ಬಂಗಾರಪೇಟೆ: ಗಡಿ ಭಾಗದಲ್ಲಿರುವ ವಸತಿ ಶಾಲೆಗಳಲ್ಲಿ ಕಾಯಂ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇಲ್ಲದೆ ಅತಿಥಿ ಶಿಕ್ಷಕರೇ ಮತ್ತು ಗುತ್ತಿಗೆ ಆಧಾರದ ಸಿಬ್ಬಂದಿಯೇ ಆಸರೆಯಾಗಿದ್ದಾರೆ.
ತಾಲ್ಲೂಕಿನಲ್ಲಿ ಮೂರು ವಸತಿ ಶಾಲೆ ಇದ್ದು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ 30 ಕಾಯಂ ಶಿಕ್ಷಕರು ಇರಬೇಕಿತ್ತು. ಆದರೆ 11 ಹುದ್ದೆಗಳಲ್ಲಿ ಮಾತ್ರ ಕಾಯಂ ಶಿಕ್ಷಕರು ಇದ್ದು, 19 ಹುದ್ದೆಯನ್ನು ಅತಿಥಿಗಳೇ ನಿರ್ವಹಿಸುತ್ತಿದ್ದಾರೆ. ಬೋಧಕೇತರ ಸಿಬ್ಬಂದಿ ಹುದ್ದೆಯಲ್ಲಿ ಒಬ್ಬರೂ ಕಾಯಂ ಇಲ್ಲದೆ ಗುತ್ತಿಗೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ತಾಲ್ಲೂಕಿನ ಬೂದಿಕೋಟೆ ಹೋಬಳಿಯ ಯಳೇಸಂದ್ರ ಗ್ರಾಮದ ಮೊರಾರ್ಜಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗೂ ದೊಡ್ಡಪೊನ್ನಾಂಡಹಳ್ಳಿ ಮೊರಾರ್ಜಿ ವಸತಿ ಶಾಲೆಗಳಲ್ಲಿ ಗಡಿ ಭಾಗದ ರೈತ, ಕೂಲಿಕಾರ್ಮಿಕರ ಮತ್ತು ಬಡವರು ತಮ್ಮ ಮಕ್ಕಳನ್ನು ದಾಖಲಿಸಿದ್ದಾರೆ.
ಇಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸರ್ಕಾರ ಸುಂದರ ಕಟ್ಟಡ ನಿರ್ಮಿಸಿದೆ. ಶಾಲೆಗಳಲ್ಲಿ ಕೊಠಡಿಗಳ ಸಂಖ್ಯೆ, ರಂಗಮಂದಿರ, ಆಟದ ಮೈದಾನ, ಅಡುಗೆಕೋಣೆ, ಶೌಚಾಲಯ, ವಸತಿ ನಿಲಯಗಳು ಸೇರಿದಂತೆ ಯಾವುದೇ ಮೂಲಸೌಕರ್ಯಗಳ ಕೊರತೆ ಇಲ್ಲ. ಆದರೆ ಕಾಯಂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇಲ್ಲದೆ ಇವುಗಳ ಸರಿಯಾದ ಬಳಕೆಯಲ್ಲಿ ಮಕ್ಕಳಿಗೆ ಅಡಚಣೆ ಉಂಟಾಗುತ್ತಿದೆ.
ಮೂರು ವಸತಿ ಶಾಲೆಗಳಲ್ಲಿ ತಲಾ 250 ಮಕ್ಕಳಂತೆ ಒಟ್ಟು 750 ಮಕ್ಕಳು ಕಲಿಯುತ್ತಿದ್ದಾರೆ. ಇಷ್ಟು ಮಕ್ಕಳಿಗೆ 30 ಶಿಕ್ಷಕರು ಇರಬೇಕಿತ್ತು. ಆದರೆ ಇರುವುದು 10 ಮಾತ್ರ. ನಿಯಮಾನುಸಾರ 25 ಮಕ್ಕಳಿಗೆ ಒಬ್ಬ ಶಿಕ್ಷಕರಂತೆ 10 ಶಿಕ್ಷಕರನ್ನು ನೇಮಿಸಬೇಕು. ಆದರೆ ಕಾಯಂ ಶಿಕ್ಷಕರು ಬೆರಳೆಣಿಕೆಯಷ್ಟು ಮಾತ್ರ ಇದ್ದು ಇದರಿಂದಾಗಿ ಗುಣಮಟ್ಟದ ಶಿಕ್ಷಣವ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಪೋಷಕರ ಆರೋಪ.
ಬೋಧಕೇತರ ಸಿಬ್ಬಂದಿಯಾದ ಅಡುಗೆದಾರರು, ಸ್ವಚ್ಚತೆಗಾರರು ಮತ್ತು ಭದ್ರತೆ ಸಿಬ್ಬಂದಿ ಎಲ್ಲರೂ ಸಹ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಇದು ಒಂದೆರಡು ತಿಂಗಳ ಸಮಸ್ಯೆಯಲ್ಲ, ಹಲವು ವರ್ಷಗಳಿಂದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆ ಇದ್ದರೂ ಕಾಯಂ ಸಿಬ್ಬಂದಿ ನೇಮಕಕ್ಕೆ ಸರ್ಕಾರವು ಆಸಕ್ತಿ ತೋರಿಲ್ಲ ಎಂದು ಬೇಸರಿಸುತ್ತಾರೆ ಪೋಷಕರು.
ಯಳೇಸಂದ್ರ ಮೊರಾರ್ಜಿ ವಸತಿ ಶಾಲೆಯಲ್ಲಿ ಪ್ರಾಂಶುಪಾಲ, ವಿಜ್ಞಾನ, ಕಂಪ್ಯೂಟರ್, ಸಮಾಜ ವಿಜ್ಞಾನ, ಶಿಕ್ಷಕರು ಹಾಗೂ ಪ್ರಥಮ ದರ್ಜೆಯ ಸಹಾಯಕ ಹುದ್ದೆಗೆ ಮಾತ್ರವೇ ಕಾಯಂ ನೌಕರರಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಪ್ರಾಂಶುಪಾಲ, ವಿಜ್ಞಾನ, ಕಂಪ್ಯೂಟರ್, ದ್ವಿತೀಯ ಸಹಾಯಕ ಮಾತ್ರವೇ ಕಾಯಂ ಶಿಕ್ಷಕರಿದ್ದಾರೆ. ಇನ್ನು ದೊಡ್ಡ ಪೊನ್ನಾಂಡಹಳ್ಳಿಯಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಪರಿಸ್ಥಿತಿ ಇದಕ್ಕಿಂತ ಏನೂ ಭಿನ್ನವಿಲ್ಲ. ಇಲ್ಲಿಯೂ ಪ್ರಾಂಶುಪಾಲರು, ಕಂಪ್ಯೂಟರ್, ಗಣಿತ, ದೈಹಿಕ ಶಿಕ್ಷಣ ಸೇರಿದಂತೆ ಮೂವರು ಮಾತ್ರವೇ ಕಾಯಂ ಶಿಕ್ಷಕರಿದ್ದಾರೆ. ಉಳಿದ ವಿಷಯಗಳಿಗೆ ಮೂರು ವಸತಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರೇ ಆಸರೆಯಾಗಿದ್ದಾರೆ.
ಈ ಶಾಲೆಗಳಿಗೆ ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಯು ಕಾಯಂ ಶಿಕ್ಷಕರನ್ನು ನಿಯುಕ್ತಿಗೊಳಿಸಿಲ್ಲ ಎಂಬ ಆರೋಪವಿದೆ. ಅತಿಥಿ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವುದಾದರೂ ಹೇಗೆ? ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಶೀಘ್ರವೇ ಕಾಯಂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಿಸಬೇಕೆಂಬುದು ಪೋಷಕರ ಆಗ್ರಹ.
ಗಡಿಭಾಗದಲ್ಲಿರುವ ವಸತಿ ಶಾಲೆಗಳಿಗೆ ಸರ್ಕಾರ ಕೂಡಲೇ ಕಾಯಂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಿಸಿ ವಸತಿ ಶಾಲೆಗಳ ಗುಣಮಟ್ಟ ಹೆಚ್ಚಿಸಬೇಕುಟಿ.ವಿ.ರಾಮಮೂರ್ತಿ ಪೋಷಕ
ಮಕ್ಕಳ ಹಿತದೃಷ್ಟಿಯಿಂದ ಪ್ರತಿಯೊಂದು ವಸತಿ ಶಾಲೆಯಲ್ಲಿಯೂ ಆಪ್ತ ಸಮಾಲೋಚಕರನ್ನು ನೇಮಿಸಿ ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು.ನಾರಾಯಣಪ್ಪ ಡಿ ಹೊಸಮನೆ ಪೋಷಕ
ಕಾಯಂ ಸಿಬ್ಬಂದಿ ನೇಮಕ ಮಾಡದ ಕಾರಣ ನೀರೀಕ್ಷೆ ಮಟ್ಟದಲ್ಲಿ ಶಿಕ್ಷಣ ದೊರೆಯುತ್ತಿಲ್ಲ. ಕಾಯಂ ಶಿಕ್ಷಕರ ಕೊರತೆಯಿಂದ ಮಕ್ಕಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.ಸುಧಾಕರ ಪೋಷಕ
ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂದು ವಸತಿ ಶಾಲೆಗೆ ಮಕ್ಕಳನ್ನು ದಾಖಲಿಸಿದ್ದೇವೆ. ಇಲ್ಲಿಯೂ ಸಹ ಕಾಯಂ ಸಿಬ್ಬಂದಿ ಇಲ್ಲದೆ ಗುಣಮಟ್ಟ ಕಳೆದುಕೊಳ್ಳುತ್ತಿದೆಭವ್ಯ ಪೋಷಕರು
ಅತಿಥಿ ಶಿಕ್ಷಕರು ಒಂದು ವರ್ಷ ಬಂದರೆ ಮತ್ತೊಂದು ವರ್ಷಕ್ಕೆ ಮತ್ತೊಬ್ಬರು ಬರುತ್ತಾರೆ. ಮಧ್ಯದಲ್ಲಿ ಯಾವಾಗ ಬೇಕಾದರೂ ಶಾಲೆ ಬಿಡುತ್ತಾರೋ ಗೊತ್ತಿಲ್ಲ. ಇದರಿಂದ ಉತ್ತಮ ರೀತಿಯಾಗಿ ಕಲಿಯಲು ಸಾಧ್ಯವಾಗುತ್ತಿಲ್ಲ.ವಿದ್ಯಾರ್ಥಿನಿ 10ನೇ ತರಗತಿ
ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ಮೇಲಿನ ಅಧಿಕಾರಿಗಳಿಗೆ ನೀಡಲಾಗಿದೆ. ಕಾಯಂ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲುವುದು ಸರ್ಕಾರದ ಹಂತದಲ್ಲಿ ತಿರ್ಮಾನ ವಾಗಬೇಕು.ಎಂ ಶ್ರೀನಿವಾಸನ್ ಜಂಟಿ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.