ADVERTISEMENT

ಐ.ಟಿ ಅಧಿಕಾರಿಗಳಿಗೆ ದಾಖಲೆಪತ್ರ ಸಲ್ಲಿಸಿದ್ದೇವೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2019, 11:29 IST
Last Updated 23 ಮಾರ್ಚ್ 2019, 11:29 IST

ಕೋಲಾರ: ‘ಬ್ಯಾಂಕ್‌ ಸಾರ್ವಜನಿಕರ ಸ್ವತ್ತು. ಬ್ಯಾಂಕ್‌ನ ವಹಿವಾಟಿನ ಬಗ್ಗೆ ಪರಿಶೀಲನೆ ಮಾಡುವ ಅಧಿಕಾರ ನಬಾರ್ಡ್‌, ಭಾರತೀಯ ರಿಸರ್ವ್‌ ಬ್ಯಾಂಕ್‌ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಇದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಡಿಸಿಸಿ ಬ್ಯಾಂಕ್‌ ಮೇಲೆ ಶುಕ್ರವಾರ ನಡೆದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಸಂಬಂಧ ಪ್ರತಿಕ್ರಿಯಿಸಿದ ಅವರು, ‘ಬ್ಯಾಂಕ್‌ನ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಪತ್ರಗಳನ್ನು ಐ.ಟಿ ಅಧಿಕಾರಿಗಳಿಗೆ ಮುಕ್ತವಾಗಿ ಸಲ್ಲಿಸಿದ್ದೇವೆ’ ಎಂದು ಹೇಳಿದರು.

‘ಬ್ಯಾಂಕ್‌ನ ವಾರ್ಷಿಕ ಆದಾಯದ ಮೇಲೆ ಮುಂಗಡವಾಗಿ ಶೇ 25ರಷ್ಟು ತೆರಿಗೆ ಪಾವತಿಸಬೇಕೆಂಬ ನಿಯಮವಿದೆ. ಈ ನಿಯಮ ಎಲ್ಲಾ ಬ್ಯಾಂಕ್‌ಗಳಿಗೂ ಅನ್ವಯವಾಗುತ್ತದೆ. ಆದರೆ, ಬ್ಯಾಂಕ್‌ನ ಆದಾಯ ಅಥವಾ ನಷ್ಟದ ಅಂದಾಜು ಹಣಕಾಸು ವರ್ಷದ ಅಂತ್ಯದಲ್ಲಿ ಗೊತ್ತಾಗುತ್ತದೆ. ಲಾಭ– ನಷ್ಟದ ಮಾಹಿತಿಯೇ ಇಲ್ಲದೆ ತೆರಿಗೆ ಪಾವತಿ ಸಾಧ್ಯವಿಲ್ಲ. ಈ ಕಾರಣಕ್ಕೆ ತೆರಿಗೆ ಪಾವತಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಮುಂಗಡವಾಗಿ ಆದಾಯ ತೆರಿಗೆ ಕಟ್ಟಿಲ್ಲ ಎಂಬ ಕಾರಣಕ್ಕೆ ಐ.ಟಿ ಅಧಿಕಾರಿಗಳು ಬ್ಯಾಂಕ್‌ನ ಮೇಲೆ ದಾಳಿ ನಡೆಸಿದ್ದಾರೆ. ಆದಾಯ ತೆರಿಗೆ ಬಾಕಿ ವಿಚಾರವಾಗಿ ಹಿಂದಿನ ವರ್ಷವೂ ಐ.ಟಿ ಅಧಿಕಾರಿಗಳು ಬ್ಯಾಂಕ್‌ನ ಮೇಲೆ ದಾಳಿ ನಡೆಸಿದ್ದರು. ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ ಸುಮಾರು ₹ 23 ಕೋಟಿ ತೆರಿಗೆಯನ್ನು ಪಾವತಿಸಲಾಗಿತ್ತು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.