ಮುಳಬಾಗಿಲು: ತಾಲ್ಲೂಕಿನ ಹಲವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪ್ರತ್ಯೇಕ ಐಪಿಎಲ್ ಬೆಟ್ಟಿಂಗ್ ಪ್ರಕರಣಗಳಲ್ಲಿ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಾಲ್ಲೂಕಿನ ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಕುರುಬರಹಳ್ಳಿಯಲ್ಲಿ ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದ ಮೇಲೆ ನಂಗಲಿ ಗ್ರಾಮದ ರೋಷನ್ ಬೇಗ್( ಗೌಸ್), ಕೆ.ಶಂಕರಾಚಾರಿ ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರಿಂದ ಎರಡು ಮೊಬೈಲ್ ಹಾಗೂ ₹4 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಎನ್.ಗಡ್ಡೂರು ಬಳಿಯ ಜೆಎಸ್‌ಆರ್ ಸುಂಕ ವಸೂಲಿ ಕೇಂದ್ರ ಸಮೀಪದಲ್ಲಿ ಮೊಬೈಲ್ ಆ್ಯಪ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದ ಮೇಲೆ ನಂಗಲಿ ಗ್ರಾಮದ ಸುಬ್ರಮಣಿ, ಯಡಹಳ್ಳಿ ಗ್ರಾಮದ ಶಿವಶಂಕರ್ ಎಂಬುವವರನ್ನು ಬಂಧಿಸಲಾಗಿದೆ.
ಮುಳಬಾಗಿಲು ನಗರ ಠಾಣಾ ವ್ಯಾಪ್ತಿಯಲ್ಲಿ ಕೆಜಿಎಫ್ ರಸ್ತೆಯ ಹೈದರ್‌ವಲ್ಲಿ ದರ್ಗಾದ ಬಳಿ ಮುಜಾವರ್ ಮೊಹಲ್ಲಾದ ಜುಬೇರ್ ಪಾಷ, ಬೈಯಪ್ಪನಹಳ್ಳಿ ರಸ್ತೆಯ ಎಪಿಎಂಸಿ ಮಾರುಕಟ್ಟೆಯ ಒಳಗಿನ ದೇವಾಲಯದ ಹಿಂಭಾಗದಲ್ಲಿ ಬೆಟ್ಟಿಂಗ್ ಆಡುತ್ತಿದ್ದ ಆರೋಪದ ಮೇಲೆ ಸದಾಖತ್ ಹಾಗೂ ನೇತಾಜಿ ಕ್ರೀಡಾಂಗಣದ ಇಮ್ರಾನ್ ಎಂಬುವವರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುಳಬಾಗಿಲು ನಗರದಲ್ಲಿ ಹಲವಾರು ಮಂದಿ ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದರೂ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸದೆ ಇರುವುದು ಸಂಶಯ ಮೂಡಿಸಿದೆ ಎಂದು ಸಾರ್ವಜನಿಕರು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.