ADVERTISEMENT

ಕೋಲಾರ | ಸೈನಿಕರು–ರೈತರ ರಕ್ಷಣೆಯಲ್ಲಿ ವಿಫಲ: ಕೇಂದ್ರದ ವಿರುದ್ಧ ಕಾಂಗ್ರೆಸ್ ಕಿಡಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 12:57 IST
Last Updated 19 ಜೂನ್ 2020, 12:57 IST
ರಾಹುಲ್‌ ಗಾಂಧಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಿಸಾನ್ ಖೇತ್‌ ಜಿಲ್ಲಾ ಘಟಕವು ಕೋಲಾರ ತಾಲ್ಲೂಕಿನ ಮೂರಂಡಹಳ್ಳಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಲಾಯಿತು.
ರಾಹುಲ್‌ ಗಾಂಧಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಿಸಾನ್ ಖೇತ್‌ ಜಿಲ್ಲಾ ಘಟಕವು ಕೋಲಾರ ತಾಲ್ಲೂಕಿನ ಮೂರಂಡಹಳ್ಳಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಲಾಯಿತು.   

ಕೋಲಾರ: ‘ದೇಶದ ಸೈನಿಕರು, ರೈತರು ಹಾಗೂ ಕಾರ್ಮಿಕರಿಗೆ ರಕ್ಷಣೆ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಆರೋಪಿಸಿದರು.

ರಾಹುಲ್‌ ಗಾಂಧಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಿಸಾನ್ ಖೇತ್‌ ಜಿಲ್ಲಾ ಘಟಕವು ತಾಲ್ಲೂಕಿನ ಮೂರಂಡಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೈತರಿಗೆ ಬಿತ್ತನೆ ಬೀಜ ವಿತರಣೆ ಹಾಗೂ ಲಡಾಖ್‌ನಲ್ಲಿ ಹುತಾತ್ಮರಾದ ಯೋಧರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

‘ಸೈನಿಕರು ದೇಶ ರಕ್ಷಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಗಡಿಯಲ್ಲಿ ಹಗಲು ರಾತ್ರಿ ದೇಶ ಕಾಯುತ್ತಿದ್ದಾರೆ. ಶತ್ರು ರಾಷ್ಟ್ರಗಳ ದಾಳಿಯಲ್ಲಿ ದೇಶದ ಸೈನಿಕರು ಹುತಾತ್ಮರಾಗುತ್ತಿದ್ದಾರೆ. ಶತ್ರು ರಾಷ್ಟ್ರಗಳ ದಾಳಿಯನ್ನು ಪ್ರಧಾನಿಯವರು ಹಾಗೂ ಕೇಂದ್ರ ರಕ್ಷಣಾ ಸಚಿವರು ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿಯವರು ವಿದೇಶಿ ಏಜೆಂಟರಂತೆ ವರ್ತಿಸುತ್ತಿದ್ದಾರೆ. 2019ರಲ್ಲಿ ನಡೆದ ಪುಲ್ವಾಮಾ ದಾಳಿಯ ಕಹಿ ನೆನಪು ಮಾಸುವ ಮುನ್ನವೇ ಚೀನಾ ಗಡಿಯಲ್ಲಿ ಮತ್ತೆ ಅಂತಹ ಘಟನೆಯೇ ನಡೆದಿದೆ. ಇದಕ್ಕೆ ಕೇಂದ್ರದ ದ್ವಂದ್ವ ನೀತಿಯೇ ಕಾರಣ’ ಎಂದು ಟೀಕಿಸಿದರು.

‘ದೇಶಕ್ಕೆ ಅನ್ನ ನೀಡುವ ರೈತರು ಕೇಂದ್ರದ ಅವೈಜ್ಞಾನಿಕ ಕೃಷಿ ನೀತಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಉತ್ಪನ್ನಗಳ ಬೆಲೆ ಕುಸಿದಿದ್ದು, ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೋದಿ ಅವರ ಏಕಪಕ್ಷೀಯ ನಿರ್ಧಾರದಿಂದ ಕೃಷಿ ಬಿಕ್ಕಟ್ಟು ಸೃಷ್ಟಿಯಾಗಿದೆ’ ಎಂದು ಕಿಡಿಕಾರಿದರು.

ಕಾಳಜಿಯಿಲ್ಲ: ‘ಮೋದಿ ಅವರು ರೈತರ ಪರವಾದ ಯೋಜನೆಗಳನ್ನು ಜಾರಿಗೆ ತರುವ ಬದಲು ಬಂಡವಾಳಶಾಹಿಗಳ ಪರ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಅವರಿಗೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ’ ಎಂದು ಕಾಂಗ್ರೆಸ್ ಕಿಸಾನ್ ಖೇತ್‌ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ದೂರಿದರು.

‘ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ರೈತರು, ಸೈನಿಕರು ನೆಮ್ಮದಿಯಿಂದ ಇದ್ದರು. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ರೈತರು ಹಾಗೂ ಸೈನಿಕರಿಗೆ ಕಷ್ಟದ ದಿನಗಳು ಆರಂಭವಾದವು. ಕೇಂದ್ರವು ವಿದೇಶಿ ವಸ್ತುಗಳ ಆಮದಿಗೆ ಅವಕಾಶ ನೀಡಿ ಏಜೆಂಟ್ ಮಾದರಿಯಲ್ಲಿ ಕೆಲಸ ಮಾಡುತ್ತಿದೆ. ದೇಶದ ಪ್ರತಿ ಪ್ರಜೆಯೂ ಚೀನಾ ಸೇರಿದಂತೆ ವಿದೇಶಿ ವಸ್ತುಗಳ ಬಳಕೆ ನಿಷೇಧಿಸಬೇಕು’ ಎಂದು ಮನವಿ ಮಾಡಿದರು.

‘ರೈತರು ಕೃಷಿಗೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕೊರೊನಾ ಸೋಂಕಿನಿಂದ ಇಡೀ ದೇಶ ತಲ್ಲಣಗೊಂಡಿದೆ. ಲಾಕ್‌ಡೌನ್ ಅವಧಿಯಲ್ಲಿ ತರಕಾರಿ, ಹಣ್ಣು, ಹೂವಿನ ಬೆಲೆ ಪಾತಾಳಕ್ಕೆ ಕುಸಿದು ರೈತರಿಗೆ ಹೆಚ್ಚಿನ ನಷ್ಟವಾಯಿತು. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು ಮಾಡಬೇಕು. ಇಲ್ಲದಿದ್ದರೆ ರಾಜ್ಯದೆಲ್ಲೆಡೆ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಕಂಟೈನ್‌ಮೆಂಟ್‌ ಝೋನ್‌ ನಿವಾಸಿಗಳಿಗೆ ತರಕಾರಿ ವಿತರಿಸಲಾಯಿತು. ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಎಸ್.ಮಂಜುನಾಥ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಉದಯ್‌ಶಂಕರ್, ಕಾಂಗ್ರೆಸ್‌ ಕಿಸಾನ್ ಖೇತ್‌ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ್, ನಗರಸಭೆ ಸದಸ್ಯ ಪ್ರಸಾದ್‌ಬಾಬು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.