ADVERTISEMENT

ಪ್ರೇಮಿಗಳ ದಿನ: ಮನಸ್ಸು, ಹೃದಯ ಬೆಸೆಯುವ ಗುಲಾಬಿಗೆ ಬೇಡಿಕೆ, ಬೆಳೆಗಾರರಿಗೆ ಬಂಪರ್‌

ಕೆ.ಓಂಕಾರ ಮೂರ್ತಿ
Published 14 ಫೆಬ್ರುವರಿ 2025, 8:02 IST
Last Updated 14 ಫೆಬ್ರುವರಿ 2025, 8:02 IST
ಪವನ್‌ ಕುಮಾರ್‌, ಪ್ರತಿಭಾ ದಂಪತಿ ಬೆಳೆದಿರುವ ತರಹೇವಾರಿ ಬಣ್ಣದ ಗುಲಾಬಿ ಹೂವುಗಳು
ಪವನ್‌ ಕುಮಾರ್‌, ಪ್ರತಿಭಾ ದಂಪತಿ ಬೆಳೆದಿರುವ ತರಹೇವಾರಿ ಬಣ್ಣದ ಗುಲಾಬಿ ಹೂವುಗಳು   

ಕೋಲಾರ: ವ್ಯಾಲೆಂಟೈನ್ಸ್ ದಿನದ ಅಂಗವಾಗಿ ಗುಲಾಬಿ ನೀಡಿ ಪ್ರೇಮ ನಿವೇದನೆಗೆ ಹಲವು ಪ್ರೇಮಿಗಳು ಸಿದ್ಧತೆ ನಡೆಸಿದ್ದರೆ ಇತ್ತ ಗುಲಾಬಿ ಹೂವು ಬೆಳೆಗಾರರ ಮೊಗದಲ್ಲೂ ನಗು ಅರಳಿದೆ.

ಪ್ರೇಮಿಗಳ ದಿನದಂದು ಪ್ರಿಯತಮ ಹಾಗೂ ಪ್ರಿಯತಮೆ ಕೆಂಪು ಗುಲಾಬಿ ಕೊಟ್ಟು ಪ್ರೇಮ ನಿವೇದನೆ ಮಾಡಿಕೊಳ್ಳುವುದು ಸಾಮಾನ್ಯ. ಏಕೆಂದರೆ ಗುಲಾಬಿ ಪ್ರೀತಿಯ ಸಂಕೇತ. ತಮ್ಮ ಪ್ರೀತಿ ವ್ಯಕ್ತಪಡಿಸಲು ಇರುವ ಸೇತುವೆ ಕೂಡ. ಎರಡು ಹೃದಯಗಳನ್ನು ಒಂದುಗೂಡಿಸುವ ತಾಕತ್ತು ಇದೆ.

ವಿವಿಧ ತಳಿಗಳ ಚೆಂದನೆಯ ಗುಲಾಬಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ, ಮಾರುಕಟ್ಟೆಯಲ್ಲಿ ಗುಲಾಬಿ ದರವೂ ಏರುತ್ತಿದೆ. ಜಿಲ್ಲೆಯ ಗುಲಾಬಿ ಬೆಳೆಗಾರರು ಖುಷಿಯಾಗಿದ್ದಾರೆ. ಹಲವು ಪ್ರೇಮಿಗಳು ಗುಲಾಬಿ ಹೂವುಗಳಿಗೆ ಬೇಡಿಕೆ ಇಟ್ಟಿದ್ದಾರೆ.

ADVERTISEMENT

ಹೀಗಾಗಿ, ಫೆಬ್ರುವರಿ ಬಂತೆಂದರೆ ಹೂವು ಬೆಳೆಗಾರರ ಪಾಲಿಗೆ ಹಬ್ಬ. ವಿವಿಧೆಡೆಗೆ ಹೂವು ಸಾಗಿಸುತ್ತಾರೆ. ವಿದೇಶಗಳಿಗೆ ರಫ್ತಾಗುತ್ತಿರುವ ಗುಲಾಬಿ ಹೂವೊಂದಕ್ಕೆ ₹ 18ರವರೆಗೆ ದರವಿದೆ. ಸ್ಥಳೀಯವಾಗಿ ₹ 11 ರವರೆಗೆ ಮಾರಾಟವಾಗುತ್ತಿವೆ.

ಮುಳಬಾಗಿಲು ತಾಲ್ಲೂಕಿನ ದೊಡ್ಡಮಾದೇನಹಳ್ಳಿಯ ಪವನ್‌ ಕುಮಾರ್‌ ಕೆ. ಹಾಗೂ ಪ್ರತಿಭಾ ದಂಪತಿ ಸುಮಾರು 28 ಎಕರೆ ಪ್ರದೇಶದಲ್ಲಿ ಗುಲಾಬಿ ಬೆಳೆದಿದ್ದು, ವ್ಯಾಲೆಂಟೈನ್ಸ್‌ ಡೇ ಕಾರಣ ಹೆಚ್ಚಿನ ಬೇಡಿಕೆ ಬರುತ್ತಿದೆ ಎನ್ನುತ್ತಾರೆ.

ಪವನ್‌ ಸ್ನಾತಕೋತ್ತರ ಪದವಿ (ಫೈನಾನ್ಸ್‌) ಮಾಡಿದ್ದು ವಿವಿಧ ಉದ್ಯೋಗದ ಅವಕಾಶವಿದ್ದರೂ ಪೂರ್ಣವಾಗಿ ಗುಲಾಬಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿಭಾ ಬೆಂಗಳೂರಿನ ಐ.ಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ವಾರಾಂತ್ಯದಲ್ಲಿ ಪತಿಗೆ ಸಾಥ್‌ ನೀಡುತ್ತಾರೆ.

ಇವರು ಡಚ್‌ ರೋಸ್‌ ಬೆಳೆಯುತ್ತಾರೆ. ಇದರಲ್ಲಿ ಕೆಂಪು, ಬಿಳಿ, ಪಿಂಕ್‌, ಕ್ರೀಮ್‌ ಬಣ್ಣ ಸೇರಿದಂತೆ ಸುಮಾರು 9 ಬಣ್ಣಗಳ ಹೂವುಗಳಿವೆ. ಸುಮಾರು 250 ಮಂದಿಗೆ ಕೆಲಸ ನೀಡಿದ್ದಾರೆ. ದೇಶ, ವಿದೇಶಗಳಿಗೆ ಗುಲಾಬಿ ರಫ್ತು ಮಾಡುತ್ತಾರೆ. ದುಬೈ, ಸಿಂಗಪುರ, ಮಲೇಷ್ಯಾಕ್ಕೂ ಮಾರಾಟವಾಗುತ್ತವೆ.

ಹೂವುಗಳನ್ನು ಬೆಂಗಳೂರಿನ ಹೆಬ್ಬಾಳದಲ್ಲಿರುವ ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರಕ್ಕೂ (ಐಫ್ಯಾಬ್‌) ಸಾಗಿಸುತ್ತಾರೆ. ಇದಲ್ಲದೇ, ಸ್ಥಳೀಯ ಮಾರುಕಟ್ಟೆಗೂ ಮಾರಾಟ ಮಾಡುತ್ತಾರೆ.

‘ಒಂದು ಎಕರೆಯಲ್ಲಿ ಗುಲಾಬಿ ಪಾಲಿಹೌಸ್‌ ಮಾಡಿ, ಗಿಡ ನಾಟಿ ಮಾಡಿ, ಡ್ರಿಪ್ಸ್‌ ಅಳವಡಿಸಲು ಸುಮಾರು ₹ 45 ಲಕ್ಷ ಖರ್ಚಾಗುತ್ತದೆ. ಐದು ತಿಂಗಳು ಯಾವುದೇ ಆದಾಯ ಇರುವುದಿಲ್ಲ. ಬದಲಾಗಿ ನಿರ್ವಹಣೆಗೆ ಮತ್ತೆ ₹ 1.75 ಲಕ್ಷ ಖರ್ಚಾಗುತ್ತದೆ. ಬಳಿಕ ಆದಾಯ ಬರುತ್ತದೆ. ಒಂದು ಎಕರೆಯಲ್ಲಿ 32 ಸಾವಿರ ಗಿಡಗಳಿದ್ದರೆ ತಿಂಗಳಿಗೆ 64 ಸಾವಿರ ಹೂವುಗಳು ಬರುತ್ತವೆ. ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ಗುಲಾಬಿ ₹ 6ರಂತೆ ಮಾರಾಟವಾಗುತ್ತದೆ. ಉತ್ತಮ ಆದಾಯವಿದೆ’ ಎಂದು ಪವನ್‌ ಹೇಳುತ್ತಾರೆ.

ಇನ್ನು ಜಿಲ್ಲೆಯ ವಿವಿಧೆಡೆ ತಾಜ್‌ಮಹಲ್‌ ತಳಿಯ ಚೆಂದದ ಗುಲಾಬಿ ಹೂವುಗಳು ಅರಳಿ ನಿಂತಿವೆ. ಬೆಳೆಗಾರರು ಬೆಂಗಳೂರಿನ ಹೂವಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

‘ಪ್ರೇಮಿಗಳು ಪರಸ್ಪರ ಹೂವು ನೀಡಿ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡರೆ ನಮಗೆ ಲಾಭ. ಪ್ರೇಮಿಗಳಿಗೆ ನನ್ನ ಕಡೆಯಿಂದ ಶುಭಾಶಯ. ಚೆನ್ನಾಗಿ ಆಚರಿಸಿಕೊಳ್ಳಲಿ’ ಎಂದು ಹಲವು ಬೆಳೆಗಾರರು ಆಶಿಸಿದರು.

ಇನ್ನು ಶುಕ್ರವಾರ ಜಿಲ್ಲೆಯಲ್ಲೂ ಪ್ರೇಮಿಗಳು ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ‘ವ್ಯಾಲೆಂಟೈನ್ಸ್ ಡೇ’ ಆಚರಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.

ತರಹೇವಾರಿ ಬಣ್ಣಗಳ ಗುಲಾಬಿ ಹೂವು ಮಾರಾಟಕ್ಕೆ ಸಾಗಿಸಲು ಸಿದ್ಧತೆ 
ಗುಲಾಬಿ ಹೂವು ವಿಂಗಡಿಸುತ್ತಿರುವುದು
28 ಎಕರೆಯಲ್ಲಿ ದಂಪತಿಯಿಂದ ಗುಲಾಬಿ ಕೃಷಿ ಅಂತರರಾಷ್ಟ್ರೀಯು ಮಾರುಕಟ್ಟೆಯಲ್ಲಿ ಒಂದು ಗುಲಾಬಿಗೆ ₹ 18 ದರ ತಾಜ್‌ಮಹಲ್‌ ತಳಿಯ ಚೆಂದದ ಗುಲಾಬಿಗೂ ಬೇಡಿಕೆ
ವ್ಯಾಲೆಂಟೈನ್ಸ್‌ ಡೇ ಕಾರಣ ಗುಲಾಬಿ ಹೂವಿಗೆ ಬೇಡಿಕೆ ಹೆಚ್ಚಿದೆ. ರಾಷ್ಟ್ರೀಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಪ್ರೇಮಿಗಳು ನಾವು ಬೆಳೆಯುವ ಗುಲಾಬಿ ಹೆಚ್ಚು ಇಷ್ಟಪಡುತ್ತಾರೆ
ಪವನ್‌ ಕುಮಾರ್‌ ಕೆ. ಗುಲಾಬಿ ಬೆಳೆಗಾರ ಕೋಲಾರ
ಈ ಗುಲಾಬಿಯೂ ನಿನಗಾಗಿ…
ಗುಲಾಬಿ ಹೂವಿನ ಮೇಲೆ ಹಲವಾರು ಕವಿಗಳು ಸಾಹಿತಿಗಳು ಹತ್ತಾರು ಹಾಡು ಬರೆದಿದ್ದಾರೆ. ಮುಳ್ಳಿನ ಗುಲಾಬಿ ಸಿನಿಮಾದ ‘ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ’ ಓಂ ಸಿನಿಮಾದ ‘ಓ ಗುಲಾಬಿಯೇ ಓಓ ಗುಲಾಬಿಯೇ ನಿನ್ನಂದ ಚೆಲುವಿಂದ ಸೆಳೆಯೋದೇ ಪ್ರೇಮವೇ’ ಆಟೊ ರಾಜ ಸಿನಿಮಾದ ‘ನಲಿವ ಗುಲಾಬಿ ಹೂವೇ ಮುಗಿಲ ಮೇಲೇರಿ ನಗುವೆ’ ಕಲಾವಿದ ಸಿನಿಮಾದ ‘ಹೂವಾ ರೋಜಾ ಹೂವಾ’ ನಾನು ನನ್ನ ಹೆಂಡತಿ ಸಿನಿಮಾದ ‘ಯಾರೇ ನೀನು ರೋಜಾ ಹೂವೇ...’ ಹೀಗೆ ಹಲವು ಹಾಡುಗಳ ಮೂಲಕ ಗುಲಾಬಿ ಹೂವಿನ ಬಣ್ಣನೆ ಮಾಡುತ್ತಾ ಪ್ರೇಮದ ಬಗ್ಗೆ ವಿವರಿಸಲಾಗಿದೆ. ಹಿಂದಿ ಇಂಗ್ಲಿಷ್‌ ಬೇರೆ ಬೇರೆ ಭಾಷೆಗಳಲ್ಲೂ ಹಾಡುಗಳು ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.