ADVERTISEMENT

ವಿಸ್ಟ್ರಾನ್‌ ಕಂಪನಿ ದಾಂದಲೆ ಪ್ರಕರಣ | ಬಾಹ್ಯ ವ್ಯಕ್ತಿಗಳ ಕೈವಾಡ: ಪೊಲೀಸರ ಶಂಕೆ

ತನಿಖೆ ಚುರುಕು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 16:24 IST
Last Updated 13 ಡಿಸೆಂಬರ್ 2020, 16:24 IST
ಕೋಲಾರ ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್‌ ಕಂಪನಿಯ ಭದ್ರತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
ಕೋಲಾರ ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್‌ ಕಂಪನಿಯ ಭದ್ರತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.   

ಕೋಲಾರ: ತಾಲ್ಲೂಕಿನ ವಿಸ್ಟ್ರಾನ್‌ ಕಂಪನಿಯಲ್ಲಿ ನಡೆದ ಕಾರ್ಮಿಕರ ದಾಂದಲೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಹೊರಗಿನ ವ್ಯಕ್ತಿಗಳು ಕಾರ್ಮಿಕರ ಸೋಗಿನಲ್ಲಿ ಕಂಪನಿಗೆ ಬಂದು ದುಷ್ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಕಂಪನಿಯಲ್ಲಿ 1,343 ಮಂದಿ ಕಾಯಂ ನೌಕರರು ಮತ್ತು 8,483 ಮಂದಿ ಗುತ್ತಿಗೆ ಕಾರ್ಮಿಕರು ಒಟ್ಟಾರೆ 4 ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಎಲ್ಲಾ ಕಾರ್ಮಿಕರಿಗೆ ಕಂಪನಿಯ ಗುರುತಿನ ಚೀಟಿ ನೀಡಲಾಗಿತ್ತು. ಅಲ್ಲದೇ, ಕಂಪನಿಯಿಂದ ಕಾರ್ಮಿಕರಿಗೆ ಬಸ್‌ ಸೌಲಭ್ಯ ಕಲ್ಪಿಸಲಾಗಿತ್ತು.

ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಹಾಗೂ ತಮಿಳುನಾಡಿನ ಹೊಸೂರು ಭಾಗದಿಂದ ಕಾರ್ಮಿಕರು ಪ್ರತಿನಿತ್ಯ ಕಂಪನಿ ಬಸ್‌ಗಳಲ್ಲಿ ಕೆಲಸಕ್ಕೆ ಬಂದು ಹೋಗುತ್ತಿದ್ದರು. ಬಸ್‌ ಸೌಲಭ್ಯಕ್ಕಾಗಿ ಕಾರ್ಮಿಕರ ವೇತನದಲ್ಲಿ ಹಣ ಕಡಿತಗೊಳಿಸಲಾಗುತ್ತಿತ್ತು.

ADVERTISEMENT

ಕಂಪನಿಗೆ ಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ನಿಯೋಜಿಸಿದ್ದ ಕ್ರಿಯೇಟಿವ್ ಎಂಜಿನಿಯರ್ಸ್‌, ಕ್ಯೂಸ್‌ ಕಾರ್ಪ್‌, ಇನ್ನೋವಾ ಸೋರ್ಸ್‌, ಅಡೆಕ್ಕೊ ಗ್ರೂಪ್‌, ನೀಡ್ಸ್‌ ಮ್ಯಾನ್‌ ಪವರ್‌ ಸಪೋರ್ಟ್‌ ಸರ್ವಿಸಸ್‌, ರ್‌್ಯಾಂಡ್‌ಸ್ಯಾಂಡ್‌ ಏಜೆನ್ಸಿಗಳು ಕಾರ್ಮಿಕರಿಗೆ 4 ತಿಂಗಳಿನಿಂದ ವೇತನ ಕೊಟ್ಟಿರಲಿಲ್ಲ. ಈ ಸಂಬಂಧ ಗುತ್ತಿಗೆ ಕಾರ್ಮಿಕರು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಪ್ರತಿನಿಧಿಗಳ ಬಳಿ ಅಳಲು ತೋಡಿಕೊಂಡಿದ್ದರೂ ವೇತನದ ಸಮಸ್ಯೆ ಬಗೆಹರಿದಿರಲಿಲ್ಲ ಎಂದು ಉನ್ನತ ಪೊಲೀಸ್‌ ಮೂಲಗಳು ತಿಳಿಸಿವೆ.

ಸಂಬಳ ಬಾರದೆ ಅಸಮಾಧಾನಗೊಂಡಿದ್ದ ಗುತ್ತಿಗೆ ಕಾರ್ಮಿಕರು ಕಂಪನಿಗೆ ಸಂಬಂಧಪಡದ ಬಾಹ್ಯ ವ್ಯಕ್ತಿಗಳು ಹಾಗೂ ಕೆಲ ಸಂಘಟನೆಗಳ ಸದಸ್ಯರ ಬಳಿ ಸಮಸ್ಯೆ ಪ್ರಸ್ತಾಪಿಸಿದ್ದರು. ಬಳಿಕ ಆ ಬಾಹ್ಯ ವ್ಯಕ್ತಿಗಳು ಮತ್ತು ಸಂಘಟನೆಗಳ ಸದಸ್ಯರು ಗುತ್ತಿಗೆ ಕಾರ್ಮಿಕರೊಂದಿಗೆ ಚರ್ಚಿಸಿ ಕಂಪನಿಯಲ್ಲಿ ದಾಂದಲೆ ನಡೆಸುವ ಸಂಚು ರೂಪಿಸಿದ್ದರು ಎಂದು ಮೂಲಗಳು ಹೇಳಿವೆ.

ಕಾರ್ಮಿಕರಂತೆ ಪ್ರವೇಶ: ಪೂರ್ವ ಯೋಜಿತ ಸಂಚಿನಂತೆ ಬಾಹ್ಯ ವ್ಯಕ್ತಿಗಳು ಮತ್ತು ಸಂಘಟನೆಗಳ ಸದಸ್ಯರು ಗುತ್ತಿಗೆ ಕಾರ್ಮಿಕರ ಗುರುತಿನ ಚೀಟಿ ಪಡೆದು ಕಾರ್ಮಿಕರ ಸೋಗಿನಲ್ಲಿ ಶುಕ್ರವಾರ (ಡಿ.11) ರಾತ್ರಿ ಮತ್ತು ಶನಿವಾರ (ಡಿ.12) ಬೆಳಗಿನ ಜಾವ ಕಂಪನಿ ಬಸ್‌ಗಳಲ್ಲೇ ಬಂದು ಕಂಪನಿ ಪ್ರವೇಶಿಸಿದ್ದರು ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.

ಶನಿವಾರದ ಮೊದಲ ಪಾಳಿ ಬೆಳಿಗ್ಗೆ 6 ಗಂಟೆಗೆ ಆರಂಭವಾಗಬೇಕಿತ್ತು. ಇದಕ್ಕೂ ಮುನ್ನವೇ ಬೆಳಗಿನ ಜಾವ 5.45ರ ಸುಮಾರಿಗೆ ಈ ವ್ಯಕ್ತಿಗಳು ಗುತ್ತಿಗೆ ಕಾರ್ಮಿಕರಿಗೆ ಪ್ರಚೋದನೆ ನೀಡಿ ಕಂಪನಿ ಮೇಲೆ ದಾಳಿ ಮಾಡಿಸಿದ್ದಾರೆ. ದಾಂದಲೆ ನಡೆಸಿರುವವರಲ್ಲಿ ಹಲವರು ಘಟನಾ ಸಂದರ್ಭದಲ್ಲಿ ಪಾನಮತ್ತರಾಗಿದ್ದರು. ಮದ್ಯದ ನಶೆಯಲ್ಲಿ ಅವರು ಮಹಿಳಾ ಕಾರ್ಮಿಕರನ್ನು ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಾಹ್ನವಿ ಮತ್ತು ಸಿಬ್ಬಂದಿ ತಂಡವು ವಿಸ್ಟ್ರಾನ್‌ ಕಂಪನಿಗೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕಂಪನಿಯ ಸಿ.ಸಿ ಕ್ಯಾಮೆರಾಗಳಲ್ಲಿ ದಾಖಲಾಗಿರುವ ಘಟನಾವಳಿಗೆ ಸಂಬಂಧಿಸಿದ ದೃಶ್ಯಾವಳಿಯನ್ನು ಪರಿಶೀಲಿಸಿದ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆ ಹಾಕಿದರು.

ಪೋಷಕರ ಪ್ರತಿಭಟನೆ: ಕಂಪನಿಯಲ್ಲಿ ಶುಕ್ರವಾರ ಮತ್ತು ಶನಿವಾರ ಕರ್ತವ್ಯಕ್ಕೆ ಹಾಜರಾಗಿದ್ದ ಎಲ್ಲಾ ಕಾರ್ಮಿಕರ ಮಾಹಿತಿ ಸಂಗ್ರಹಿಸಿರುವ ಪೊಲೀಸರು ಹಲವು ಕಾರ್ಮಿಕರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಇದರಿಂದ ಆತಂಕಗೊಂಡ ಕಾರ್ಮಿಕರ ಪೋಷಕರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು. ‘ನಮ್ಮ ಮಕ್ಕಳು ಕೆಲಸಕ್ಕೆ ಹೋಗದಿದ್ದರೂ ಪೊಲೀಸರು ವಿನಾಕಾರಣ ಅವರನ್ನು ಎಳೆದುಕೊಂಡು ಹೋಗಿದ್ದಾರೆ’ ಎಂದು ಪೋಷಕರು ಆರೋಪಿಸಿದರು.

ಬಳಿಕ ಹಿರಿಯ ಪೊಲೀಸ್‌ ಅಧಿಕಾರಿಗಳು, ‘ವಿಚಾರಣೆಗಾಗಿ ನಿಮ್ಮ ಮಕ್ಕಳನ್ನು ಕರೆದುಕೊಂಡು ಬಂದಿದ್ದೇವೆ. ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ. ವಿಚಾರಣೆ ನಂತರ ಬಿಟ್ಟು ಕಳುಹಿಸುತ್ತೇವೆ’ ಎಂದು ಪೋಷಕರ ಮನವೊಲಿಸಿ ವಾಪಸ್‌ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.