ADVERTISEMENT

ಟಾರ್ಪಲ್‌ ವಿತರಣೆಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 16:35 IST
Last Updated 10 ಡಿಸೆಂಬರ್ 2019, 16:35 IST
ರಾಗಿ ಬೆಳೆಗಾರರಿಗೆ ಟಾರ್ಪಲ್‌ ವಿತರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಮಂಗಳವಾರ ಕೃಷಿ ಇಲಾಖೆ ಅಧಿಕಾರಿ ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು.
ರಾಗಿ ಬೆಳೆಗಾರರಿಗೆ ಟಾರ್ಪಲ್‌ ವಿತರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಮಂಗಳವಾರ ಕೃಷಿ ಇಲಾಖೆ ಅಧಿಕಾರಿ ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು.   

ಕೋಲಾರ: ಜಿಲ್ಲೆಯಲ್ಲಿ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದ ರಾಗಿ ರಕ್ಷಿಸಿಕೊಳ್ಳಲು ಉಚಿತವಾಗಿ ಟಾರ್ಪಲ್ ವಿತರಿಸುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೃಷಿ ಇಲಾಖೆ ಅಧಿಕಾರಿ ರಾಘವೇಂದ್ರ ಅವರಿಗೆ ಇಲ್ಲಿ ಮಂಗಳವಾರ ಮನವಿ ಸಲ್ಲಿಸಿದರು.

‘ಜಿಲ್ಲೆಯಲ್ಲಿ ಈ ಬಾರಿ ರಾಗಿ ಬೆಳೆ ಚೆನ್ನಾಗಿ ಬಂದಿದ್ದು, ರೈತರು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ. ಹಲವೆಡೆ ಈಗಾಗಲೇ ರಾಗಿ ಕೊಯ್ಲು ಆರಂಭವಾಗಿದೆ. ಆದರೆ, ಆಗಾಗ್ಗೆ ಮಳೆ ಆಗುತ್ತಿರುವುದರಿಂದ ರಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಸಂಘಟನೆ ಸದಸ್ಯರು ಹೇಳಿದರು.

‘ಸತತ ಬರದಿಂದಾಗಿ ಜಿಲ್ಲೆಯಲ್ಲಿ 2 ದಶಕದಿಂದ ಉತ್ತಮ ಬೆಳೆಯಾಗಿರಲಿಲ್ಲ. ಈ ಬಾರಿ ರಾಗಿ ಬೆಳೆ ಸಮೃದ್ಧವಾಗಿ ಬೆಳೆದಿದೆ. ಆದರೆ, ಜಡಿ ಮಳೆ ಕಾರಣಕ್ಕೆ ಕೈಗೆ ಬಂದ ಬೆಳೆ ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಕಟಾವು ಮಾಡಿದ ರಾಗಿ ಬೆಳೆಯನ್ನು ದಾಸ್ತಾನು ಮಾಡಲು ಗೋದಾಮುಗಳಿಲ್ಲದೆ ರೈತರು ತತ್ತರಿಸಿದ್ದಾರೆ’ ಎಂದು ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ತಿಳಿಸಿದರು.

ADVERTISEMENT

‘ಕೊಯ್ಲು ಮಾಡಿರುವ ರಾಗಿ ಬೆಳೆಯನ್ನು ಮಳೆಯಿಂದ ಸಂರಕ್ಷಿಸುವುದು ದೊಡ್ಡ ಸವಾಲಾಗಿದೆ. ಮಳೆ ಮುಂದುವರಿದರೆ ರಾಗಿ ಮೊಳಕೆಯೊಡೆದು ನಷ್ಟವಾಗುತ್ತದೆ. ಮಳೆಯಿಂದಾಗಿ ರೈತರಿಗೆ ದಿಕ್ಕು ತೋಚದಂತಾಗಿದೆ. ಟಾರ್ಪಲ್‌ ಬೆಲೆ ದುಬಾರಿಯಾಗಿದ್ದು, ರೈತರಿಗೆ ಖರೀದಿ ಮಾಡಲು ಆರ್ಥಿಕವಾಗಿ ಸಮಸ್ಯೆಯಾಗಿದೆ’ ಎಂದರು.

ಖರೀದಿ ಕೇಂದ್ರ: ‘ಕೃಷಿ ಇಲಾಖೆಯಿಂದ ರಾಗಿ ಬೆಳೆಗಾರರಿಗೆ ಉಚಿತವಾಗಿ ಟಾರ್ಪಲ್‌ ವಿತರಿಸಬೇಕು. ರಾಗಿ ಖರೀದಿ ಕೇಂದ್ರಗಳನ್ನು ತೆರೆದು, ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಟಾರ್ಪಲ್‌ ವಿತರಣೆಯಲ್ಲಿ ಅಕ್ರಮ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಬೆಂಬಲ ಬೆಲೆ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು’ ಎಂದು ಸಂಘಟನೆ ಸದಸ್ಯರು ಮನವಿ ಮಾಡಿದರು.

ಪ್ರಗತಿಪರ ರೈತ ಚಂಗಲರಾಯಪ್ಪ ತಿಮ್ಮಣ್ಣ, ಸಂಘಟನೆ ಸದಸ್ಯರಾದ ಮಂಜುನಾಥ್, ಸುಪ್ರೀಂಚಲ, ಸುಧಾಕರ್, ವೆಂಕಟೇಶಪ್ಪ, ಆಂಜಿನಪ್ಪ, ಸಹದೇವಣ್ಣ, ವೆಂಕಟೇಶ್, ರಾಜೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.