ADVERTISEMENT

ಕೋಲಾರ | ಶಕ್ತಿ ಯೋಜನೆ ಸಂಭ್ರಮ; ಗ್ಯಾರಂಟಿ ಅಬಾಧಿತ

ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ 10 ಕೋಟಿಗೂ ಅಧಿಕ ಮಹಿಳೆಯರು ಪ್ರಯಾಣ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 5:28 IST
Last Updated 15 ಜುಲೈ 2025, 5:28 IST
ಕೋಲಾರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸೋಮವಾರ ಶಕ್ತಿ ಯೋಜನೆಯ 500 ಕೋಟಿ ಮಹಿಳಾ ಪ್ರಯಾಣಿಕರ ಪ್ರಯಾಣ ಪ್ರಯುಕ್ತ ಶಾಸಕ ಕೊತ್ತೂರು ಮಂಜುನಾಥ್ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಯಿತು
ಕೋಲಾರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸೋಮವಾರ ಶಕ್ತಿ ಯೋಜನೆಯ 500 ಕೋಟಿ ಮಹಿಳಾ ಪ್ರಯಾಣಿಕರ ಪ್ರಯಾಣ ಪ್ರಯುಕ್ತ ಶಾಸಕ ಕೊತ್ತೂರು ಮಂಜುನಾಥ್ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಯಿತು    

ಕೋಲಾರ: ರಾಜ್ಯದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯ 500 ಕೋಟಿ ಮಹಿಳಾ ಪ್ರಯಾಣಿಕರ ಪ್ರಯಾಣ ಅಂಗವಾಗಿ ಸೋಮವಾರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಯಿತು. 

ಬಸ್‌ನೊಳಗೆ ಹತ್ತಿ ಒಂದಿಷ್ಟು ಹೊತ್ತು ಕಂಡಕ್ಟರ್‌ ಆದ ಅವರು ಮಹಿಳಾ ಪ್ರಯಾಣಿಕರಿಗೆ ಟಿಕೆಟ್‌ ವಿತರಿಸಿದರು. ಜೊತೆಗೆ ಸಿಹಿ ಕೂಡ ವಿತರಿಸಿದರು.    

ಬಳಿಕ ಮಾತನಾಡಿದ ಅವರು, ‘2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನೇತೃತ್ವದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಲಾಗಿತ್ತು. ಅದರಂತೆ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಜಾರಿಗೊಳಿಸಲಾಯಿತು. 202ರ ಜೂನ್ 11ರಂದು ಶಕ್ತಿ ಯೋಜನೆಗೆ ಚಾಲನೆ ನೀಡಿ ಅಂದಿನಿಂದ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಲಾಯಿತು. ಈವರೆಗೆ ರಾಜ್ಯದಲ್ಲಿ 500 ಕೋಟಿಗಿಂತ ಹೆಚ್ವಿನ ಮಹಿಳಾ ಪ್ರಯಾಣಿಕರು ಯೋಜನೆಯ ಲಾಭ ಪಡೆದಿದ್ದಾರೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ 10.27 ಕೋಟಿ ಮಹಿಳಾ ಪ್ರಯಾಣಿಕರು ಈ ಯೋಜನೆಯ ಸೌಲಭ್ಯವನ್ನು ಪಡೆದಿದ್ದಾರೆ. ಕೋಲಾರ ತಾಲ್ಲೂಕಿನಲ್ಲಿ 2.75 ಲಕ್ಷ, ಕೆಜಿಎಫ್‌ ತಾಲ್ಲೂಕಿನಲ್ಲಿ 2.27 ಲಕ್ಷ, ಶ್ರೀನಿವಾಸಪುರ ತಾಲ್ಲೂಕಿನಲ್ಲಿ 1.73 ಲಕ್ಷ, ಮುಳಬಾಗಿಲು ತಾಲ್ಲೂಕಿನಲ್ಲಿ 1.79 ಲಕ್ಷ ಮತ್ತು ಮಾಲೂರು ತಾಲ್ಲೂಕಿನಲ್ಲಿ 1.73 ಲಕ್ಷದಷ್ಟು ಪ್ರಯಾಣಿಕರು ಸೌಲಭ್ಯ ಪಡೆದಿದ್ದಾರೆ. ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಎಲ್ಲಿಯವರೆಗೆ ಜನರ ಬೆಂಬಲ ಹಾಗೂ ಅಧಿಕಾರ ಇರುತ್ತದೆಯೋ ಅಲ್ಲಿಯವರೆಗೆ ಯೋಜನೆಗಳು ಮುಂದುವರಿಯುತ್ತವೆ’ ಎಂದರು.

‘ಶಕ್ತಿ ಯೋಜನೆಯಿಂದ ರಾಜ್ಯದ ಉದ್ದಗಲಕ್ಕೂ ಮಹಿಳೆಯರು ಉಚಿತವಾಗಿ ಸಂಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಡವರಿಗೆ ಕೊಟ್ಟಿರುವ ಸೌಲಭ್ಯ ಇದಾಗಿದೆ. ಗ್ಯಾರಂಟಿ ಯೋಜನೆ ಬಗ್ಗೆ ಯಾರು, ಎಷ್ಟೇ ಟೀಕೆ ಮಾಡಿದರೂ ಅವುಗಳು ಕಾಲಕ್ರಮೇಣ ಸತ್ತು ಹೋಗುತ್ತವೆ. ನಮ್ಮ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿರುವ ಕಾರಣಕ್ಕೆ ಕಾಂಗ್ರೆಸ್ ಯಶಸ್ಸು ಪಡೆದಿದೆ. ಇದೆಲ್ಲವನ್ನು ಜಾರಿ ಮಾಡಲು ಜನ ನೀಡಿರುವ ಶಕ್ತಿಯಿಂದ ನಮಗೆ ಬಲಬಂದಿದೆ’ ಎಂದು ಹೇಳಿದರು.

‘ಗೃಹ ಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಹಣ ಹಂಚಿಕೆಯಲ್ಲಿ ಒಂದೆರಡು ತಿಂಗಳು ಬಾಕಿ ಇರಬಹುದು, 8 ತಿಂಗಳು ಬಾಕಿಯಿಲ್ಲ. ಇದೀಗ 22 ತಿಂಗಳ ಹಣ ಜಮಾ ಆಗಿದ್ದು, ಬಾಕಿ ಹಣ ಒಂದೇ ಬಾರಿ ಬಿಡುಗಡೆಯಾಗುತ್ತದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಸಚಿವರು, ಮುಖ್ಯಮಂತ್ರಿ ಕಾರ್ಯ ಒತ್ತಡದಲ್ಲಿ ಇರುವುದರಿಂದಲೂ ತಡವಾಗುತ್ತದೆ. ತಡವಾಗಿದ್ದಕ್ಕೆ ಬೇಸರ ಮಾಡಿಕೊಳ್ಳುವುದು ಬೇಡ’ ಎಂದು ತಿಳಿಸಿದರು.

ಕೆಎಸ್‌ಆರ್‌ಟಿಸಿ ಕೋಲಾರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್‌ ಮಾತನಾಡಿ, ‘ಮಹಿಳೆ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಲು ಮುಂದಾದಾದರೆ ಅವರೊಂದಿಗೆ ಮಕ್ಕಳು ಹಾಗೂ ಪತಿ ಕೂಡ ಪ್ರಯಾಣಸುತ್ತಾರೆ. ಇದರಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆದಾಯ ಹೆಚ್ಚಳವಾಗುತ್ತಿದ್ದು, ಜಿಲ್ಲೆಯಲ್ಲಿ ಪ್ರತಿ ದಿನ 1.32 ಲಕ್ಷಕೂ ಅಧಿಕ ಮಹಿಳೆಯರು ಈ ಉಚಿತ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

‘ನಗರಕ್ಕೆ ವಿಶೇಷವಾಗಿ ನಗರ ಸಾರಿಗೆಯನ್ನು 4 ಬಸ್ಸುಗಳ ಮೂಲಕ 2 ಮಾರ್ಗಗಳನ್ನು ಪ್ರಾರಂಭ ಮಾಡಿದ್ದು ಇದರಲ್ಲಿಯೂ ಶಕ್ತಿಯೋಜನೆಯನ್ನು ಪಡೆಯುತ್ತಿದ್ದಾರೆ. ಸಾರ್ವಜನಿಕರಿಂದಲೂ ಹೊಸ ಮಾರ್ಗಗಳಲ್ಲಿ ಬಸ್‌ ಸಂಚಾರಕ್ಕೆ ಬೇಡಿಕೆ ಬರುತ್ತಿದೆ. ಪ್ರಸುತ ಇರುವ ಬಸ್‌ಗಳಲ್ಲಿ ಜನದಟ್ಟಣೆ ತಪ್ಪಿಸುವ ಉದ್ದೇಶದಿಂದ ಬಸ್‌ಗಳ ಟ್ರಿಪ್‌ ಅಧಿಕಗೊಳಿಸಲಾಗಿದೆ’ ಎಂದು ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್, ತಾಲ್ಲೂಕು ಅಧ್ಯಕ್ಷ ವೇಮಗಲ್ ಮುನಿಯಪ್ಪ, ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಸದಸ್ಯರಾದ ಅಫ್ಸರ್, ರಫೀಕ್, ಕೆಎಸ್‌ಆರ್‌ಟಿಸಿ ಕೋಲಾರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್, ಮ್ಯಾನೇಜರ್ ಶ್ರೀನಿವಾಸಯ್ಯ, ನಿಲ್ದಾಣಾಧಿಕಾರಿ ಶಿವಕುಮಾರ್, ಕೋಮುಲ್ ನಿರ್ದೇಶಕ ಶಂಷೀರ್, ಗ್ಯಾರಂಟಿ ಸಮಿತಿ ಸದಸ್ಯರಾದ ಭರತ್, ವಿನೋದ್, ಮಂಗಳಾ, ಬಾಬು, ಪುನೀತ್, ಇಮ್ರಾನ್, ವಿಜಯಕುಮಾರ್, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಕುರಿಗಳ ರಮೇಶ್, ಯಲವಾರ ರಾಜಕುಮಾರ್ ಇದ್ದರು.

ಟೀಕೆ ತಾತ್ಕಾಲಿಕ; ಕೆಲಸ ಶಾಶ್ವತ–ಕೊತ್ತೂರು ಜಿಲ್ಲೆಯಲ್ಲಿ ಪ್ರತಿ ದಿನ 1.32 ಲಕ್ಷಕೂ ಅಧಿಕ ಮಹಿಳೆಯರು ಪ್ರಯಾಣ ಬಸ್‌ ಹತ್ತಿ ಕಂಡಕ್ಟರ್‌ ಆದ ಶಾಸಕ

ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಹಣ ಹಂಚಿಕೆಯಲ್ಲಿ ಒಂದೆರಡು ತಿಂಗಳು ಬಾಕಿ ಇರಬಹುದು. 22 ತಿಂಗಳ ಹಣ ಜಮೆ ಆಗಿದ್ದು ಬಾಕಿ ಹಣ ಒಂದೇ ಬಾರಿ ಬಿಡುಗಡೆಯಾಗುತ್ತದೆ
ಕೊತ್ತೂರು ಮಂಜುನಾಥ್‌ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.