
ಕೋಲಾರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿ ಅನುತ್ತೀರ್ಣವಾಗದಂತೆ ನೋಡಿಕೊಳ್ಳಬೇಕು. ಕಡಿಮೆ ಅಂಕ ಗಳಿಸುವ ಮಕ್ಕಳ ಮೇಲೆ ಶಿಕ್ಷಕರು ನಿಗಾ ಇಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್ ಸೂಚನೆ ನೀಡಿದರು.
ಜಿಲ್ಲೆಯಾದ್ಯಂತ ಎಸ್ಎಸ್ಎಲ್ಸಿ ರಾಜ್ಯಮಟ್ಟದ ಪ್ರಥಮ ಪೂರ್ವಸಿದ್ಧತಾ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದ ಅವರು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.
ಮಕ್ಕಳ ಕಲಿಕಾ ಪ್ರಗತಿಯ ವಿಶ್ಲೇಷಣೆಗೆ ಸಹಕಾರಿಯಾಗಿರುವ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಹಿಂದುಳಿದ, ಕಡಿಮೆ ಅಂಕ ಪಡೆದ ಮಕ್ಕಳ ಬಗ್ಗೆ ವಿಶೇಷ ಗಮನ ನೀಡಿ ಅವರನ್ನು ಸಿದ್ಧಗೊಳಿಸಿ. ಅವರ ಕಲಿಕಾ ಪ್ರಗತಿಗೆ ವಿಶೇಷ ಗಮನ ನೀಡಿ. ಅನುತ್ತೀರ್ಣರಾದವರನ್ನು ತೇರ್ಗಡೆಯಾಗುವ ಮಟ್ಟಿಗಾದರೂ ಸಿದ್ಧಗೊಳಿಸಿ. ಉಳಿದ ಮಕ್ಕಳು ಗುಣಾತ್ಮಕ ಫಲಿತಾಂಶ ಪಡೆಯಲು ಮಾರ್ಗದರ್ಶನ ನೀಡಿ ಎಂದರು.
ಎಸ್‌ಎಸ್‌ಎಲ್‌ಸಿ ಜೀವನದ ಮೊದಲ ಪಬ್ಲಿಕ್ ಪರೀಕ್ಷೆಯಾಗಿದೆ. ಇದರಿಂದ ಮಕ್ಕಳಲ್ಲಿ ಭಯ ಸಹಜ. ಶಿಕ್ಷಕರು ಮಕ್ಕಳ ಕಲಿಕೆಯಲ್ಲಿ ದೃಢತೆ ಸಾಧಿಸುವಂತೆ ಮಾಡಿದರೆ ಅವರಲ್ಲಿನ ಹೆದರಿಕೆ ಮಾಯವಾಗುತ್ತದೆ. ಅದಕ್ಕಾಗಿಯೇ ನಡೆಸುತ್ತಿರುವ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಮೂಲ ಪರೀಕ್ಷೆ ಮಾದರಿಯಲ್ಲೇ ಬರೆಸಿ ಎಂದು ಹೇಳಿದರು.
ಪಠ್ಯದಲ್ಲಿನ ಪ್ರತಿ ಪ್ರಶ್ನೆಗೂ ಉತ್ತರಿಸುವ ಶಕ್ತಿ ಮಕ್ಕಳಿಗೆ ಬಂದರೆ ಹೆದರಿಕೆ ತಾನಾಗಿಯೇ ದೂರವಾಗುತ್ತದೆ. ನಿತ್ಯ ವೇಳಾಪಟ್ಟಿ ಹಾಕಿಕೊಂಡು ಅಭ್ಯಾಸ ಮಾಡಲು ತಿಳಿಸಿ. ಕಷ್ಟಕರ ಪ್ರಶ್ನೆಗಳಿಗೆ ಉತ್ತರವನ್ನು ಒಂದೆರಡು ಬಾರಿ ಬರೆದು ಅಭ್ಯಾಸ ಮಾಡಲು ತಿಳಿಸಿ. ಮನೆ ಭೇಟಿ ಮೂಲಕ ಪೋಷಕರಲ್ಲೂ ಜಾಗೃತಿ ಮೂಡಿಸಿ ಎಂದರು.
ಅನ್ವಯಿಕ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸುವ ಮೂಲಕ ಶೇ 100 ಸಾಧನೆಗೆ ಪಠ್ಯ ಓದಿಗೆ ಒತ್ತು ನೀಡಬೇಕು. ಈಗಾಗಲೇ ಇಲಾಖೆಯಿಂದ ನೀಡಿರುವ ಮಾದರಿ ಪ್ರಶ್ನೆಪತ್ರಿಕೆಗಳನ್ನು ಮತ್ತೆ ಮತ್ತೆ ಅಭ್ಯಾಸ ಮಾಡಲು ತಿಳಿಸಿ ಎಂದು ನಿರ್ದೇಶನ ನೀಡಿದರು.
ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು, ಪರೀಕ್ಷೆ ಕುರಿತು ಭಯಪಡುವ ಅಗತ್ಯವಿಲ್ಲ. ಆತ್ಮಸ್ಥೈರ್ಯ ಹಾಗೂ ಸಂಭ್ರಮದಿಂದ ಪರೀಕ್ಷೆ ಎದುರಿಸಲು ಸಿದ್ಧರಾಗಿ. ಪಠ್ಯಕ್ರಮ ಪೂರ್ಣಗೊಂಡಿರುವುದನ್ನು ಖಾತ್ರಿ ಮಾಡಿಕೊಂಡು ನೈಜ ಗುರಿ ಸಾಧನೆಗೆ ಓದು ಮುಂದುವರಿಸಿ ಎಂದರು.
ಪ್ರಶ್ನೆಪತ್ರಿಕೆ ಯಾವುದೇ ರೀತಿ ಕೊಟ್ಟರೂ ಉತ್ತರಿಸಲು ಸಿದ್ಧರಾಗಿರಬೇಕು. ಅದಕ್ಕೆ ಪರಿಶ್ರಮ ಅಗತ್ಯವಿದೆ. ಶಿಕ್ಷಕರ ಬೋಧನೆಯನ್ನು ಗಮನವಿಟ್ಟು ಕೇಳಿ. ಜತೆಗೆ ಪಠ್ಯಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಿ, ಅನ್ವಯಿಕ ಪ್ರಶ್ನೆಗಳಿಗೆ ಉತ್ತರ ಬರೆಯಲು ಇದು ಹೆಚ್ಚು ಸಹಕಾರಿ ಎಂದು ಹೇಳಿದರು.
ಉತ್ತಮ ಬರವಣಿಗೆ ತಮ್ಮ ಸಾಧನೆಗೆ ಸ್ಫೂರ್ತಿಯಾಗಲಿದೆ. ಬರವಣಿಗೆ ಉತ್ತಮಪಡಿಸಿಕೊಳ್ಳಲು ನಿರಂತರವಾಗಿ ಪಠ್ಯದಲ್ಲಿರುವುದನ್ನೇ ಬರೆದು ಅಭ್ಯಾಸ ಮಾಡಿ. ಬರವಣಿಗೆ ಉತ್ತಮವಾಗಿದ್ದರೆ ಮಾತ್ರ ಶೇ 100 ಅಂಕ ಪಡೆಯಲು ಸಹಕಾರಿಯಾಗಲಿದೆ ಎಂದರು.
ಶಾಲೆಯ ಮುಖ್ಯಶಿಕ್ಷಕಿ ತಾಹೇರಾ ನುಸ್ರತ್, ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ, ಸುಗುಣಾ, ಶ್ವೇತಾ, ಲೀಲಾ, ಶ್ರೀನಿವಾಸಲು, ರಮಾದೇವಿ, ಚೈತ್ರಾ ಇದ್ದರು.
ಕ್ರೀಡೆ ಆಟ ಸಿನಿಮಾ ಎಲ್ಲವನ್ನೂ ಪರೀಕ್ಷೆ ಮುಗಿಯುವವರೆಗೆ ಮರೆತುಬಿಡಿ. ತಮ್ಮ ಗುರಿ ಕೇವಲ ಉತ್ತಮ ಫಲಿತಾಂಶದತ್ತ ಇರಲಿ. ಶೇ100 ಸಾಧನೆಗೆ ಪಠ್ಯಪುಸ್ತಕ ಓದು ಅತಿ ಅವಶ್ಯಅಲ್ಮಾಸ್ ಫರ್ವೀನ್ ತಾಜ್ ಡಿಡಿಪಿಐ