ಕೋಲಾರ: ಅವಿಭಜಿತ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ಹೊಸದಾಗಿ ರಚಿಸಿರುವ ಜಂಟಿ ಕ್ರಿಯಾ ಸಮಿತಿಗೆ ಅ.2ರ ಬೆಳಿಗ್ಗೆ 10 ಗಂಟೆಗೆ ಚಿಕ್ಕಬಳ್ಳಾಪುರದ ಕೆಇಬಿ ಸಮುದಾಯ ಭವನದಲ್ಲಿ ಚಾಲನೆ ನೀಡುವುದರೊಂದಿಗೆ ಜಲಾಗ್ರಹಕ್ಕಾಗಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ನೇತೃತ್ವದಲ್ಲಿ ತೆಲಂಗಾಣ ಮಾದರಿಯಲ್ಲಿ ಜಂಟಿ ಕ್ರಿಯಾ ಸಮಿತಿ ರೂಪಿಸಿಕೊಂಡು ಹೋರಾಟಕ್ಕೆ ಇಳಿಯುತ್ತಿದ್ದೇವೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಿದರೆ ಸಾಲದು; ಎಲ್ಲರೂ ಹೋರಾಟಕ್ಕೆ ಧುಮುಕಬೇಕು. ಕುಡಿಯುವ ನೀರು ಪಡೆಯಲು ದೊಡ್ಡ ಹೋರಾಟ ರೂಪಿಸಿ ಸರ್ಕಾರವನ್ನು ಬಗ್ಗಿಸಬೇಕಿದೆ ಎಂದರು.
ಮುಂದಿನ ಪೀಳಿಗೆಯ ಅಳಿವು ಉಳಿವಿನ ಪ್ರಶ್ನೆ ಇದು. ನೀರಿನ ಹಕ್ಕಿಗಾಗಿ ವಿದ್ಯಾರ್ಥಿಗಳು, ಯುವ ಸಮುದಾಯ, ಬುದ್ಧಿಜೀವಿಗಳು, ಪ್ರಗತಿಪರರು ಹಾಗೂ ಎಲ್ಲಾ ಸಂಘಟನೆಗಳು ಹೋರಾಟಕ್ಕೆ ಬರಬೇಕು. ಇದು ಮಾಡು ಇಲ್ಲವೇ ಮಡಿ ಹೋರಾಟ ಎಂದು ಹೇಳಿದರು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದಲ್ಲಿ 30 ವರ್ಷಗಳಿಂದ ನೀರಿನ ಹಾಹಾಕಾರ ಉಂಟಾಗಿದೆ, ಹೋರಾಟಗಳೂ ನಡೆಯುತ್ತಿವೆ. ಶುದ್ಧ ನೀರು ಪೂರೈಸುವ ಕೆಲಸ ಸರ್ಕಾರದಿಂದ ಈವರೆಗೆ ಆಗಿಲ್ಲ. ಪೆನ್ನಾರ್ ಯೋಜನೆ ಮರೆತು ಹೋಗಿದೆ. ಕೆರೆಗಳ ಸ್ವರೂಪಕ್ಕೆ ಧಕ್ಕೆ ಉಂಟಾಗಿದೆ. ಮುಂದಿನ ಪೀಳಿಗೆಗೆ ನೀರಿನ ಭದ್ರತೆ ಇಲ್ಲವಾಗಿದೆ, ಆಳದಲ್ಲಿ ಸಿಗುತ್ತಿರುವ ನೀರು ವಿಷಯುಕ್ತವಾಗಿದೆ, ಆಹಾರ ವಿಷಮಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಅನಾರೋಗ್ಯ ಸಮಸ್ಯೆ ಕಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಎತ್ತಿನಹೊಳೆ ಯೋಜನೆಯಿಂದ ನೀರು ಬರಲ್ಲ ಎಂದು ಗೊತ್ತಿದ್ದರೂ ಅನುದಾನ ಹೆಚ್ಚಿಸುತ್ತಲೇ ಇದ್ದಾರೆ. ವೆಚ್ಚವು ₹ 30 ಸಾವಿರ ಕೋಟಿ ತಲುಪಿದೆ. ಆದರೂ ಈ ಭಾಗದ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು .
ಆಂಧ್ರಪ್ರದೇಶ ಸರ್ಕಾರದ ಬದ್ಧತೆಯಿಂದಾಗಿ ಕುಪ್ಪಂಗೆ ನೀರು ಬಂದಿದೆ. ನಮ್ಮ ಸರ್ಕಾರಕ್ಕೆ ಚಿಕ್ಕಬಳ್ಳಾಪುರ, ಕೋಲಾರಕ್ಕೆ ತರಲು ಸಾಧ್ಯವಾಗಿಲ್ಲ. ಸಾವಿರಾರು ಕೆರೆಗಳಿದ್ದು, ಪುನರುಜ್ಜೀವನಗೊಳಿಸಲು ಪ್ಯಾಕೇಜ್ ಘೋಷಿಸಬೇಕೆಂದು ಆಗ್ರಹಿಸಿದರು.
ಸಂಚಾಲಕ ರಾಜೇಶ್ ಮಾತನಾಡಿ, ಶಾಶ್ವತ ನೀರಾವರಿ ಯೋಜನೆ ಬರಲೇ ಇಲ್ಲ. ಮೂರನೇ ಹಂತದ ಶುದ್ದೀಕರಣ ಆಗಲೇ ಇಲ್ಲ. ನಮ್ಮ ಹೋರಾಟದ ಸ್ವರೂಪ ಬದಲಾಗಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಕೈಜೋಡಿಸಬೇಕು. ಕುಡಿಯುವ ನೀರೇ ಸಿಗುತ್ತಿಲ್ಲವೆಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು.
ಸಂಚಾಲಕ ಹೊಳಲಿ ಪ್ರಕಾಶ್ ಮಾತನಾಡಿ, ನೀರಿಗಾಗಿ ನಡೆಯುತ್ತಿರುವ ಧರ್ಮ ಯುದ್ಧವಿದು. ನಾವು ಪಾಂಡವರ ಸ್ಥಾನದಲ್ಲಿ ನಿಂತು ಹೋರಾಟ ಮಾಡುತ್ತಿದ್ದೇವೆ. ನಮ್ಮ ಜಲಾಗ್ರಹ ಹೋರಾಟಕ್ಕೆ ಕೈಜೋಡಿಸದವರು ಕೌರವರ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎಂದರು.
ಕಲ್ವಮಂಜಲಿ ರಾಮು ಶಿವಣ್ಣ, ಜಿ.ನಾರಾಯಣಸ್ವಾಮಿ, ಶ್ರೀಕೃಷ್ಣ, ಮಳ್ಳೂರು ಹರೀಶ್, ಗೋವರ್ಧನ್, ಸಲಾಲುದ್ದೀನ್ ಬಾಬು, ಡಾ.ರಮೇಶ್ ಇದ್ದರು.
ಎತ್ತಿನಹೊಳೆ ಯೋಜನೆಯಲ್ಲಿ ಭಾರಿ ಮೋಸವಾಗುತ್ತಿದೆ ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ಧೀಕರಣ ನಡೆಯುತ್ತಿಲ್ಲ ಎಂಬ ಹೋರಾಟದ ಕಾರಣ ಸರ್ಕಾರ ನಮ್ಮನ್ನು ಅಸ್ಪೃಶ್ಯರಂತೆ ಕಾಣುತ್ತಿದೆಆರ್.ಆಂಜನೇಯರೆಡ್ಡಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ
ಶಾಶ್ವತ ನೀರಾವರಿ ಯೋಜನೆ ಹೋರಾಟಕ್ಕೆ ಬೆಂಬಲ ನೀಡದ ರಾಜಕಾರಣಿಗಳಿಗೆ ನೇಪಾಳದ ರೀತಿ ದಂಗೆ ಏಳಲು ಗ್ರಾಮದಲ್ಲಿ ಜನರನ್ನು ಎಚ್ಚರಿಸುತ್ತೇವೆ ಸಂಘಟಿಸುತ್ತೇವೆಹೊಳಲಿ ಪ್ರಕಾಶ್ ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.