ADVERTISEMENT

ಅಮರಶಿಲ್ಪಿ ಜಕಣಾಚಾರಿ ಹೆಸರು ಅಮರ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 16:28 IST
Last Updated 1 ಜನವರಿ 2021, 16:28 IST
ಕೋಲಾರದಲ್ಲಿ ಶುಕ್ರವಾರ ನಡೆದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾವರಣೆಯಲ್ಲಿ ವಿಶ್ವಕರ್ಮ ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು.
ಕೋಲಾರದಲ್ಲಿ ಶುಕ್ರವಾರ ನಡೆದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾವರಣೆಯಲ್ಲಿ ವಿಶ್ವಕರ್ಮ ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು.   

ಕೋಲಾರ: ‘ಶಿಲ್ಪಕಲೆಗೆ ಅಪಾರ ಕೊಡುಗೆ ನೀಡಿರುವ ಅಮರಶಿಲ್ಪಿ ಜಕಣಾಚಾರಿ ಅವರ ಹೆಸರು ಸೂರ್ಯ ಚಂದ್ರ ಇರುವರೆಗೂ ಅಮರವಾಗಿ ಇರುತ್ತದೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.

ಇಲ್ಲಿ ಶುಕ್ರವಾರ ನಡೆದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾವರಣೆಯಲ್ಲಿ ಮಾತನಾಡಿ. ‘ಕನ್ನಡ ನಾಡಿನ ಇತಿಹಾಸದಲ್ಲಿ ಹೊಯ್ಸಳರು ಶಿಲ್ಪಕಲೆಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ವಿಷ್ಣುವರ್ಧನ ಅರಸನ ಕಾಲದಲ್ಲಿ ಶಿಲ್ಪಕಲೆಯು ಉತ್ತುಂಗ ಶಿಖರದಲ್ಲಿತ್ತು’ ಎಂದು ತಿಳಿಸಿದರು.

‘ವಿಷ್ಣುವರ್ಧನನ ಹೆಂಡತಿ ಶಾಂತಲೆ ನಾಟ್ಯ ರಾಣಿ ಎಂದು ಪ್ರಸಿದ್ಧಿಯಾಗಿದ್ದಳು. ಆ ಕಾಲಘಟ್ಟದಲ್ಲಿ ಅಮರಶಿಲ್ಪಿ ಜಕಣಾಚಾರಿ ಬೇಲೂರು ಮತ್ತು ಹಳೆಬೀಡಿನ ದೇವಾಲಯದಲ್ಲಿ ಶಿಲ್ಪಗಳನ್ನು ಕೆತ್ತನೆ ಮಾಡಿ ಹೆಸರಾಗಿದ್ದಾರೆ. ಅವರು ಇಡೀ ಜೀವನವನ್ನು ಶಿಲ್ಪ ಕಲೆಗೆ ಮೀಸಲಿಟ್ಟರು. ಅವರ ಮಗ ಡಕಣಾಚಾರಿ ಸಹ ಶಿಲ್ಪಿಯಾಗಿದ್ದು, ಚನ್ನಿಗರಾಯ ದೇವಸ್ಥಾನವನ್ನು ಅದ್ಭುತ ಕಲಾ ಕೃತಿಯಿಂದ ನಿರ್ಮಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಒಳ್ಳೆಯ ಕೆಲಸ ಹಾಗೂ ಒಳ್ಳೆಯ ಸೇವೆ ಮಾಡಿದರೆ ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತೇವೆ. ಎಲ್ಲರೊಂದಿಗೆ ಸೌಹಾರ್ದತೆಯಿಂದ ಇರಬೇಕು. ವಿಶ್ವಕರ್ಮ ಸಮುದಾಯವು ಪಂಚ ಕಸುಬು ಅವಲಂಬಿಸಿದ್ದು, ಇವುಗಳನ್ನು ಮುಂದುವರಿಸಿಕೊಂಡು ಹೋಗಬೇಕು’ ಎಂದು ವಿಶ್ವಕರ್ಮ ಮಹಾಸಭಾ ಜಿಲ್ಲಾ ಅಧ್ಯಕ್ಷ ವಿಷ್ಣು ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ವಿಶ್ವಕರ್ಮ ಸಮುದಾಯದ ಜನಸಂಖ್ಯೆ ಸುಮಾರು 60 ಸಾವಿರವಿದೆ. ಜಿಲ್ಲಾಡಳಿತವು ಜನಾಂಗಕ್ಕೆ ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ 1 ಎಕರೆ ಸರ್ಕಾರಿ ಭೂಮಿ ನೀಡಿದರೆ ಸಮುದಾಯದ ಅಭಿವೃದ್ಧಿ ಕಾರ್ಯಕ್ಕೆ ಬಳಸಿಕೊಳ್ಳುತ್ತೇವೆ’ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ವಿಷ್ಣು ಅವರು ಸಂಪಾದಿಸಿರುವ ಅಮರಶಿಲ್ಪಿ ಜಕಣಾಚಾರಿ ಕಿರು ಹೊತ್ತಿಗೆ ಬಿಡುಗಡೆ ಮಾಡಲಾಯಿತು. ಸಮುದಾಯದ ಸಾಧಕರಾದ ಎಸ್.ಮಂಜುನಾಚಾರ್ಯ, ಕೆ.ವೆಂಕಟರಮಣಚಾರ್ಯ, ಮಲ್ಲಿಕಾರ್ಜುನಚಾರ್ಯ, ಕೆ.ಗೋಪಾಲಚಾರ್ಯ ಹಾಗೂ ಚಂದ್ರಶೇಖರಾಚಾರ್ಯ ಅವರನ್ನು ಸನ್ಮಾನಿಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.