ADVERTISEMENT

ಲೈಂಗಿಕ ಅಲ್ಪಸಂಖ್ಯಾತರು ಸಮುದಾಯದ ಭಾಗ: ಸೆಲ್ವಮಣಿ ಅಭಿಪ್ರಾಯ

ಸೌಹಾರ್ದ ಸಮುದಾಯ ಹಬ್ಬ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 15:41 IST
Last Updated 19 ಮಾರ್ಚ್ 2021, 15:41 IST
ಕೋಲಾರದಲ್ಲಿ ಶುಕ್ರವಾರ ನಡೆದ ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಸೌಹಾರ್ದ ಸಮುದಾಯ ಹಬ್ಬ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಲೈಂಗಿಕ ಅಲ್ಪಸಂಖ್ಯಾತರಿಗೆ ಗುರುತಿನ ಚೀಟಿ ವಿತರಿಸಿದರು.
ಕೋಲಾರದಲ್ಲಿ ಶುಕ್ರವಾರ ನಡೆದ ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಸೌಹಾರ್ದ ಸಮುದಾಯ ಹಬ್ಬ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಲೈಂಗಿಕ ಅಲ್ಪಸಂಖ್ಯಾತರಿಗೆ ಗುರುತಿನ ಚೀಟಿ ವಿತರಿಸಿದರು.   

ಕೋಲಾರ: ‘ಲಿಂಗತ್ವ ಅಥವಾ ಲೈಂಗಿಕ ಅಲ್ಪಸಂಖ್ಯಾತರು ನಮ್ಮಂತೆಯೇ ಮನುಷ್ಯರು. ಸಾರ್ವಜನಿಕರು ಅವರನ್ನು ಸಮುದಾಯದ ಭಾಗವಾಗಿ ನೋಡಬೇಕು’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಕಿವಿಮಾತು ಹೇಳಿದರು.

ಸಮ್ಮಿಲನ ಹಾಗೂ ಸಂಗಮ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಸೌಹಾರ್ದ ಸಮುದಾಯ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ನಮ್ಮ ಬದುಕೇ ಕಷ್ಟದಲ್ಲಿದೆ. ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಬದುಕು ಇನ್ನೂ ಶೋಚನೀಯವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಲೈಂಗಿಕ ಅಲ್ಪಸಂಖ್ಯಾತರಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ನ ತೀರ್ಪು ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಮಸೂದೆ ಜಾರಿ ನಂತರ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆದಿವೆ. ಇನ್ನೂ ಆರಂಭಿಕ ಹಂತದಲ್ಲಿರುವ ಈ ಕಾರ್ಯ ಚುರುಕಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಸರ್ಕಾರದ ವಿಶೇಷ ವಸತಿ ಯೋಜನೆಗಳಲ್ಲಿ ಅರ್ಹ ಲೈಂಗಿಕ ಅಲ್ಪಸಂಖ್ಯಾತರನ್ನು ಗುರುತಿಸಿ ಸಮಿತಿ ಮುಂದೆ ತನ್ನಿ. ಆ ಅರ್ಹರಿಗೆ ವಿವಿಧ ಇಲಾಖೆಗಳ ಯೋಜನೆಗಳ ಸವಲತ್ತು ತಲುಪಿಸಬೇಕು. ಈ ಸಂಬಂಧ ಪ್ರತಿ ತಿಂಗಳು ಶಿಬಿರ, ಅದಾಲತ್ ನಡೆಸಿ ಕುಂದು ಕೊರತೆ ಆಲಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪಾಲಿ ಅವರಿಗೆ ಸೂಚನೆ ನೀಡಿದರು.

‘ಲೈಂಗಿಕ ಅಲ್ಪಸಂಖ್ಯಾತರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಬೇಕು. ಅಗತ್ಯವಿದ್ದರೆ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ. ಸಹಕಾರ ಸಂಘ ರಚಿಸಿಕೊಂಡು ಆರ್ಥಿಕ ನೆರವು ಪಡೆದು ಸ್ವಾವಲಂಬಿಗಳಾಗಿ. ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯಿರಿ’ ಎಂದು ತಿಳಿಸಿದರು.

‘ಶಾಲಾ ಕಾಲೇಜುಗಳಲ್ಲಿ ಓದಿದ್ದು ಮಾತ್ರ ಶಿಕ್ಷಣವಲ್ಲ. ಹಲವರು ಎಸ್ಸೆಸ್ಸೆಲ್ಸಿ ಓದಿದ್ದರೂ ದೈನಂದಿನ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಸುಶಿಕ್ಷಿತರಿಗಿಂತ ಜೀವನದಲ್ಲಿ ಮುಂದಿರುತ್ತಾರೆ. ಜೀವನದ ಪಾಠ ಕಲಿಸುವುದೇ ಶಿಕ್ಷಣ. ಶಾಲೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಶಿಕ್ಷಣ ಅಂಕ ಗಳಿಕೆಗಷ್ಟೇ ಪ್ರಯೋಜನಕ್ಕೆ ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಹೋರಾಟಕ್ಕೆ ಸಜ್ಜಾಗಿ: ‘ಲೈಂಗಿಕ ಅಲ್ಪಸಂಖ್ಯಾತರು ತಮ್ಮ ಹಕ್ಕುಗಳಿಗೆ ಸರ್ಕಾರಗಳನ್ನು ನೆಚ್ಚಿ ಕೂತರೆ ಆಗುವುದಿಲ್ಲ. ಹಕ್ಕು ಪಡೆದುಕೊಳ್ಳಲು ಬೀದಿಗಿಳಿದು ಹೋರಾಡಬೇಕು’ ಎಂದು ಸಂಗಮ ಸಂಸ್ಥೆಯ ವ್ಯವಸ್ಥಾಪಕಿ ನಿಶಾ ಗೂಳೂರು ಹೇಳಿದರು.

‘ಈ ಹಿಂದೆ ಮಹಿಳೆಯರು ಮತ್ತು ದಲಿತರು ತಮ್ಮ ಹಕ್ಕು ಪಡೆಯಲು ಬೀದಿಗಿಳಿದು ನಾನಾ ರೀತಿಯಲ್ಲಿ ಹೋರಾಟ ನಡೆಸಿದ್ದರು. ಅದರ ಫಲವಾಗಿ ಅವರಿಗೆ ಹಕ್ಕು ಸಿಕ್ಕಿದವು. ಅದೇ ರೀತಿ ಲೈಂಗಿಕ ಅಲ್ಪಸಂಖ್ಯಾತರು ಹೋರಾಟ ನಡೆಸಿದರೆ ಹಕ್ಕು ಪಡೆದುಕೊಳ್ಳಬಹುದು. ಪ್ರತಿಯೊಬ್ಬರೂ ಹೋರಾಟಕ್ಕೆ ಸಜ್ಜಾಗಬೇಕು’ ಎಂದರು.

‘ತೃತೀಯ ಲಿಂಗಿಗಳ ಹೋರಾಟ ಅಂತರರಾಷ್ಟ್ರೀಯ ಮಟ್ಟದಲ್ಲಿ 1970ರಲ್ಲಿ ಮತ್ತು ಭಾರತದಲ್ಲಿ 1998ರಲ್ಲಿ ಆರಂಭವಾಯಿತು. ಅಂಬೇಡ್ಕರ್ ನೀಡಿದ ಸಂವಿಧಾನದ ಅಸ್ತ್ರದಿಂದ ಲೈಂಗಿಕ ಅಲ್ಪಸಂಖ್ಯಾತರು ಎಲ್ಲರಂತೆ ಸಮನಾಗಿ ಬದುಕುವ ಹಕ್ಕು ಸಿಕ್ಕಿದೆ’ ಎಂದು ವಿವರಿಸಿದರು.

ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಜಗದೀಶ್, ಸಂಗಮ ಸಂಸ್ಥೆ ಕಾರ್ಯಕಾರಿ ನಿರ್ದೇಶಕ ರಾಜೇಶ್ ಶ್ರೀನಿವಾಸ್, ಜಿಲ್ಲಾ ಸಂಯೋಜಕಿ ಅಶ್ವಿನಿ ರಾಜನ್, ಕಾರ್ಯದರ್ಶಿ ಎಂ.ಹರೀಶ್, ಸಮ್ಮಿಲನ ಸಂಸ್ಥೆ ಖಜಾಂಚಿ ರಾಧಿಕಾ, ಯೋಜನಾ ವ್ಯವಸ್ಥಾಪಕ ಜಿ.ಕೃಷ್ಣಮೂರ್ತಿ, ಕರ್ನಾಟಕ ಲೈಂಗಿಕ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುಳಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.