ADVERTISEMENT

ಸಾಂಪ್ರದಾಯಿಕ ಎದುರಾಳಿ ವಿರುದ್ಧ ಜಿ.ಕೆ.ವೆಂಕಟಶಿವಾರೆಡ್ಡಿ ಗೆಲುವು

​ಪ್ರಜಾವಾಣಿ ವಾರ್ತೆ
Published 13 ಮೇ 2023, 15:52 IST
Last Updated 13 ಮೇ 2023, 15:52 IST
ಶ್ರೀನಿವಾಸಪುರ ಹೊರವಲಯದ ವೇಣು ವಿದ್ಯಾ ಸಂಸ್ಥೆ ಬಳಿ ಶನಿವಾರ ಜೆಡಿಎಸ್ ಕಾರ್ಯಕರ್ತರು, ವಿಜೇತ ಅಭ್ಯಥರ್ಿ ಜಿ.ಕೆ.ವೆಂಕಟಶಿವಾರೆಡ್ಡಿ ಅವರನ್ನು ಸ್ವಾಗತಿಸಿದರು.
ಶ್ರೀನಿವಾಸಪುರ ಹೊರವಲಯದ ವೇಣು ವಿದ್ಯಾ ಸಂಸ್ಥೆ ಬಳಿ ಶನಿವಾರ ಜೆಡಿಎಸ್ ಕಾರ್ಯಕರ್ತರು, ವಿಜೇತ ಅಭ್ಯಥರ್ಿ ಜಿ.ಕೆ.ವೆಂಕಟಶಿವಾರೆಡ್ಡಿ ಅವರನ್ನು ಸ್ವಾಗತಿಸಿದರು.   

ಶ್ರೀನಿವಾಸಪುರ: ತಾಲ್ಲೂಕಿನ ಮಾಜಿ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಹತ್ತು ವರ್ಷಗಳ ಅಂತರದಲ್ಲಿ ಮತ್ತೆ ತಮ್ಮ ಸಾಂಪ್ರದಾಯಿಕ ಎದುರಾಳಿ ಕೆ.ಆರ್.ರಮೇಶ್ ಕುಮಾರ್ ವಿರುದ್ಧ ಗೆಲುವು ಸಾಧಿಸುವುದರ ಮೂಲಕ ಸಂಚಲನ ಉಂಟುಮಾಡಿದ್ದಾರೆ.

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಗೌಣ. ಇದು ವ್ಯಕ್ತಿ ಪ್ರತಿಷ್ಠೆಗೆ ಹೆಸರಾದ ಕ್ಷೇತ್ರ. ಇಲ್ಲಿ ಸ್ಪರ್ಧೆ ಎಂದರೆ ಕೆ.ಆರ್.ರಮೇಶ್ ಕುಮಾರ್ ಹಾಗೂ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ನಡುವಿನ ಹೋರಾಟ. ಒಮ್ಮೆ ಕೆ.ಆರ್.ರಮೇಶ್ ಕುಮಾರ್, ಇನ್ನೊಮ್ಮೆ ಜಿ.ಕೆ.ವೆಂಕಟಶಿವಾರೆಡ್ಡಿ ಕ್ಷೆತ್ರವನ್ನು ಪ್ರತಿನಿಧಿಸುವುದು ಸಂಪ್ರದಾಯವಾಗಿ ಪರಿಣಮಿಸಿತ್ತು. ಆದರೆ 2013ರಲ್ಲಿ ಕೆ.ಆರ್.ರಮೇಶ್ ಕುಮಾರ್ ಎರಡನೇ ಸಲ ಗೆಲ್ಲುವುದರ ಮೂಲಕ ಸಂಪ್ರದಾಯ ಮುರಿದರು. 2018ರಲ್ಲಿ ಮತ್ತೆ ಗೆಲ್ಲುವುದರ ಮೂಲಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರಿಗೆ ಶಾಕ್ ನೀಡಿದ್ದರು.

ಇನ್ನೇನು ಜಿ.ಕೆ.ವೆಂಕಟಶಿವಾರೆಡ್ಡಿ ಅವರ ಕಾಲ ಮುಗಿದೇ ಹೋಯಿತು ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಒದಗಿಬಂದ ಅನುಕೂಲಕರ ಪರಿಸ್ಥಿತಿಗಳಿಂದಾಗಿ ಕ್ಷೇತ್ರದಲ್ಲಿ ಕೆ.ಆರ್.ರಮೇಶ್ ಕುಮಾರ್ ಪಾರಮ್ಯ ಸಹಜವಾಗಿಯೇ ಹೆಚ್ಚತೊಡಗಿತು. ಹ್ಯಾಟ್ರಿಕ್ ಗೆಲುವಿನ ಭರಸೆ ಮೂಡಿಸಿತ್ತು. ಆದರೆ ರಾಜಕೀಯ ವಲಯದಲ್ಲಿ ಉಂಟಾದ ವಿರೋಧಿ ಅಲೆ ಗೆಲುವಿನ ದಡ ಸೇರಲು ಅಡ್ಡಿಪಡಿಸಿತು. ಅವರ ಎದಿರಾಳಿ ಜಿ.ಕೆ.ವೆಂಕಟಶಿವಾರೆಡ್ಡಿ 10,411 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ADVERTISEMENT

ಜೆ.ಕೆ.ವೆಂಕಟಶಿವಾರೆಡ್ಡಿ ಸತತ ಎರಡು ಬಾರಿ ಸೋತಿದ್ದರ ಬಗ್ಗೆ ಸಹಜವಾಗಿಯೇ ಕ್ಷೇತ್ರದ ಒಂದು ವರ್ಗದ ಮತದಾರರಲ್ಲಿ ಅನುಕಂಪವಿತ್ತು. ಅದರ ಜತೆಗೆ ಕೆ.ಆರ್.ರಮೇಶ್ ಕುಮಾರ್ ವಿರುದ್ಧ ನಿರ್ಮಾಣವಾಗಿದ್ದ ರಾಜಕೀಯ ವಿರೋಧಿ ಅಲೆ ಜಿ.ಕೆ.ವೆಂಕಟಶಿವಾರೆಡ್ಡಿ ಅವರಿಗೆ ವರವಾಗಿ ಪರಿಣಮಿಸಿ, ಚುನಾವಣೆಯಲ್ಲಿ ದಡ ಸೇರಿಸಿತು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.

ಜೆ.ಕೆ.ವೆಂಕಟಶಿವಾರೆಡ್ಡಿ ಮತ ಎಣಿಕೆ ಕೇಂದ್ರದಲ್ಲಿ ಗೆಲುವಿನ ನಗೆ ಬೀರುತ್ತಿದ್ದಂತೆ, ಕ್ಷೇತ್ರದ ಜೆಡಿಎಸ್ ವಲಯದಲ್ಲಿ ಮಿಂಚಿನ ಸಂಚಾರವಾಯಿತು. ಕಾರ್ಯಕರ್ತರು ಹಾಗೂ ಹಿತೈಷಿಗಳು ತಮ್ಮ ವಿಜೇತ ಅಭ್ಯರ್ಥಿ ಹಾಗೂ ಜೆಡಿಎಸ್ ಪರ ಘೋಷಣೆ ಕೂಗಿದರು. ಗ್ರಾಮೀಣ ಪ್ರದೇಶದಲ್ಲಿ ಪಟಾಕಿ ಸಿಡಿತದ ಸದ್ದು ಕೇಳಿಬಂತು.
ಆದರೆ ಪಟ್ಟಣ ಪ್ರದೇಶದಲ್ಲಿ ಬಲವಾದ ಪೊಲೀಸ್ ಬಂದೋಬಸ್ತ್ ಇರುವುದರಿಂದ ಸಂಭ್ರಮಾಚರಣೆ ಸಾಧ್ಯವಾಗಿಲ್ಲ.

ಮತದಾನದ ನಂತರ ಅಹಿತಕರ ಘಟನೆಗಳು ಸಂಭವಿಸಿದ್ದ ಶ್ರೀನಿವಾಸಪುರದ ಚಿಂತಾಮಣಿ ರಸ್ತೆ ಪ್ರದೇಶ ಹಾಗೂ ಅಡ್ಡಗಲ್ ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಪಟಾಕಿ ಸಿಡಿಸಿ ಸ್ವಾಗತ: ಜೆಡಿಎಸ್ ವಿಜೇತ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಕೋಲಾರದಿಂದ ಪಟ್ಟಣದ ಹೊರವಲಯದ ವೇಣು ವಿದ್ಯಾಸಂಸ್ಥೆ ಸಮೀಪ ಬರುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜಿ.ಕೆ.ವೆಂಕಟಶಿವಾರೆಡ್ಡಿ ಮತದಾರರಿಗೆ ಕೃತಜ್ಞತೆ ಅರ್ಪಿಸಿ ಮಾತನಾಡಿ, ‘ಇದು ನನ್ನ ಗೆಲುವಲ್ಲ. ಸಮಾಜದ ಎಲ್ಲ ವರ್ಗದ ಸ್ವಾಭಿಮಾನಿ ಮತದಾರರ ಗೆಲುವು. ಕ್ಷೇತ್ರದ ಸರ್ವಜನಾಂಗದ ಗೆಲುವು’ ಎಂದು ಹೇಳಿದರು.

ಶ್ರೀನಿವಾಸಪುರ ಹೊರವಲಯದ ವೇಣು ವಿದ್ಯಾ ಸಂಸ್ಥೆ ಬಳಿ ಶನಿವಾರ ಜೆಡಿಎಸ್ ಕಾರ್ಯಕರ್ತರು ವಿಜೇತ ಅಭ್ಯಥರ್ಿ ಜಿ.ಕೆ.ವೆಂಕಟಶಿವಾರೆಡ್ಡಿ ಅವರನ್ನು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.