ADVERTISEMENT

ಜಮೀನು ಸರ್ವೆಗೆ ತೆರಳಿದ್ದ ಬಂಗಾರಪೇಟೆ ತಹಶೀಲ್ದಾರ್‌ ಕೊಲೆ

ವಿವಾದಿತ ಜಮೀನಿನ ಸರ್ವೆಗೆ ಹೋದಾಗ ಚಾಕು ಇರಿತ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 14:00 IST
Last Updated 9 ಜುಲೈ 2020, 14:00 IST
ಇರಿತಕ್ಕೊಳಗಾದ ತಹಸೀಲ್ದಾರ್‌ ಚಂದ್ರಮೌಳೇಶ್ವರ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿರುವುದು
ಇರಿತಕ್ಕೊಳಗಾದ ತಹಸೀಲ್ದಾರ್‌ ಚಂದ್ರಮೌಳೇಶ್ವರ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿರುವುದು    

ಕೋಲಾರ: ವಿವಾದಿತ ಜಮೀನಿನ ಸರ್ವೆ ಕಾರ್ಯಕ್ಕೆ ಹೋಗಿದ್ದ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ತಹಶೀಲ್ದಾರ್‌ ಬಿ.ಕೆ.ಚಂದ್ರಮೌಳೇಶ್ವರ (53) ಅವರನ್ನು ಸಾರ್ವಜನಿಕವಾಗಿ ಪೊಲೀಸರ ಸಮ್ಮುಖದಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ತಹಶೀಲ್ದಾರ್‌
ಚಂದ್ರಮೌಳೇಶ್ವರ

ಬಂಗಾರಪೇಟೆ ತಾಲ್ಲೂಕಿನ ತೊಪ್ಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳವಂಚಿ ಗ್ರಾಮದ ರಾಮಮೂರ್ತಿ ಮತ್ತು ವೆಂಕಟಾಚಲಪತಿ ಎಂಬುವರ ನಡುವೆ ಸರ್ವೆ ನಂಬರ್‌ 5/4ರ ಜಮೀನಿನ ವಿಚಾರವಾಗಿ ವಿವಾದವಿತ್ತು. ಈ ಸಂಬಂಧ ರಾಮಮೂರ್ತಿ ತಹಶೀಲ್ದಾರ್‌ ಕಚೇರಿಗೆ ಅರ್ಜಿ ಸಲ್ಲಿಸಿ ಜಮೀನಿನ ಸರ್ವೆ ಮಾಡುವಂತೆ ಕೋರಿದ್ದರು.

ಹೀಗಾಗಿ ತಹಶೀಲ್ದಾರ್‌ ಚಂದ್ರಮೌಳೇಶ್ವರ ಸಿಬ್ಬಂದಿಯೊಂದಿಗೆ ಸರ್ವೆ ಮಾಡಲು ಕಳವಂಚಿ ಗ್ರಾಮದ ವಿವಾದಿತ ಜಮೀನಿಗೆ ಹೋಗಿದ್ದರು. ಸರ್ವೆ ಕಾರ್ಯಕ್ಕೆ ಅಡ್ಡಿಪಡಿಸಿದ ವೆಂಕಟಾಚಲಪತಿ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ್ದಾನೆ. ಅಲ್ಲದೇ, ಅರ್ಜಿದಾರರು ಮತ್ತು ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ವಿರೋಧದ ನಡುವೆಯೂ ಅಧಿಕಾರಿಗಳು ಪೊಲೀಸ್‌ ಭದ್ರತೆಯಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸಿದರು.

ADVERTISEMENT

ಬಳಿಕ ತಹಶೀಲ್ದಾರ್‌ ತಮ್ಮ ವಾಹನದ ಬಳಿ ಹೋಗಿ ಸ್ಥಳದಿಂದ ನಿರ್ಗಮಿಸುವ ಯತ್ನದಲ್ಲಿದ್ದರು. ಆಗ ಜಮೀನಿನ ದಾಖಲೆಪತ್ರ ತೋರಿಸುವ ನೆಪದಲ್ಲಿ ವಾಹನದ ಬಳಿಗೆ ಹೋದ ವೆಂಕಟಾಚಲಪತಿ ದಾಖಲೆಪತ್ರಗಳ ಜತೆ ಪ್ಲಾಸ್ಟಿಕ್‌ ಕವರ್‌ನಲ್ಲಿ ಅಡಗಿಸಿ ಇಟ್ಟಿಕೊಂಡಿದ್ದ ಚಾಕು ಹೊರ ತೆಗೆದು ತಹಶೀಲ್ದಾರ್‌ ಎದೆಗೆ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರ ರಕ್ತಸ್ರಾವವಾಗಿ ಕುಸಿದು ಬಿದ್ದ ತಹಶೀಲ್ದಾರ್‌ರನ್ನು ಆಂಬುಲೆನ್ಸ್‌ನಲ್ಲಿ ಜಿಲ್ಲಾ ಕೇಂದ್ರದ ಜಾಲಪ್ಪ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದರು. ಆರೋಪಿ ವೆಂಕಟಾಚಲಪತಿ ನಿವೃತ್ತ ಶಿಕ್ಷಕನಾಗಿದ್ದಾನೆ. ಕಾಮಸಮುದ್ರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆತನ ಪತ್ತೆ ಕಾರ್ಯ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.