ADVERTISEMENT

ವೃಂದ ನೇಮಕಾತಿ ನಿಯಮ ತಿದ್ದುಪಡಿಗೆ ಮನವಿ

ಸಚಿವ ಸುರೇಶ್‌ಕುಮಾರ್‌ ಭೇಟಿಯಾದ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರತಿನಿಧಿಗಳು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 9:25 IST
Last Updated 18 ಫೆಬ್ರುವರಿ 2020, 9:25 IST
ಕೋಲಾರ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸೋಮವಾರ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು.
ಕೋಲಾರ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸೋಮವಾರ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು.   

ಕೋಲಾರ: ದೈಹಿಕ ಶಿಕ್ಷಣ ಶಿಕ್ಷಕರ ವೃಂದ ನೇಮಕಾತಿ ನಿಯಮ ತಿದ್ದುಪಡಿಗೆ ಮತ್ತು ವೈದ್ಯನಾಥನ್ ವರದಿ ಜಾರಿಗೆ ಒತ್ತಾಯಿಸಿ ಜಿಲ್ಲೆಯ ದೈಹಿಕ ಶಿಕ್ಷಕರ ಸಂಘದ ಪ್ರತಿನಿಧಿಗಳು ಬೆಂಗಳೂರಿನಲ್ಲಿ ಸೋಮವಾರ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು.

ನಿಯೋಗದ ನೇತೃತ್ವ ವಹಿಸಿ ಮಾತನಾಡಿದ ವಿಧಾನಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ, ‘ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಹಣಕಾಸು ಮತ್ತು ಕಾನೂನು ಇಲಾಖೆ ಒಪ್ಪಿಗೆ ನೀಡಿದ್ದು, ಭರವಸೆ ಸಮಿತಿಯೂ ಈಗಾಗಲೇ ಶಿಕ್ಷಣ ಇಲಾಖೆಗೆ ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರನ್ನಾಗಿ ಮಾಡಲು ಒಪ್ಪಿ ವರದಿ ನೀಡಿದೆ’ ಎಂದರು.

‘ವೈದ್ಯನಾಥನ್ ಸಮಿತಿ ವರದಿ ಶಿಫಾರಸ್ಸಿನಲ್ಲಿನ 13 ಅಂಶ ಅನುಷ್ಠಾನಗೊಳಿಸಬೇಕು ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪದ ನಾಮಕರಿಸಬೇಕು. ಅನೇಕರು ಐದಾರು ತಿಂಗಳಲ್ಲಿ ನಿವೃತ್ತಿಯಾಗುವುದರಿಂದ ಶೀಘ್ರವೇ ಬಡ್ತಿ ಮುಖ್ಯ ಶಿಕ್ಷಕರ ಹುದ್ದೆಗಳನ್ನು ಹೆಚ್ಚಿಸಿದರೆ ಅವರಿಗೆ ಬಡ್ತಿ ಖುಷಿಯಾದರೂ ಸಿಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿಯಿರುವ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಕಡ್ಡಾಯಗೊಳಿಸಿ ಪರೀಕ್ಷಾ ವಿಷಯವಾಗಿ ಜಾರಿ ಮಾಡಬೇಕು’ ಎಂದು ಮನವಿ ಮಾಡಿದರು.

ಜೇಷ್ಠತಾ ಪಟ್ಟಿ: ‘ದೈಹಿಕ ಶಿಕ್ಷಣ ಶಿಕ್ಷಕರ ರಾಜ್ಯ ಜೇಷ್ಠತಾ ಪಟ್ಟಿ ಪ್ರಕಟಿಸಬೇಕು. ಪದವಿ ಪೂರ್ವ ಕಾಲೇಜುಗಳಲ್ಲಿ ಇತರೆ ವಿಷಯದಂತೆ ದೈಹಿಕ ಶಿಕ್ಷಣಕ್ಕೂ ಉಪನ್ಯಾಸಕರ ನೇಮಕಾತಿ ನಡೆಯಬೇಕು, ಎಸ್‌ಟಿಎಸ್‌ ಮತ್ತು ಟಿಡಿಎಸ್‌ನಲ್ಲಿನ ಶಿಕ್ಷಕರ ಮಾಹಿತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ವಿಶೇಷ ಶಿಕ್ಷಕರೆಂದು ನಮೂದಿಸುವ ಬದಲು ದೈಹಿಕ ಶಿಕ್ಷಣ ಸಹಶಿಕ್ಷಕರು ಎಂದು ನಮೂದಿಸಬೇಕು’ ಎಂದು ಕೋರಿದರು.

‘ದೈಹಿಕ ಶಿಕ್ಷಕರಿಗೆ ಟಾಲ್ಪ್ ತರಬೇತಿ, ತಾಲ್ಲೂಕು ಮತ್ತು ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಕೂಡಲೇ ಬಡ್ತಿ ನೀಡಿಕೆ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ನಿಗದಿಪಡಿಸಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಮಾಡಿ ಪ್ರತಿ ಶಾಲೆಗೂ ದೈಹಿಕ ಶಿಕ್ಷಣ ಶಿಕ್ಷಕರನ್ನು ಕಡ್ಡಾಯವಾಗಿ ನೇಮಿಸಬೇಕು’ ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯ ಅರುಣ್‌ ಷಹಾಪುರ, ರಾಜ್ಯ ಮತ್ತು ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಇ.ಶ್ರೀನಿವಾಸಗೌಡ, ಜಿಲ್ಲಾ ಘಟಕದ ಕಾರ್ಯದರ್ಶಿ ಎಸ್.ಚೌಡಪ್ಪ, ಸದಸ್ಯರಾದ ದೇವಿರೆಡ್ಡಿ, ಅರುಣ್‌ಕುಮಾರ್‌, ಬಾಲರಾಜು, ರಘು, ಮನೋಹರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.