ADVERTISEMENT

ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ: ರೈತ ಸಂಘ ದೂರು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2023, 6:56 IST
Last Updated 2 ಫೆಬ್ರುವರಿ 2023, 6:56 IST
ಕಾಳ ಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ದಂಧೆಯನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ರೈತ ಸಂಘದ ಮುಖಂಡರು ಆಹಾರ ಇಲಾಖೆಗೆ ಮನವಿ ಸಲ್ಲಿಸಿದರು
ಕಾಳ ಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ದಂಧೆಯನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ರೈತ ಸಂಘದ ಮುಖಂಡರು ಆಹಾರ ಇಲಾಖೆಗೆ ಮನವಿ ಸಲ್ಲಿಸಿದರು   

ಮುಳಬಾಗಿಲು: ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ದಂಧೆ ನಿಯಂತ್ರಣಕ್ಕೆ ವಿಶೇಷ ತಂಡ ರಚಿಸಬೇಕು. ರಾಜ್ಯ ಸರ್ಕಾರ ಕಡಿತಗೊಳಿಸಿರುವ ಪಡಿತರ ಅಕ್ಕಿಯನ್ನು ತ್ವರಿತವಾಗಿ ವಿತರಿಸಬೇಕು ಎಂದು ಆಗ್ರಹಿಸಿ ರೈತ ಸಂಘದಿಂದ ಆಹಾರ ಇಲಾಖೆಯ ತಾಲ್ಲೂಕು ನಿರೀಕ್ಷಕ ಮಂಜುನಾಥ ಅವರಿಗೆ ಮನವಿ ಸಲ್ಲಿಸಲಾಯಿತು.

ಪಡಿತರ ಅಕ್ಕಿ ವಿತರಣೆಯಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಬಂಗಾರಪೇಟೆಯಿಂದ ತಾಲ್ಲೂಕುಗಳಿಗೆ ಸಾಗಾಣಿಕೆ ಮಾಡುವ ಲಾರಿ ಗುತ್ತಿಗೆದಾರರು ದಾರಿ ಮಧ್ಯದಲ್ಲಿಯೇ ಪಡಿತರ ಅಕ್ಕಿಯನ್ನು ದಂಧೆಕೋರರಿಗೆ ಮಾರಾಟ ಮಾಡುತ್ತಾರೆ. ನ್ಯಾಯಬೆಲೆ ಅಂಗಡಿಗಳಿಗೆ ಸರಿಯಾಗಿ ವಿತರಣೆಯಾಗುತ್ತಿಲ್ಲ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ಒಳಒಪ್ಪಂದ ಏರ್ಪಟ್ಟಿದೆ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಖ್‌ ಪಾಷ ದೂರಿದರು.

ಸರ್ಕಾರದಿಂದ ಬಡವರಿಗೆ ನೀಡುವ ಪಡಿತರ ಅಕ್ಕಿಯನ್ನು ಪಾಲಿಷ್ ಮಾಡಿ ವಿವಿಧ ಬ್ರಾಂಡ್‌ಗಳ ಹೆಸರಿನಲ್ಲಿ ಮಾರಾಟ ಮಾಡುವ ದಂಧೆ ಜಿಲ್ಲೆಯಲ್ಲಿದೆ. ಸ್ಥಳೀಯ ಮಟ್ಟದ ಅಧಿಕಾರಿಗಳು ದಂಧೆಕೋರರ ವಿರುದ್ಧ ಕ್ರಮಕೈಗೊಳ್ಳದೆ ಮೌನವಾಗಿದ್ದಾರೆ. ಬಡವರ ಅನ್ನವನ್ನು ಅಧಿಕಾರಿಗಳೇ ಕಸಿಯುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಮನವಿ ಸ್ವೀಕರಿಸಿದ ಆಹಾರ ನಿರೀಕ್ಷಕ ಮಂಜುನಾಥ, ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ರೈತರಿಂದ ದೂರುಗಳು ಹೆಚ್ಚಾಗಿವೆ. ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು. ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಮಾಡುವ ದಂಧೆಕೋರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಭರವಸೆ ನೀಡಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ, ಜಿಲ್ಲಾ ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್‌ ಪಾಲ್, ಸುನೀಲ್‌ಕುಮಾರ್, ಭಾಸ್ಕರ್, ಜುಬೇರ್‌ ಪಾಷ, ಆದಿಲ್‌ಪಾಷ, ವಿಶ್ವ, ಗುರುಮೂರ್ತಿ, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಹೆಬ್ಬಣ ಆನಂದರೆಡ್ಡಿ, ಯಾರಂಘಟ್ಟ ಗಿರೀಶ್, ಸಂದೀಪ್‌ ರೆಡ್ಡಿ, ಸಂದೀಪ್‌ಗೌಡ, ವೇಣು, ಕಿರಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.