ADVERTISEMENT

ಎಲ್ಲೆಡೆ ವರಮಹಾಲಕ್ಷ್ಮಿ ವ್ರತಾಚರಣೆ, ಪೂಜೆ

ಬೆಲೆ ಏರಿಕೆ ನಡುವೆಯೇ ಜಿಲ್ಲೆಯಾದ್ಯಂತ ವೈಭವ, ಅದ್ದೂರಿಯಿಂದ ಹಬ್ಬದ ಆಚರಣೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 17:59 IST
Last Updated 8 ಆಗಸ್ಟ್ 2025, 17:59 IST
ಕೋಲಾರದಲ್ಲಿ ಶುಕ್ರವಾರ ಕೋಲಾರಮ್ಮ ದೇಗುಲದಲ್ಲಿ ಭಕ್ತಾದಿಗಳು ಪೂಜೆ ಸಲ್ಲಿಸಿದರು
ಕೋಲಾರದಲ್ಲಿ ಶುಕ್ರವಾರ ಕೋಲಾರಮ್ಮ ದೇಗುಲದಲ್ಲಿ ಭಕ್ತಾದಿಗಳು ಪೂಜೆ ಸಲ್ಲಿಸಿದರು   

ಕೋಲಾರ: ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಶ್ರಾವಣ ಮಾಸದ ಎರಡನೇ ಹಬ್ಬ ವರಮಹಾಲಕ್ಷ್ಮಿ ವೃತಾಚರಣೆಯನ್ನು ಶುಕ್ರವಾರ ಭಕ್ತಿ ಭಾವ, ಸಡಗರದಿಂದ ಆಚರಿಸಲಾಯಿತು.

ಹೂವು, ಹಣ್ಣು, ದಿನಸಿ ಬೆಲೆ ಗಗನಕ್ಕೇರಿದ್ದರೂ ಸಾರ್ವಜನಿಕರಲ್ಲಿ ಅದರಲ್ಲೂ ಮಹಿಳೆಯರಲ್ಲಿ ಉತ್ಸಾಹ ಕುಗ್ಗಿರಲಿಲ್ಲ. ಮನೆಯಲ್ಲಿ ಲಕ್ಷ್ಮಿ ವಿಗ್ರಹವಿಟ್ಟು ಅದ್ದೂರಿ ಹಾಗೂ ವೈಭವದಿಂದ ಆಚರಿಸಿದರು. ಕಳಶದಲ್ಲಿ ಲಕ್ಷ್ಮಿದೇವಿ ಪ್ರತಿಷ್ಠಾಪಿಸಿ, ಪ್ರಾರ್ಥಿಸಿದರು. ಸ್ನೇಹಿತರು, ಬಂಧುಗಳು ಹಾಗೂ ನೆರೆ–ಹೊರೆಯವರನ್ನು ಕರೆದು ವ್ರತ ನೆರವೇರಿಸಿದರು. ವಿವಿಧ ದೇಗುಲಗಳಲ್ಲೂ ವಿಶೇಷ ಪೂಜೆ ನಡೆಯಿತು. ಹಿಂದಿನ ವರ್ಷಗಳಿಗಿಂತ ಹೆಚ್ಚು ಸಡಗರ, ಸಂಭ್ರಮ ಕಂಡುಬಂತು.

ಬೆಲೆ ಏರಿಕೆ, ಆರ್ಥಿಕ ಮುಗ್ಗಟ್ಟು ಏನೇ ಇದ್ದರೂ ಸಾಂಪ್ರದಾಯಿಕ ಪೂಜೆ ಮಾತ್ರ ನಿಲ್ಲಿಸಲು ಸಾಧ್ಯವಿಲ್ಲ ಎಂಬ ಆಶಯದೊಂದಿಗೆ ಮನೆಗಳಲ್ಲಿ ಲಕ್ಷ್ಮಿ ಮೂರ್ತಿ ಕೂರಿಸಿ ಹಬ್ಬ ಆಚರಿಸಿದರು. ಹೋಳಿಗೆ, ರವೆ ಹುಂಡಿ, ಚಿರೋಟಿ, ಪಾಯಸ ಸೇರಿದಂತೆ ವಿಶೇಷ ಖಾದ್ಯ ತಯಾರಿಸಿ ದೇವರಿಗೆ ನೈವೇದ್ಯ ಅರ್ಪಿಸಿದರು.

ADVERTISEMENT

ಕೆಲವು ಕುಟುಂಬಗಳು ರಾತ್ರಿಯಿಡಿ ನಿದ್ದೆಗೆಟ್ಟು ಪೂಜೆಗೆ ಸಿದ್ಧಗೊಳಿಸಿ ಮುಂಜಾನೆ 4 ಗಂಟೆಯಿಂದಲೇ ಮತ್ತೆ ಸಿದ್ಧತೆಯಲ್ಲಿ ತೊಡಗಿದ್ದು ಕಂಡುಬಂತು. ಮನೆಯನ್ನು ಸಿಂಗರಿಸಿ ರಂಗೋಲಿ ಬಿಡಿಸಿ ಹಬ್ಬವನ್ನು ಸ್ವಾಗತಿಸಿದರು.

ಕೆಲವರು ಪುರೋಹಿತರನ್ನು ಕರೆಸಿ ವಿಧಿವಿಧಾನಬದ್ಧವಾಗಿ ಹಬ್ಬ ಆಚರಿಸಿದರೆ, ಇನ್ನು ಕೆಲ ಮನೆಗಳಲ್ಲಿ ವರಮಹಾಲಕ್ಷ್ಮಿ ಪೂಜೆಯ ಯೂಟ್ಯೂಬ್, ಪುಸ್ತಕ ನೋಡಿಕೊಂಡು ಪೂಜಾವಿಧಿ ನೆರವೇರಿಸಿದರು.

ಕೆಲವು ಮನೆಗಳಲ್ಲಿ ಬೆಳ್ಳಿಯ ಲಕ್ಷ್ಮಿ ದೇವಿ ವಿಗ್ರಹಕ್ಕೆ ಹಣದ ಅಲಂಕಾರ ಮಾಡಿದ್ದರೆ, ಕೆಲವು ಮನೆಗಳಲ್ಲಿ ಕಳಸವಿಟ್ಟು, ಸೀರೆಯುಡಿಸಿ ವಿಶಿಷ್ಟ ರೀತಿಯಲ್ಲಿ ಹೂವಿನ ಅಲಂಕಾರ ಮಾಡಿ ಪೂಜಿಸಿದರು. ಹಲವರು ಹೂವು, ಆಭರಣ, ನೋಟು–ನಾಣ್ಯ ಇಟ್ಟಿದ್ದರು. ಚಿಣ್ಣರು ಹೊಸ ಬಟ್ಟೆ ತೊಟ್ಟರೆ, ಮಹಿಳೆಯರು ಸೀರೆಯುಟ್ಟು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. 

ನಗರದ ಪ್ರಮುಖ ಬಡಾವಣೆಗಳಲ್ಲಿ ಮುತ್ತೈದೆಯರನ್ನು ಮನೆಗೆ ಕರೆದು ಹೂವು, ತಾಂಬೂಲ ನೀಡುವ ಪದ್ಧತಿ ಸಂಜೆವರೆಗೆ ಮುಂದುವರಿದಿತ್ತು. ಉಡಿ ತುಂಬಿ ಹಬ್ಬದ ಶುಭಾಶಯ ಕೋರಿದರು.

ಹತ್ತಾರು ವರ್ಷಗಳ ಹಿಂದೆ ಕೆಲವೇ ಸಮುದಾಯಗಳಿಗೆ ಸೀಮಿತವಾಗಿದ್ದ ವರಮಹಾಲಕ್ಷ್ಮಿ ಪೂಜೆ ಇದೀಗ ಜಾತಿಬೇಧವಿಲ್ಲದೆ ಪ್ರತಿ ಮನೆಯಲ್ಲೂ ನಡೆಯುತ್ತಿದೆ. ಉಳ್ಳವರು ಮನೆಯಲ್ಲಿನ ಒಡವೆಯಿಂದ ಅಲಂಕಾರ ಮಾಡಿ ಹಣವಿಟ್ಟು ಪೂಜಿಸಿದರೆ ಸಾಮಾನ್ಯ ಹಾಗೂ ಮಧ್ಯಮ ವರ್ಗದವರು ಹೂವು, ಹಣ್ಣುಗಳಿಂದ ದೇವಿ ಪೂಜಿಸುತ್ತಾರೆ.

ವರಮಹಾಲಕ್ಷ್ಮಿ ಪೂಜೆ ಮಾಡುವುದರಿಂದ ತಮ್ಮ ಸಂಪತ್ತು ವೃದ್ಧಿಯಾಗುತ್ತದೆ ಎಂಬ ಭಾವನೆ ಕೆಲವರಿಗೆ. ಇನ್ನು ಕೆಲವರಿಗೆ ಸಂಪ್ರದಾಯ ಪಾಲನೆಯಾಗಿದೆ. ಕೆಲವೆಡೆ ನೂರಾರು ಮಹಿಳೆಯರು ಒಂದೆಡೆ ಸೇರಿ ಪೂಜೆಯಲ್ಲಿ ಪಾಲ್ಗೊಂಡಿದ್ದು ಕಂಡುಬಂತು.

ನಗರದ ವಿವಿಧ ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆಯಿತು. ನಗರದ ಕೆಇಬಿ ಕಾಲೋನಿಯ ವಿದ್ಯಾ ಗಣಪತಿ ದೇವಾಲಯದಲ್ಲಿ ಅಪ್ಪಣ್ಣ ಶಾಸ್ತ್ರಿ, ವೆಂಕಟೇಶ್ ನೇತೃತ್ವದಲ್ಲಿ ಪೂಜೆ ನಡೆಯಿತು.

ವೇಮಗಲ್‍ನಲ್ಲೂ ವಿಶೇಷ ಪೂಜೆ: ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯ ಬಿರುಸಿನ ಪ್ರಚಾರದ ನಡುವೆ ನಡೆಯುತ್ತಿದ್ದು, ಮನೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಡಗರ ಕಂಡು ಬಂತು. ಕೆಲವು ವಾರ್ಡ್‌ಗಳಲ್ಲಿ ಹಬ್ಬಕ್ಕೆ ಕೆಲ ಅಭ್ಯರ್ಥಿಗಳು ಆರ್ಥಿಕ ನೆರವು ನೀಡಿದ ಆರೋಪ ಕೇಳಿಬಂತು.

ಕೋಲಾರಮ್ಮಗೆ ವಿಶೇಷ ಅಲಂಕಾರ
ಕೋಲಾರದ ಕೋಟೆ ಬಡಾವಣೆಯಲ್ಲಿರುವ ಮಹಾಲಕ್ಷ್ಮಿ ಸಂಕಷ್ಟಹರ ಮಹಾಗಣಪತಿಗೆ ವಿಶೇಷ ಅಲಂಕಾರ

‌ರಜೆ ಇಲ್ಲದಿದ್ದರೂ ಕಚೇರಿ ಖಾಲಿ

ವರಮಹಾಲಕ್ಷ್ಮಿ ಹಬ್ಬಕ್ಕೆ ಸರ್ಕಾರ ರಜೆ ಘೋಷಿಸಿಲ್ಲ. ಆದರೆ. ಇರುವ ನಿರ್ಬಂದಿತ ರಜೆಯನ್ನು ಅಧಿಕಾರಿ ಸಿಬ್ಬಂದಿ ಪಡೆದುಕೊಂಡು ಹಬ್ಬದ ಸಡಗರದಲ್ಲಿ ಪಾಲ್ಗೊಂಡಿದ್ದರು. ಈ ಹಿನ್ನಲೆಯಲ್ಲಿ ನಗರದ ಬಹುತೇಕ ಸರ್ಕಾರಿ ಕಚೇರಿಗಳಲ್ಲೂ ಹಾಜರಾತಿ ಕಡಿಮೆ ಇತ್ತು. ರಜೆಯ ವಾತಾವರಣ ನಿರ್ಮಾಣವಾಗಿತ್ತು. ಕೆಲ ಖಾಸಗಿ ಶಾಲೆಗಳು ಮಕ್ಕಳಿಗೆ ರಜೆ ಕೂಡ ಘೋಷಣೆ ಮಾಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.