ADVERTISEMENT

ನೀರಿನ ಸಂರಕ್ಷಣೆ ಆದ್ಯ ಕರ್ತವ್ಯ

ಜಲಶಕ್ತಿ ಅಭಿಯಾನದಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 15:45 IST
Last Updated 15 ಜುಲೈ 2019, 15:45 IST
ಜಿಲ್ಲಾಧಿಕಾರಿ ಜೆ.ಮಂಜುನಾಥ್ ಕೋಲಾರ ತಾಲ್ಲೂಕಿನ ಮುದುವಾಡಿ ಗ್ರಾಮದಲ್ಲಿ ಸೋಮವಾರ ಜಲಶಕ್ತಿ ಅಭಿಯಾನಕ್ಕೆ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಜೆ.ಮಂಜುನಾಥ್ ಕೋಲಾರ ತಾಲ್ಲೂಕಿನ ಮುದುವಾಡಿ ಗ್ರಾಮದಲ್ಲಿ ಸೋಮವಾರ ಜಲಶಕ್ತಿ ಅಭಿಯಾನಕ್ಕೆ ಚಾಲನೆ ನೀಡಿದರು.   

ಕೋಲಾರ: ‘ಜಲಶಕ್ತಿ ಅಭಿಯಾನವು ಕೇಂದ್ರ ಸರ್ಕಾರದ ಬಹು ದೊಡ್ಡ ಯೋಜನೆಯಾಗಿದ್ದು, ಇದನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನೀರಿನ ಸಂರಕ್ಷಣೆ ಕುರಿತು ತಾಲ್ಲೂಕಿನ ಮುದುವಾಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಲಶಕ್ತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

‘ರಾಜ್ಯ ಸರ್ಕಾರವು ಪ್ರಸಕ್ತ ಹಣಕಾಸು ವರ್ಷವನ್ನು ಬಜೆಟ್‌ನಲ್ಲಿ ಜಲ ಸಂರಕ್ಷಣೆ ವರ್ಷವೆಂದು ಘೋಷಿಸಿದೆ. ಮುಂದಿನ ಪೀಳಿಗೆಗೆ ಜೀವ ಜಲ ಉಳಿಸುವುದು ಇದರ ಮುಖ್ಯ ಉದ್ದೇಶ. ಈ ಅಭಿಯಾನದ ಜತೆಗೆ ಜಲಾಮೃತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೇವಲ ಒಂದು ದಿನ ಕಾರ್ಯಕ್ರಮ ಮಾಡುವುದರಿಂದ ನೀರು ಉಳಿಸಲು ಸಾಧ್ಯವಿಲ್ಲ. ನೀರಿನ ಸಂರಕ್ಷಣೆಯು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಈ ಹಿಂದೆ ಸ್ವಚ್ಛ ಭಾರತ್ ಯೋಜನೆಯಡಿ ದೇಶದೆಲ್ಲೆಡೆ ಸ್ವಚ್ಛತೆ ಕಾಪಾಡುವ ಕೆಲಸ ಮಾಡಲಾಯಿತು. ಇದರಿಂದ ದೇಶದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳಾದವು. ಸ್ವಚ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿತು. ಈ ಯೋಜನೆಯಡಿ ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತವಾಗಿಸಲು ಶೌಚಾಲಯ ನಿರ್ಮಿಸಲಾಯಿತು’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ ಸ್ವಚ್ಛ ಭಾರತ್‌ ಆಂದೋಲನ ಕೈಗೆತ್ತಿಕೊಂಡು ಕೋಲಾರ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಮಾಡಲಾಯಿತು. ರಾಜ್ಯ ಸಹ ಬಯಲು ಬಹಿರ್ದೆಸೆ ಮುಕ್ತ ರಾಜ್ಯವಾಗಿದೆ. ಅದರಂತೆ ಜಲಶಕ್ತಿ ಅಭಿಯಾನದ ಮೂಲಕ ನೀರಿನ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

256 ಜಿಲ್ಲೆ ಆಯ್ಕೆ: ‘ನೀರಿನ ಸಮಸ್ಯೆ ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಇದು ದೇಶದ ಅತಿ ದೊಡ್ಡ ಸಮಸ್ಯೆಯಾಗಿದೆ. ದೇಶದಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿರುವ 710 ಜಿಲ್ಲೆಗಳ ಪೈಕಿ 256 ಜಿಲ್ಲೆಗಳನ್ನು ಮೊದಲ ಹಂತದಲ್ಲಿ ಜಲಶಕ್ತಿ ಅಭಿಯಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಕೋಲಾರ ಜಿಲ್ಲೆ ಸಹ ಸೇರಿದೆ’ ಎಂದು ಮಾಹಿತಿ ನೀಡಿದರು.

‘ದೇಶದ 1,952 ತಾಲ್ಲೂಕುಗಳು ಹಾಗೂ 756 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈ ಅಭಿಯಾನ ನಡೆಯಲಿದೆ. ಈ ಎಲ್ಲಾ ಪ್ರದೇಶಗಳಲ್ಲಿ ನೀರಿನ ಮಹತ್ವ ಮತ್ತು ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ’ ಎಂದು ತಿಳಿಸಿದರು.

ಜಲಕ್ಷಾಮ ಎದುರಾಗಿದೆ: ‘ಕೆರೆ, ಕುಂಟೆ, ಬಾವಿಗಳಲ್ಲಿ ಜೀವ ಸೆಲೆ ಬತ್ತಿದೆ. ಪೂರ್ವಜರು ಕೆರೆ ಕುಂಟೆಯಲ್ಲಿನ ನೀರನ್ನೇ ಕುಡಿಯುತ್ತಿದ್ದರು. ನಂತರ ಅಂತರ್ಜಲ ಮಟ್ಟ ಕುಸಿಯುತ್ತಿದ್ದಂತೆ ಬಾವಿ ನೀರು ಬಳಸಲಾರಂಭಿಸಿದರು. ಕಾಲ ಕಳೆದಂತೆ ಕೈ ಪಂಪ್‌ಗಳ ಬಳಕೆ ಹೆಚ್ಚಾಯಿತು. ಆದರೆ, ಈಗ ಕೊಳವೆ ಬಾವಿಗಳನ್ನು ಕೊರೆದು ಭೂಮಿಯಿಂದ ನೀರು ಹೊರ ತೆಗೆದು ಬಳಸುವ ಸ್ಥಿತಿ ಎದುರಾಗಿದೆ. ಇದರಿಂದ ಫ್ಲೋರೈಡ್‌ನಂತಹ ವಿಷಕಾರಿ ರಾಸಾಯನಿಕಗಳು ದೇಹ ಸೇರುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಅಂತರ್ಜಲದ ಅತಿಯಾದ ಬಳಕೆಯಿಂದ ಜಲಕ್ಷಾಮ ಎದುರಾಗಿದೆ. ಶುದ್ಧ ನೀರಿಗೂ ಕುತ್ತು ಬಂದಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಪ್ರತಿಯೊಬ್ಬರೂ ಇದಕ್ಕೆ ಬೆಲೆ ತೆರಬೇಕಾಗುತ್ತದೆ. ಸಕಲ ಜೀವ ಸಂಕುಲಕ್ಕೂ ನೀರು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕೆರೆ, ಕುಂಟೆ, ಬಾವಿಗಳನ್ನು ಉಳಿಸುವುದು ಎಲ್ಲರ ಕೆಲಸವಾಗಬೇಕು. ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಂಡು ನೀರು ಸಂರಕ್ಷಣೆ ಮಾಡಬೇಕು. ಜತೆಗೆ ಅರಣ್ಯ ಸಂಪತ್ತು ವೃದ್ಧಿಸುವ ಮೂಲಕ ಮಳೆ ಪ್ರಮಾಣ ಹೆಚ್ಚುವಂತೆ ಮಾಡಬೇಕು’ ಎಂದು ಸಲಹೆ ನೀಡಿದರು.

ನೀರು ಬರಲಿದೆ: ‘ಜಿಲ್ಲೆಯಲ್ಲಿ ಸತತ ಬರಗಾಲವಿದೆ. ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು, 1,500 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಂತರ್ಜಲ ವೃದ್ಧಿಸಲು ಕೆ.ಸಿ ವ್ಯಾಲಿ ಯೋಜನೆ ಮೂಲಕ ಜಿಲ್ಲೆಯ 136 ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಈಗಾಗಲೇ 18 ಕೆರೆಗಳು ತುಂಬಿದ್ದು, ಉಳಿದ ಕೆರೆಗಳಿಗೂ ಸದ್ಯದಲ್ಲೇ ನೀರು ಬರಲಿದೆ’ ಎಂದು ವಿವರಿಸಿದರು.

‘ಬದಲಾವಣೆ ಶಾಲಾ ಮಕ್ಕಳಿಂದಲೇ ಆರಂಭವಾಗಬೇಕು. ವಿದ್ಯಾರ್ಥಿಗಳು ನೀರು ಸಂರಕ್ಷಿಸಿದರೆ ಪೋಷಕರು ಸಹ ಜಾಗೃತರಾಗುತ್ತಾರೆ. ಈ ನಿಟ್ಟಿನಲ್ಲಿ ಮಕ್ಕಳ ಸಣ್ಣ ಪ್ರಯತ್ನವು ದೇಶದಲ್ಲಿ ಅತಿ ದೊಡ್ಡ ಬದಲಾವಣೆ ತರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಮನುಷ್ಯನ ದೌರ್ಜನ್ಯ: ‘ಮನುಷ್ಯನ ದುರಾಸೆಗೆ ಗೋಕುಂಟೆಗಳು, ಕಲ್ಯಾಣಿಗಳು, ಕೆರೆಗಳು ಮುಚ್ಚಿ ಹೋಗಿವೆ. ಪರಿಸರದ ಮೇಲೆ ಮನುಷ್ಯನ ದೌರ್ಜನ್ಯ ಹೆಚ್ಚಾಗಿದೆ. ಇದರಿಂದ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಎದುರಾಗಿದೆ’ ಎಂದು ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ವಿಷಾದಿಸಿದರು.

‘ಪರಿಸರ ಉಳಿಸಲು ಪ್ರತಿಯೊಬ್ಬರು ಗಿಡ ನೆಡಬೇಕು. ಈ ಮೂಲಕ ಜಲಶಕ್ತಿ ಅಭಿಯಾನಕ್ಕೆ ಮತ್ತಷ್ಟು ಶಕ್ತಿ ತುಂಬಬೇಕು. ನೀರು ವ್ಯರ್ಥವಾಗುವುದನ್ನು ತಡೆದು ಭೂಮಿಯಲ್ಲಿ ಇಂಗಿಸುವ ಕೆಲಸ ಮಾಡಬೇಕು. ಇದಕ್ಕಾಗಿ ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗಿದೆ. ಈ ಚೆಕ್‌ಡ್ಯಾಂಗಳಲ್ಲಿ ನೀರು ನಿಲುಗಡೆಯಾಗುತ್ತಿದೆ. ಆದರೆ, ಕೆರೆಗಳಲ್ಲಿ ನೀರಿನ ನಿಲುಗಡೆಯಾಗುತ್ತಿಲ್ಲ’ ಎಂದರು.

ಅಂತರ್ಜಲ ಕುಸಿಯುತ್ತಿದೆ: ‘ನೀಲಗಿರಿ ಮತ್ತು ಅಕೇಶಿಯಾ ಮರಗಳಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಈ ಮರಗಳಿಂದ ಪರಿಸರಕ್ಕೆ ಯಾವುದೇ ಅನುಕೂಲವಿಲ್ಲ. ಆದ್ದರಿಂದ ನೀಲಗಿರಿ ಮತ್ತು ಅಕೇಶಿಯಾ ಮರಗಳನ್ನು ತೆರವುಗೊಳಿಸಿ ಹಣ್ಣಿನ ಗಿಡಗಳು ಹಾಗೂ ಪರಿಸರಸ್ನೇಹಿ ಸಸ್ಯಗಳನ್ನು ನೆಡಬೇಕು. ಇದಕ್ಕೆ ಸರ್ಕಾರದಿಂದ ಹಣಕಾಸು ನೆರವು ನೀಡಲಾಗುತ್ತದೆ’ ಎಂದು ವಿವರಿಸಿದರು.

‘ಕೋಟಿ ನಾಟಿ ಆಂದೋಲನದ ಮೂಲಕ ಜಿಲ್ಲೆಯಲ್ಲಿ ಈ ವರ್ಷ 25 ಲಕ್ಷ ಸಸಿ ನೆಡಲು ಉದ್ದೇಶಿಸಲಾಗಿದೆ. ಇದಕ್ಕೆ ಸಸಿಗಳನ್ನು ಸಿದ್ಧಗೊಳಿಸಲಾಗಿದೆ. ಮಳೆಯಾದ ತಕ್ಷಣ ಸಸಿ ನಾಟಿ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಅರಣ್ಯ ಸಂಪತ್ತು ಹೆಚ್ಚಿಸುವುದು ಕೋಟಿ ನಾಟಿ ಆಂದೋಲನ ಉದ್ದೇಶ’ ಎಂದು ಮಾಹಿತಿ ನೀಡಿದರು.

ಜಿ.ಪಂ ಸದಸ್ಯೆ ಪದ್ಮಾವತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌.ನಾಗರಾಜಗೌಡ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮೈಲೇರಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಾಬು, ಮುದುವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ರತ್ನಮ್ಮ, ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಮುಖ್ಯ ಶಿಕ್ಷಕ ಶಂಕರೇಗೌಡ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.