ADVERTISEMENT

ಜಗತ್ತಿನಲ್ಲಿ ಸತ್ಯವು ಶ್ರೇಷ್ಠ :ಪ್ರವಚನಕಾರ ಟಿ.ಎಲ್.ಆನಂದ್

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 12:05 IST
Last Updated 25 ಡಿಸೆಂಬರ್ 2019, 12:05 IST
ಕೋಲಾರದಲ್ಲಿ ಮಂಗಳವಾರ ನಡೆದ ಭಗವದ್ಗೀತೆ ಅಭಿಯಾನದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು.
ಕೋಲಾರದಲ್ಲಿ ಮಂಗಳವಾರ ನಡೆದ ಭಗವದ್ಗೀತೆ ಅಭಿಯಾನದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು.   

ಕೋಲಾರ: ‘ಮನಸ್ಸಿನಲ್ಲಿ ಭಗವಂತನ ಭಕ್ತಿ ಮೂಡಿದರೆ ಬದುಕಿನ ಸತ್ಯ ಗೋಚರವಾಗುತ್ತದೆ. ಜಗತ್ತಿನಲ್ಲಿ ಸತ್ಯ ಶ್ರೇಷ್ಠವಾದದ್ದು’ ಎಂದು ಪ್ರವಚನಕಾರ ಟಿ.ಎಲ್.ಆನಂದ್ ಅಭಿಪ್ರಾಯಪಟ್ಟರು.

ಇಲ್ಲಿ ಮಂಗಳವಾರ ನಡೆದ ಭಗವದ್ಗೀತಾ ಅಭಿಯಾನ ಉದ್ಘಾಟಿಸಿ ಮಾತನಾಡಿ, ‘ಮನುಷ್ಯ ಉತ್ತಮ ಬದುಕು ಸಾಗಿಸಲು ಭಗವದ್ಗೀತೆ ದಾರಿದೀಪ. ಜೀವನದಲ್ಲಿ ಸದ್ಗುಣ ರೂಢಿಸಿಕೊಂಡರೆ ಮಾನಸಿಕವಾಗಿ ಸಧೃಡರಾಗಬಹುದು’ ಎಂದು ಹೇಳಿದರು.

‘ಪ್ರತಿಯೊಬ್ಬರು ಭಗವದ್ಗೀತೆಯ ತತ್ವ ಪಾಲಿಸಿದರೆ ಜೀವನ ಸಾರ್ಥಕವಾಗುತ್ತದೆ. ಪ್ರಕೃತಿ ನಮಗೆ ಎಲ್ಲವನ್ನೂ ಕೊಟ್ಟಿದೆ. ಅದನ್ನು ಕಾಪಾಡಿಕೊಂಡು ಬದುಕಿದರೆ ಜೀವನ ಸುಂದರವಾಗುತ್ತದೆ. ಮನುಷ್ಯನ ಆಸೆಗೆ ಮಿತಿಯಿರಬೇಕು. ಆಸೆ ದುರಾಸೆಯಾಗಬಾರದು. ಅತಿಯಾದ ಕಾಮ, ಕ್ರೋಧವು ಅನ್ಯಾಯ ಮಾರ್ಗದಲ್ಲಿ ಹಣ ಸಂಪಾದನೆ ಮಾಡುವಂತೆ ಪ್ರೇರೇಪಿಸುತ್ತದೆ’ ಎಂದರು.

ADVERTISEMENT

‘ಜೀವನದಲ್ಲಿ ಸ್ವಾರ್ಥ ಭಾವನೆ ಬಿಟ್ಟು ಅಂತಕರಣ ಶುದ್ಧರಾಗಿ ಧರ್ಮ ಮಾರ್ಗದಲ್ಲಿ ಮುನ್ನಡೆಯಬೇಕು. ಸಮಾಜಮುಖಿಯಾಗಬೇಕು ಎಂಬುದು ಭಗವದ್ಗೀತೆಯ ಸಾರ’ ಎಂದು ತಿಳಿಸಿದರು.

‘ಭಗವದ್ಗೀತೆಯಲ್ಲಿ ಧರ್ಮದ ಸಾರ ಉಪದೇಶಿಸಲಾಗಿದೆ. ಭಗವದ್ಗೀತೆ ಪಾರಾಯಣ, ಗೀತ ಪಠಣ, ಉಪನ್ಯಾಸ ಕಾರ್ಯಕ್ರಮಗಳನ್ನು ಅಭಿಯಾನದಲ್ಲಿ ಹಮ್ಮಿಕೊಳ್ಳಲಾಗುತ್ತದೆ’ ಎಂದು ಭಗವದ್ಗೀತೆ ಅಭಿಯಾನದ ಜಿಲ್ಲಾ ಸಂಚಾಲಕ ನಂಜುಂಡಯ್ಯ ವಿವರಿಸಿದರು.

ಚಿನ್ಮಯ ಮಿಷನ್ ಅಧ್ಯಕ್ಷ ಚಂದ್ರಪ್ರಕಾಶ್, ಅಭಿಯಾನದ ಸಂಚಾಲಕರಾದ ಕಾರ್ತಿಕ್‌ ಕೃಷ್ಣಮೂರ್ತಿ, ದಿವಾಕರ್, ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.