
ಶ್ರೀನಿವಾಸಪುರ: ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾ ಸರ್ಕಾರಿ ಉರ್ದು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯಾಗಿ (ಕೆಪಿಎಸ್) ಉನ್ನತೀಕರಿಸುವಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಸಂಬಂಧದ ಆದೇಶ ಪ್ರತಿಯನ್ನು ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್, ಎಪಿಜೆ ಅಬ್ದುಲ್ ಕಲಾಂ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಎಂ.ಪಿ.ಅಬ್ದುಲ್ ಮಜೀದ್ ಅವರಿಗೆ ಹಸ್ತಾಂತರಿಸಿದರು.
ಶಾಲಾ ಆವರಣದಲ್ಲಿ ನಡೆದಕಾರ್ಯಕ್ರಮದಲ್ಲಿ ರಮೇಶ್ ಕುಮಾರ್ ಮಾತನಾಡಿ, ‘ಉತ್ತಮ ಶಿಕ್ಷಣವೇ ವ್ಯಕ್ತಿಯ ಭವಿಷ್ಯ ರೂಪಿಸುವ ಪ್ರಮುಖ ಅಸ್ತ್ರ. ವಿದ್ಯಾರ್ಥಿಗಳು ಶ್ರಮ, ಶಿಸ್ತಿನಿಂದ ಅಧ್ಯಯನ ಮಾಡಿ ತಮ್ಮ ಪೋಷಕರಿಗೂ, ಶಿಕ್ಷಕರಿಗೂ ಹಾಗೂ ಶಾಲೆಗೆ ಕೀರ್ತಿ ತರುವಂತೆ ಬೆಳೆಯಬೇಕು. ಉನ್ನತ ಶಿಕ್ಷಣ ಪಡೆದು ಕುಟುಂಬದ ಗೌರವವನ್ನು ಹೆಚ್ಚಿಸಬೇಕು’ ಎಂದರು.
ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಬದುಕಿನ ಅಗತ್ಯ ಇದೆ. ಈ ಸಮಾಜದಲ್ಲಿ ಗೌರವಾನ್ವಿತ ನಾಗರಿಕರಾಗಿ ರೂಪುಗೊಳ್ಳುವುದೇ ವಿದ್ಯಾರ್ಥಿಗಳ ಧ್ಯೇಯವಾಗಿರಬೇಕು. ಶಿಕ್ಷಕರು ಕೇವಲ ಪಾಠ ಬೋಧಕರಲ್ಲ; ಮಕ್ಕಳ ವ್ಯಕ್ತಿತ್ವ ರೂಪಿಸುವ ಶಿಲ್ಪಿಗಳು. ಜವಾಬ್ದಾರಿಯುತ ಹಾಗೂ ಸಜ್ಜನ ನಾಗರಿಕರನ್ನು ರೂಪಿಸುವ ಹೊಣೆಗಾರಿಕೆ ಅವರ ಮೇಲಿದೆ ಎಂದು ಹೇಳಿದರು.
ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಉನ್ನತೀಕರಣಗೊಂಡಿರುವುದರಿಂದ ಶಾಲೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಆಧುನಿಕ ತರಗತಿ ಕೊಠಡಿಗಳು, ಸುಧಾರಿತ ಶೈಕ್ಷಣಿಕ ಸೌಲಭ್ಯಗಳು ಹಾಗೂ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಬಲವಾಗಲಿದೆ. ಸ್ಥಳೀಯ ವಿದ್ಯಾರ್ಥಿಗಳಿಗೆ ಸಮಗ್ರ ಹಾಗೂ ಸ್ಪರ್ಧಾತ್ಮಕ ಶಿಕ್ಷಣದ ಹೆಚ್ಚಿನ ಅವಕಾಶಗಳು ದೊರೆಯಲಿವೆ ಎಂದು ತಿಳಿಸಿದರು.
ಶಾಲೆಯ ಅಭಿವೃದ್ಧಿಗಾಗಿ ಟ್ರಸ್ಟ್ ಕೈಗೊಂಡಿರುವ ನಿರಂತರ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಮಜೀದ್ , ಉಪಾಧ್ಯಕ್ಷ ಇಲಿಯಾಸ್ ಪಾಷಾ, ಕಾರ್ಯದರ್ಶಿ ಅಕ್ರಂಪಾಷಾ, ಖಜಾಂಚಿ ಎ.ಟಿ. ಎಸ್.ರಿಜ್ವಾನ್, ಸದಸ್ಯರಾದ ಇಮ್ತಿಯಾಸ್, ಅಲ್ಲಾಬಕಾಷ್, ಎಸ್‌ಡಿಎಂಸಿ ಅಧ್ಯಕ್ಷ ಇದಾಯತ್ ಉಲ್ಲಖಾನ್, ಮುಖ್ಯ ಶಿಕ್ಷಕ ಸಾದಿಕ್ ಅಹಮದ್, ಪುರಸಭೆ ಮಾಜಿ ಅಧ್ಯಕ್ಷ ಸಿ.ಆರ್.ಭಾಸ್ಕರ್, ಮುಖಂಡರಾದ ಮ್ಯಾಕಲ ನಾರಾಯಣಸ್ವಾಮಿ, ಬಿ.ಎಂ.ಪ್ರಕಾಶ್, ಸಂಜಯ್ ರೆಡ್ಡಿ, ವೇಣು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.