ADVERTISEMENT

ವರ್ತೂರು ಒಕ್ಕಲಿಗರಿಗೆ ನಿಂದಿಸಿಲ್ಲ: ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 2:16 IST
Last Updated 20 ನವೆಂಬರ್ 2025, 2:16 IST
ಕೋಲಾರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವರ್ತೂರು ಪ್ರಕಾಶ್‌ ಬೆಂಬಲಿಗ, ಒಕ್ಕಲಿಗ ಸಮುದಾಯದ ಮುಖಂಡ ಬೆಗ್ಲಿ ಸೂರ್ಯಪ್ರಕಾಶ್ ಹಾಗೂ ಇನ್ನಿತರರು ಮಾತನಾಡಿದರು
ಕೋಲಾರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವರ್ತೂರು ಪ್ರಕಾಶ್‌ ಬೆಂಬಲಿಗ, ಒಕ್ಕಲಿಗ ಸಮುದಾಯದ ಮುಖಂಡ ಬೆಗ್ಲಿ ಸೂರ್ಯಪ್ರಕಾಶ್ ಹಾಗೂ ಇನ್ನಿತರರು ಮಾತನಾಡಿದರು   

ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್‌ ಎಲ್ಲಿಯೂ ಒಕ್ಕಲಿಗರಿಗೆ ನಿಂದಿಸಿಲ್ಲ. ಆದಾಗ್ಯೂ ಅವರ ಮೇಲೆ ಒಕ್ಕಲಿಗ ಸಮುದಾಯದ ಕೆಲ ಮುಖಂಡರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ವರ್ತೂರು ಪ್ರಕಾಶ್‌ ಬೆಂಬಲಿಗ, ಒಕ್ಕಲಿಗ ಸಮುದಾಯದ ಮುಖಂಡ ಬೆಗ್ಲಿ ಸೂರ್ಯಪ್ರಕಾಶ್ ಹಾಗೂ ಇನ್ನಿತರರು ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬೆಂಗಳೂರಿನಲ್ಲಿ ನಡೆದ ಕುರುಬ ಸಮುದಾಯದ ಸಮಾರಂಭದಲ್ಲಿ ಮಾತನಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಗಳುವ ಭರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಹೆಸರು ಬಳಸಿದ್ದಾರೆ ಅಷ್ಟೆ. ಅದೊಂದು ಲೋಕಾಭಿರಾಮದ ಮಾತಾಗಿತ್ತು. ಅಲ್ಲೆಲ್ಲೂ ಒಕ್ಕಲಿಗ ಸಮುದಾಯವನ್ನಾಗಲಿ, ದೇವೇಗೌಡರನ್ನಾಗಲಿ ಬೈಯ್ದಿಲ್ಲ, ಟೀಕಿಸಿಲ್ಲ’ ಎಂದು ಸಮರ್ಥಿಸಿಕೊಂಡರು.

ತಮ್ಮದೇ ಸಮುದಾಯದ ಸಿದ್ದರಾಮಯ್ಯ ಅವರ ಬುದ್ಧಿವಂತಿಕೆ, ಜಾಣ್ಮೆ ಬಗ್ಗೆ ಮಾತನಾಡಿದ್ದಾರೆ. ಜನತಾ ಪರಿವಾರದಲ್ಲಿದ್ದ ಸಿದ್ದರಾಮಯ್ಯ ಈಗ ಉನ್ನತ ಹಂತ ತಲುಪಿದ್ದಾರೆ. ಇದಕ್ಕೆ ಅವರ ಬುದ್ಧಿವಂತಿಕೆ ಕಾರಣ ಎಂಬುದು ವರ್ತೂರು ಪ್ರಕಾಶ್‌ ಮಾತಾಗಿತ್ತು. ನಡೆಯುವಾಗ ಎಡವುದು ಸಹಜ. ಕೆಲವರು ಸಮುದಾಯವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದರು.

ADVERTISEMENT

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಶೇ 60 ಒಕ್ಕಲಿಗರು ವರ್ತೂರು ಪರ ಇದ್ದಾರೆ. ಬೆರಳೆಣಿಕೆ ಮಂದಿ ಒಕ್ಕಲಿಗ ಮುಖಂಡರು ಮಾತ್ರ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ, ಪ್ರಚೋದನೆ ಮಾಡುತ್ತಿದ್ದಾರೆ. ವರ್ತೂರು ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದಾರೆ. ಒಕ್ಕಲಿಗರ ಜೊತೆ ಅವರ ಸಂಬಂಧ ಚೆನ್ನಾಗಿಯೇ ಇದೆ ಎಂದು ಹೇಳಿದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಅವರಿಗೆ ಎನ್‌ಡಿಎ‌ ಟಿಕೆಟ್‌ ಸಿಗಲಿದೆ. ಅಕಸ್ಮಾತ್‌ ಅವರಿಗೆ‌ ಕೊಡದಿದ್ದರೆ ನಾವು ಸಿಎಂಆರ್‌ ಶ್ರೀನಾಥ್‌ ಅವರನ್ನೂ ಬೆಂಬಲಿಸುತ್ತೇವೆ ಎಂದರು.

ಅದೇ ಕಾರ್ಯಕ್ರಮದಲ್ಲಿ ವರ್ತೂರು ಮಾತನಾಡುತ್ತಾ ಬಿಜೆಪಿಯಲ್ಲಿ ತಾವಿರುವುದು ಅಷ್ಟಕಷ್ಟೆ ಎಂದಿದ್ದಾರೆ. ಆದರೆ, ಅವರೇನೂ ಪಕ್ಷ ಬಿಟ್ಟು ಹೋಗಿಲ್ಲ. ತಮಗೆ ಯಾವುದೇ ಸ್ಥಾನಮಾನ ಸಿಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಸರ್ವೇಶ್‌ ಬಾಬು, ನಾರಾಯಣಸ್ವಾಮಿ, ಮಂಜು ದೊಡ್ಡಹಸಾಳ, ರಾಜೇಶ್‌ ಚಿಕ್ಕಹಸಾಳ, ಚಲಪತಿ, ಆನಂದ, ಮಂಜು ಬೆಣೆಜೇನಹಳ್ಳಿ, ಮುರಳಿ, ಜಸ್ವಂತ್‌, ಮನು, ಪ್ರಭಾಕರ್‌, ರಾಜೇಶ್, ಟಿಪಿಎಂ ಮಂಜು, ಮೋಹನ್‌, ನಾಗೇಶ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.