ಮುಳಬಾಗಿಲು: ಕೋಲಾರ ಹಾಲು ಒಕ್ಕೂಟಕ್ಕಾಗಿ ನಡೆಯುವ ಚುನಾವಣೆಗೆ ಜೆಡಿಎಸ್ ಬೆಂಬಲಿತರಾಗಿ ಪೂರ್ವ ಕ್ಷೇತ್ರಕ್ಕೆ ಕಾಡೇನಹಳ್ಳಿ ಕೆ.ಎನ್.ನಾಗರಾಜ್ ಹಾಗೂ ಪಶ್ಚಿಮ ಕ್ಷೇತ್ರಕ್ಕೆ ಬಿ.ವಿ.ಶಾಮೇಗೌಡ ಅವರನ್ನು ಪಕ್ಷದಿಂದ ಸರ್ವಾನುಮತದಿಂದ ಬೆಂಬಲಿತ ಅಭ್ಯರ್ಥಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಶಾಸಕ ಸಮೃದ್ಧಿ ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಶಿನಿಗೇನಹಳ್ಳಿ ಆನಂದ ರೆಡ್ಡಿ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಅಭ್ಯರ್ಥಿಗಳ ಆಯ್ಕೆ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪೂರ್ವ ಭಾಗಕ್ಕೆ ಈ ಹಿಂದಿನ ನಿರ್ದೇಶಕ ಕಾಡೇನಹಳ್ಳಿ ಕೆ.ಎನ್.ನಾಗರಾಜ್ ಅವರನ್ನು ಮೊದಲೇ ನಿರ್ಧರಿಸಲಾಗಿತ್ತು. ಆದರೆ, ಪಶ್ಚಿಮ ಭಾಗದಲ್ಲಿ ಬಿ.ವಿ.ಶಾಮೇಗೌಡ, ಬಿ.ಎಂ.ಸಿ.ವೆಂಕಟರಾಮೇಗೌಡ ಹಾಗೂ ಗೊಲ್ಲಹಳ್ಳಿ ಜಗದೀಶ್ ಮೂರು ಮಂದಿ ಆಕಾಂಕ್ಷಿಗಳಾಗಿದ್ದ ಕಾರಣದಿಂದ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲವಿತ್ತು. ಆದರೆ, ಪಕ್ಷದ ನಿರ್ಧಾರದಂತೆ ಬಿ.ಎಂ.ಸಿ ವೆಂಕಟರಾಮೇಗೌಡ ಹಾಗೂ ಗೊಲ್ಲಹಳ್ಳಿ ಜಗದೀಶ್ ಮುಖಂಡರ ಮಾತಿಗೆ ಗೌರವ ಕೊಟ್ಟು ಹಿಂದೆ ಸರಿದ ಪರಿಣಾಮವಾಗಿ ಶಾಮೇಗೌಡ ಆಯ್ಕೆ ಸುಲಭವಾಗಿದೆ ಎಂದು ಹೇಳಿದರು.
ಪಕ್ಷದಲ್ಲಿ ಯಾವುದೇ ಒಡಕಿಲ್ಲ. ಮೋಸ ಮಾಡಿದರೆ ಮುಲಾಜಿಲ್ಲದೆ ಗೇಟ್ ಪಾಸ್ ನೀಡಲಾಗುವುದು ಎಂದರು.
ತಾಲ್ಲೂಕಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಸಭೆ ಸೇರಿ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲಾಗುವುದು ಎಂದರು.
ಕಾಡೇನಹಳ್ಳಿ ಕೆ.ಎನ್.ನಾಗರಾಜ್, ಜಿ.ಆನಂದ ರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಘುಪತಿ ರೆಡ್ಡಿ, ಬಿ.ವಿ.ಶಾಮೇಗೌಡ, ವೆಂಕಟರಾಮೇಗೌಡ, ಎಂ.ಗೊಲ್ಲಹಳ್ಳಿ ಪ್ರಭಾಕರ್, ನಗವಾರ ಎನ್.ಆರ್.ಸತ್ಯಣ್ಣ, ಶಶಿಕಾಂತ್, ಗೊಲ್ಲಹಳ್ಳಿ ಜಗದೀಶ್, ಪ್ರತಾಪ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.