ಕೋಲಾರ: ‘ಶಿವಾಜಿ ಕುರಿತು ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಿನಿಮಾ ಮಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ಮುಂದಿನ ಪರಿಸ್ಥಿತಿ ಮನಗಂಡು ಈಗಲೇ ಸಿನಿಮಾ ನಿಲ್ಲಿಸಬೇಕು’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲೇ ಐತಿಹಾಸಿಕ ಪುರುಷರು, ಮಹಾನೀಯರ ಇದ್ದಾರೆ. ಬೇಕಾದರೆ ಅವರ ಸಿನಿಮಾ ಮಾಡಲಿ. ಕನ್ನಡಿಗರ ಎಚ್ಚರಿಕೆ ಕಡೆಗಣಿಸಿ ಸಿನಿಮಾ ಮಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ರಾಜ್ಯದಾದ್ಯಂತ ಹೋರಾಟ ನಡೆಸುತ್ತೇವೆ. ಯಾವುದೇ ಸಿನಿಮಾ ಹದ್ದುಬಸ್ತು ಮೀರಬಾರದು’ ಎಂದರು.
‘ಸಮಗ್ರ ಕನ್ನಡಿಗರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏ.26ರಂದು ರಾಜ್ಯದಾದ್ಯಂತ ಎರಡು ಕೋಟಿ ಈಡುಗಾಯಿ ಒಡೆಯುವ ಚಳವಳಿ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.
‘ಚಳವಳಿ ಅಂಗವಾಗಿ ಅಂದು ಸಮಗ್ರ ಕನ್ನಡಿಗರು ತಮ್ಮ ಮನೆಯಲ್ಲಿ, ಹೋಟೆಲ್‌ಗಳಲ್ಲಿ, ದೇಗುಲ, ಮಸೀದಿಗಳಲ್ಲಿ, ರಸ್ತೆಗಳಲ್ಲಿ ಈಡುಗಾಯಿ ಒಡೆಯಬಹುದು. ಕೋಲಾರ ಜಿಲ್ಲೆಯಲ್ಲೂ ಹೆಚ್ಚಿನ ಈಡುಗಾಯಿ ಒಡೆಯುವ ಮೂಲಕ ಚಳವಳಿ ಯಶಸ್ವಿಗೊಳಿಸಬೇಕು’ ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.