ಕಾರಿ ಬಾಲಕರ ಕಾಲೇಜಿನ ಎನ್‌ಸಿಸಿ ತಂಡಕ್ಕೆ ಪ್ರಥಮ, ಬೆಗ್ಲಿ ಹೊಸಹಳ್ಳಿಯ ಗ್ರೀನ್ ವ್ಯಾಲಿ ಪಬ್ಲಿಕ್ ಶಾಲೆಯ ಭಾರತ್ ಸ್ಕೌಟ್ಸ್ ತಂಡಕ್ಕೆ ದ್ವಿತೀಯ ಹಾಗೂ ಎಇಎಸ್ ಶಾಲೆಯ ಭಾರತ ಸೇವಾದಳ ತಂಡಕ್ಕೆ ತೃತೀಯ ಬಹುಮಾನ ನೀಡಲಾಯಿತು. ಭಾರತೀಯ ಸೇನೆಯಲ್ಲಿ ಸೇವೆಯಲ್ಲಿರುವ ಲೆಫ್ಟಿನೆಂಟ್‌ ಕರ್ನಲ್ ಅಮರನಾಥ್‌ ಅವರನ್ನು ಸನ್ಮಾನಿಸಲಾಯಿತು.

ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿರುದ್ಯೋಗಿ ಯುವಕರಿಗೆ ಪ್ರವಾಸಿ ಟ್ಯಾಕ್ಸಿ ವಿತರಿಸಲಾಯಿತು. ನಗರಸಭೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ ₹ 50 ಸಾವಿರದ ಚೆಕ್ ವಿತರಿಸಲಾಯಿತು. ಕಂದಾಯ ಇಲಾಖೆಯಿಂದ ರೈತರಿಗೆ ಪಹಣಿ ನೀಡಲಾಯಿತು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲಾಯಿತು.

ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಉಪಾಧ್ಯಕ್ಷೆ ಯಶೋದಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ, ಉಪ ವಿಭಾಗಾಧಿಕಾರಿ ವಿ.ಸೋಮಶೇಖರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.