ADVERTISEMENT

ಶ್ರೀನಿವಾಸಪುರ: ಹರಿಭಕ್ತರ ಶಿವರಾತ್ರಿ, ಶಿವಭಕ್ತರ ಊರಿನ ಹೆಸರೇ ಶಿವರಾತ್ರಿಪಲ್ಲಿ

ಉತ್ತರದಲ್ಲಿ ಹಬ್ಬವಿಲ್ಲ; ದಕ್ಷಿಣದಲ್ಲಿ ಜಾಗರಣೆ ಸಂಭ್ರಮ

ಆರ್.ಚೌಡರೆಡ್ಡಿ
Published 20 ಫೆಬ್ರುವರಿ 2020, 15:26 IST
Last Updated 20 ಫೆಬ್ರುವರಿ 2020, 15:26 IST
ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರು ಶಿವರಾತ್ರಿ ಹಬ್ಬಕ್ಕೆ ಪ್ಯಾಲಿಪಿಂಡಿ ತಯಾರಿಸಲು ರಾಗಿ ಸ್ವಚ್ಛಗೊಳಿಸುತ್ತಿರುವುದು.
ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರು ಶಿವರಾತ್ರಿ ಹಬ್ಬಕ್ಕೆ ಪ್ಯಾಲಿಪಿಂಡಿ ತಯಾರಿಸಲು ರಾಗಿ ಸ್ವಚ್ಛಗೊಳಿಸುತ್ತಿರುವುದು.   

ಶ್ರೀನಿವಾಸಪುರ: ತಾಲ್ಲೂಕಿನ ಮುದಿಮಡಗು ಸಮೀಪ ಶಿವರಾತ್ರಿಪಲ್ಲಿ ಎಂಬ ಹೆಸರಿನ ಗ್ರಾಮವಿದೆ. ಆ ಗ್ರಾಮದ ಮೂಲ ಹೆಸರು ತಾಟಿಮಾನಿಪಲ್ಲಿ. ಆದರೆ ಆ ಗ್ರಾಮದಲ್ಲಿ ಶಿವರಾತ್ರಿ ಆಚರಿಸುವುದರಿಂದ ಆ ಗ್ರಾಮವನ್ನು ಶಿವರಾತ್ರಿಪಲ್ಲಿ ಎಂದು ಕರೆಯುವುದು ರೂಢಿ.

ತಾಲ್ಲೂಕಿನ ಗಡಿ ಭಾಗದ ಹೆಚ್ಚಿನ ಸಂಖ್ಯೆಯ ಗ್ರಾಮಗಳಲ್ಲಿ ಶಿವರಾತ್ರಿ ಆಚರಿಸುವುದಿಲ್ಲ. ಆದ್ದರಿಂದಲೇ ಈ ಭಾಗದಲ್ಲಿ ಶಿವರಾತ್ರಿಗೆ ಹೆಚ್ಚಿನ ಮಾನ್ಯತೆ ಇಲ್ಲ. ಅಂದ ಮಾತ್ರಕ್ಕೆ ಶಿವರಾತ್ರಿ ಆಚರಿಸುವ ಗ್ರಾಮದ
ಜನರು ಶೈವ ಪಂಥಕ್ಕೆ ಸೇರಿದವರೇನಲ್ಲ.

ಗಡಿ ಭಾಗದ ಬಹುತೇಕ ಕುಟುಂಬಗಳು ವೈಕುಂಠ ಏಕಾದಶಿ ಆಚರಿಸುತ್ತವೆ. ಇವರನ್ನು ಕದಿರಿ ಕಾಪುಲು, ಅಥವಾ ಕದಿರಿ ದೇವರ ಭಕ್ತರು ಎಂದು ಕರೆಯುವುದು ವಾಡಿಕೆ. ಆಂಧ್ರಪ್ರದೇಶದ ಕದರಿ ನರಸಿಂಹಸ್ವಾಮಿ ಭಕ್ತರು ಇವರು. ಹಾಗಾಗಿ ಶಿವನಿಗೆ ಸಂಬಂಧಿಸಿದ ಶಿವರಾತ್ರಿ ಹಬ್ಬವನ್ನು ಆಚರಿಸುವುದಿಲ್ಲ. ಗಡಿ ಗ್ರಾಮ ರಾಯಲ್ಪಾಡುವಿನಲ್ಲಿ ಕಾಶಿ ವಿಶ್ವನಾಥ ದೇವಾಲಯವಿದೆ. ಶಿವರಾತ್ರಿಯಂದು ಅಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗುತ್ತದೆ. ಉಳಿದ ಶಿವ ದೇಗುಲಗಳಲ್ಲೂ ವಿಶೇಷ ಪೂಜೆ ನಡೆಯುತ್ತದೆ.

ADVERTISEMENT

ಇದು ತಾಲ್ಲೂಕಿನ ಉತ್ತರ ಭಾಗದ ಕತೆಯಾದರೆ, ದಕ್ಷಿಣ ಭಾಗದಲ್ಲಿ ಶಿವರಾತ್ರಿ ಆಚರಣೆಗೆ ಹೆಚ್ಚಿನ ಮಾನ್ಯತೆ ಇದೆ. ಇಲ್ಲಿ ಕದಿರಿ ದೇವರ ಭಕ್ತರೂ ಶಿವರಾತ್ರಿ ಅಚರಿಸುತ್ತಾರೆ. ಜಾಗರಣೆ ಮಾಡುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಶಿವರಾತ್ರಿ ಆಚರಣೆ ಅತ್ಯಂತ ಸರಳ. ಈ ಹಬ್ಬದಲ್ಲಿ ಸಡಗರ ಕಂಡುಬರುವುದಿಲ್ಲ.

ಈ ಹಬ್ಬದಲ್ಲಿ ಸಾಮೆ ಹಿಟ್ಟು, ಉರಿದ ರಾಗಿ ಹಿಟ್ಟು (ಪ್ಯಾಲಿಪಿಂಡಿ) ಪ್ರಮುಖ ಪಾತ್ರ ವಹಿಸುತ್ತವೆ. ರೈತರು ಸಾಮೆ ಬೆಳೆಯುತ್ತಿದ್ದ ಕಾಲದಲ್ಲಿ, ಸಾಮೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಹದವಾಗಿ ಉರಿದು ಪುರಿ ತಯಾರಿಸುತ್ತಿದ್ದರು. ರಾಗಿಯನ್ನೂ ಅಷ್ಟೆ ಹದವಾಗಿ ಉರಿದು ಬೀಸೊ ಕಲ್ಲಿನಲ್ಲಿ ಬೀಸಿ ಹಿಟ್ಟು ಮಾಡುತ್ತಿದ್ದರು. ಸಾಮೆ ಪುರಿಯನ್ನು ಕುಟ್ಟಿ ಹಿಟ್ಟು ಮಾಡುತ್ತಿದ್ದರು.

ಬದಲಾದ ಪರಿಸ್ಥಿತಿಯಲ್ಲಿ ರೈತರು ಸಾಮೆ ಬೆಳೆಯುವುದು ಅಪರೂಪವಾಗಿದೆ. ಹಾಗಾಗಿ ಹಬ್ಬಕ್ಕೆ ಅಗತ್ಯವಾದ ಸಾಮೆ ಹಿಟ್ಟು ಅಥವಾ ಪುರಿ ಸಿಗುತ್ತಿಲ್ಲ. ಕೆಲವರು ಸಾಮೆ ಖರೀದಿಸಿ ಪುರಿ ಮಾಡಿಸಿ ಸಂತೆ ಹಾಗೂ ಮಾರುಕಟ್ಟೆಗೆ ಕೊಂಡೊಯ್ದು ಮಾರುತ್ತಿದ್ದಾರೆ.

ಹಬ್ಬದ ಸಮಯದಲ್ಲಿ ಸಾಮೆ ಪುರಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಬೆಲೆಯೂ ಹೆಚ್ಚುತ್ತದೆ. ಈ ಸಂದರ್ಭ ಬಿಟ್ಟರೆ ಬೇರೆ ಸಂದರ್ಭದಲ್ಲಿ ಈ ಉತ್ಪನ್ನಕ್ಕೆ ಬೇಡಿಕೆ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.