ADVERTISEMENT

ಶ್ರೀನಿವಾಸಪುರ: ರೈತರು, ಅಧಿಕಾರಿಗಳ ಮಧ್ಯೆ ಘರ್ಷಣೆ

ಅರಣ್ಯ ಜಮೀನು ಪ್ರವೇಶಿಸಿದ್ದ ಪ್ರಕರಣದಲ್ಲಿ ರೈತರು, ‌ಟ್ರಾಕ್ಟರ್ ವಶ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 14:43 IST
Last Updated 13 ಏಪ್ರಿಲ್ 2025, 14:43 IST
ಶ್ರೀನಿವಾಸಪುರ ತಾಲ್ಲೂಕಿನ ಕೇತಗಾನಹಳ್ಳಿ ಗೇಟ್ ಬಳಿ ಭಾನುವಾರ ರಸ್ತೆ ಮಧ್ಯೆ ಕುಳಿತು ರೈತರು ಪ್ರತಿಭಟನೆ ನಡೆಸಿದರು
ಶ್ರೀನಿವಾಸಪುರ ತಾಲ್ಲೂಕಿನ ಕೇತಗಾನಹಳ್ಳಿ ಗೇಟ್ ಬಳಿ ಭಾನುವಾರ ರಸ್ತೆ ಮಧ್ಯೆ ಕುಳಿತು ರೈತರು ಪ್ರತಿಭಟನೆ ನಡೆಸಿದರು   

ಶ್ರೀನಿವಾಸಪುರ (ಕೋಲಾರ): ತಾಲ್ಲೂಕಿನಲ್ಲಿ ಕೇತಾಗನಹಳ್ಳಿಯಲ್ಲಿ ಅರಣ್ಯ ಜಮೀನಿನಲ್ಲಿ ಅತಿಕ್ರಮ ಪ್ರವೇಶಿಸಿ ಉಳುಮೆ ಮಾಡಿದ ಪ್ರಕರಣದಲ್ಲಿ ಭಾನುವಾರ ರೈತರು ಹಾಗೂ ಅರಣ್ಯಾಧಿಕಾರಿಗಳ ಮಧ್ಯೆ ಮತ್ತೆ ಗಲಾಟೆ ನಡೆದಿದೆ.

ಕೃಷ್ಣಪ್ಪ ಸೇರಿದಂತೆ ಮೂವರು ರೈತರನ್ನು ಅರಣ್ಯಾಧಿಕಾರಿಗಳು ಮುಂಜಾನೆ ವಶಕ್ಕೆ ಪಡೆದಿದ್ದಾರೆ. ಇದಲ್ಲದೇ, ಎರಡು ಟ್ರಾಕ್ಟರ್‌ಗಳನ್ನೂ ವಶಕ್ಕೆ ಪಡೆದಿದ್ದರಿಂದ ರೈತರು ಹಾಗೂ ಅರಣ್ಯ‌ ಇಲಾಖೆ ಮಧ್ಯೆ ಹೈಡ್ರಾಮಾ ನಡೆಯಿತು.

ಅರಣ್ಯಾಧಿಕಾರಿಗಳು ರೈತರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ಕೇತಗಾನಹಳ್ಳಿ ಗೇಟ್ ಬಳಿ ನೂರಾರು ರೈತರು ಜಮಾಯಿಸಿ ಪ್ರತಿಭಟನೆ ನಡೆಸಿದರು. ವಶಕ್ಕೆ ಪಡೆದಿರುವ ರೈತರು ಮತ್ತು ಟ್ರಾಕ್ಟರ್‌ಗಳನ್ನು ಕೂಡಲೇ ಬಿಡುಗಡೆ‌ ಮಾಡುವಂತೆ ಒತ್ತಾಯಿಸಿದರು. 

ADVERTISEMENT

ಇದಕ್ಕೆ ಕೆಲವು ಕಾಂಗ್ರೆಸ್‌ ಮುಖಂಡರು ಹಾಗೂ ಸ್ಥಳೀಯರು ಸಾಥ್ ನೀಡಿದರು. ರಸ್ತೆ ಮಧ್ಯೆ ಟೈಯರ್‌ಗೆ ಬೆಂಕಿ ಹಚ್ಚಿ, ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಾಗರಾಜ್ ಎಂಬ ರೈತ ಮೈಮೇಲೆ  ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ರಸ್ತೆ ಮಧ್ಯೆ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೊಲೀಸರು ಪಕ್ಕಕ್ಕೆ ಕಳಿಸಿ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದರು. ಇಷ್ಟಾಗಿಯೂ ರೈತರು ರಸ್ತೆ ಬದಿಯಲ್ಲೇ‌ ಪ್ರತಿಭಟನೆ ಮುಂದುವರಿಸಿದರು. ಕಾನೂನು ಸುವ್ಯವಸ್ಥೆ ನಿಯಂತ್ರಣ ನಿಟ್ಟಿನಲ್ಲಿ ‌ಬೇಡಿಕೆಗೆ ಸ್ಪಂದಿಸಿದ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮೂವರು ರೈತರನ್ನು ಬಿಡುಗಡೆಗೊಳಿಸಿದರು‌‌.

2023 ರಲ್ಲಿ ಅರಣ್ಯ ಇಲಾಖೆ ಒತ್ತುವರಿ ತೆರವುಗೊಳಿಸಿದ್ದ ಅರಣ್ಯ ಪ್ರದೇಶಕ್ಕೆ ಕಳೆದ ವಾರ (ಏ.5) ರೈತರು ಟ್ರಾಕ್ಟರ್‌ಗಳೊಂದಿಗೆ ಪ್ರವೇಶಿಸಿ ಉಳುಮೆ ಮಾಡಿದ್ದರು. ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದ ಅರಣ್ಯ ಭೂಮಿಗೆ ಪ್ರವೇಶಿಸಿ ಉಳುಮೆ ಮಾಡಿ ನೆಡುತೋಪು ನಾಶ ಮಾಡಿದ್ದರಿಂದ ಸಂಘರ್ಷ ಉಂಟಾಗಿತ್ತು‌.

ಈ ಸಂಬಂಧ ಈಗಾಗಲೇ ಹಲವು ರೈತರ ಮೇಲೆ ಪ್ರಕರಣ ದಾಖಲಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಭಾನುವಾರ ಏಕಾಏಕಿ ರೈತರ ಮನೆಗಳ ಬಳಿಗೆ ತೆರಳಿ ಮೂವರು ರೈತರು ಹಾಗೂ‌ ಮೂರು ಟ್ರಾಕ್ಟರ್‌ಗಳನ್ನು ವಶಕ್ಕೆ ಪಡೆದರು. ಇದರಿಂದಾಗಿ ರೊಚ್ಚಿಗೆದ್ದ ರೈತರು, ಸ್ಥಳೀಯರು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹೋಗದಂತೆ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಈ ವೇಳೆ ರೈತರು ಹಾಗು ಅರಣ್ಯಾಧಿಕಾರಿಗಳ ಮಧ್ಯೆ ವಾಗ್ವಾದ, ನೂಕಾಟ, ತಳ್ಳಾಟ ನಡೆಯಿತು. ಕೇತಗಾನಹಳ್ಳಿ ಗೇಟ್ ಬಳಿ ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಪದೇಪದೇ ರೈತರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಮ್ಮ ಬಳಿ ದಾಖಲೆಗಳಿದ್ದರೂ ರಾತ್ರೋರಾತ್ರಿ ಜೆಸಿಬಿ ತಂದು ನಮ್ಮ ಜಮೀನಿನ ಬೆಳೆ ನಾಶಪಡಿಸಿದ್ದರು. ಈಗ ಮತ್ತೆ ದೌರ್ಜನ್ಯ ನಡೆಸುತ್ತಿದ್ದಾರೆ, ಮನೆಗೆ ನುಗ್ಗುತ್ತಿದ್ದಾರೆ. ರೈತರು ಹಾಗೂ ಟ್ರಾಕ್ಟರ್‌ ವಶಕ್ಕೆ ಪಡೆದಿದ್ದಾರೆ’ ಎಂದು ರೈತರು ದೂರಿದರು.

‘ಅರಣ್ಯಾಧಿಕಾರಿಗಳು ರೌಡಿಗಳಂತೆ ವರ್ತಿಸುತ್ತಿದ್ದಾರೆ. ಮನೆಗೆ ನುಗ್ಗಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಹಾಕಿದ್ದು, ತಡೆಯಾಜ್ಞೆ ಸಿಕ್ಕಿದೆ. ಆದರೂ ಅರಣ್ಯಾಧಿಕಾರಿಗಳು ಕಾನೂನುಬಾಹಿರವಾಗಿ ವರ್ತಿಸುತ್ತಿದ್ದಾರೆ. ಉಳುಮೆ ಮಾಡಿಯೇ ಮಾಡುತ್ತೇವೆ. ಜೀವ ಹೋದರೂ ಪರವಾಗಿಲ್ಲ’ ಎಂದು ಮುಖಂಡರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.