ಮುಳಬಾಗಿಲು: ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನೈರ್ಮಲ್ಯ ಹಾಗೂ ಶುಚಿತ್ವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ತಾಲ್ಲೂಕಿನ ಉತ್ತನೂರು ಗ್ರಾಮದಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪ್ರವೀಣ್ ಪಿ ಬಾಗೇವಾಡಿ ನೇತೃತ್ವದಲ್ಲಿ ಸ್ವಚ್ಚತಾ ಹೀ ಸೇವಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಅಭಿಯಾನದ ಅಂಗವಾಗಿ ಗ್ರಾಮದ ವರದರಾಜ ಸ್ವಾಮಿ ದೇವಾಲಯದ ಕಲ್ಯಾಣಿ, ಶಾಲೆ ಆವರಣ, ಬಸ್ ನಿಲ್ದಾಣ ಮತ್ತಿತರರ ಕಡೆಗಳಲ್ಲಿ ಅಧಿಕಾರಿಗಳು ಸ್ವಚ್ಛತಾ ಕಾರ್ಯ ನಡೆಸಿದರು. ನಂತರ ಸ್ವಚ್ಛತೆ ಕುರಿತು ಜಾಥಾ ಮೆರವಣಿಗೆ ನಡೆಸಿದರು.
ಈ ವೇಳೆ ಜಿಪಂ ಸಿಇಒ ಡಾ.ಪ್ರವೀಣ್ ಪಿ ಬಾಗೇವಾಡಿ ಮಾತನಾಡಿ, 2017ರಲ್ಲಿ ಪ್ರಾರಂಭವಾದ ಸ್ವಚ್ಚತಾ ಹೀ ಸೇವಾ ಅಭಿಯಾನ 11 ವರ್ಷ ಪೂರೈಸುತ್ತಿರುವ ಹಿನ್ನೆಲೆ ಸೆ.17 ರಿಂದ ಅ.2 ರವರೆಗೆ ತಾಲ್ಲೂಕಿನಲ್ಲಿ ಸ್ವಚ್ಛತೆಯ ಅಭಿಯಾನ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಅ.2 ರಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಸ್ವಚ್ಛತಾ ಸೇವಾ ಅಭಿಯಾನ ನಡೆಯುತ್ತಿದೆ. ತಾಲ್ಲೂಕಿನ ಜನತೆ ಸಹಕರಿಸಿದರೆ ಇಡೀ ತಾಲ್ಲೂಕು ಸ್ವಚ್ಛವಾಗಿರುತ್ತದೆ ಎಂದರು.
ಸ್ವಚ್ಚತಾ ಹೀ ಸೇವಾ ಅಭಿಯಾನದ ಅಂಗವಾಗಿ ಸೆ.17 ರಿಂದ ಅ.2 ರವರೆಗೆ ತಾಲ್ಲೂಕಿನಲ್ಲಿ ಸ್ವಯಂ ಪ್ರೇರಣೆ ಮತ್ತು ಸಾಮಾಜಿಕ ಶ್ರಮದಾನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಸ್ವಯಂ ಪ್ರೇರಣಿಯಿಂದ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಸರ್ವೇಶ್ ಮಾತನಾಡಿ, ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳು ಸ್ವಚ್ಛತೆಗಾಗಿ ಪಣ ತೊಟ್ಟು ಸರ್ಕಾರಿ ಶಾಲಾ ಕಾಲೇಜುಗಳು, ಕಲ್ಯಾಣಿ, ದೇವಾಲಯ ಆವರಣ, ರಸ್ತೆಗಳು ಹಾಗೂ ಗ್ರಾಮಾಂತರ ಪ್ರದೇಶವನ್ನು ಸ್ವಚ್ಛಗೊಳಿಸಬೇಕು. ಜೊತೆಗೆ ಎಲ್ಲರೂ ನಿರಂತರವಾಗಿ ಸ್ವಚ್ಛತೆಯಲ್ಲಿ ತೊಡಸಿ ಕಸ ಮುಕ್ತ ಹಾಗೂ ಸ್ವಚ್ಛ ಮುಳಬಾಗಿಲು ತಾಲ್ಲೂಕಾಗಿ ಬದಲಿಸಲು ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಮಂಜುನಾಥ ಸ್ವಾಮಿ, ಆರ್.ರವಿಚಂದ್ರ, ವಿ.ಶ್ರೀನಿವಾಸ, ಮಂಜುಳಾ, ವಿ.ಚಂದ್ರಪ್ಪ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.