ADVERTISEMENT

ದಾಂದಲೆ ಪ್ರಕರಣ: 10 ಸಾವಿರ ಕಾರ್ಮಿಕರ ಬದುಕು ಅತಂತ್ರ

‘ವಿಸ್ಟ್ರಾನ್‌’ ಕಂಪನಿ ಪುನರಾರಂಭ: ಮುಂದುವರಿದ ಅನಿಶ್ಚಿತತೆ

ಜೆ.ಆರ್.ಗಿರೀಶ್
Published 14 ಡಿಸೆಂಬರ್ 2020, 21:23 IST
Last Updated 14 ಡಿಸೆಂಬರ್ 2020, 21:23 IST
–ಸಂಗ್ರಹ ಚಿತ್ರ
–ಸಂಗ್ರಹ ಚಿತ್ರ   

ಕೋಲಾರ: ಆ್ಯಪಲ್‌ ಐ–ಫೋನ್‌ ಉತ್ಪಾದಿಸುವ ವಿಸ್ಟ್ರಾನ್‌ ಇನ್ಫೋಕಾಮ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯಲ್ಲಿ ನಡೆದ ದಾಂದಲೆಯಿಂದ ಕಂಪನಿ ತಾತ್ಕಾಲಿಕವಾಗಿ ಬಂದ್ ಆಗಿದ್ದು, 10 ಸಾವಿರ ಕಾರ್ಮಿಕರ ಬದುಕು ಡೋಲಾಯಮಾನವಾಗಿದೆ.

ಶನಿವಾರದಿಂದ (ಡಿ.12) ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿರುವ ಕಂಪನಿಯು ಪುನಃ ಕಾರ್ಯಾರಂಭ ಮಾಡುವ ಬಗ್ಗೆ ಅನಿಶ್ಚಿತತೆ ಮುಂದುವರಿದಿದ್ದು, ಬೀದಿಗೆ ಬಿದ್ದಿರುವ ಕಾರ್ಮಿಕರು ಬಾಕಿ ಸಂಬಳವೂ ಸಿಗದೆ ಉದ್ಯೋಗವೂ ಇಲ್ಲದೆ ಅತಂತ್ರರಾಗಿದ್ದಾರೆ.

ವರ್ಷದ ಹಿಂದೆ ಕಾರ್ಯಾರಂಭ ಮಾಡಿದ್ದ ಕಂಪನಿಯಲ್ಲಿ 1,343 ಮಂದಿ ಕಾಯಂ ನೌಕರರು ಮತ್ತು 8,483 ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಜಿಲ್ಲೆಯ ಜತೆಗೆ ಅಕ್ಕಪಕ್ಕದ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಯ ಸಾವಿರಾರು ಮಂದಿಗೆ ಕಂಪನಿಯು ಉದ್ಯೋಗಾವಕಾಶ ಕಲ್ಪಿಸಿತ್ತು. ತಮಿಳುನಾಡಿನ ಹೊಸೂರು ಭಾಗದ ಕಾರ್ಮಿಕರು ಸಹ ಇಲ್ಲಿ ಕೆಲಸಕ್ಕೆ ಸೇರಿದ್ದರು.

ADVERTISEMENT

ವೇತನದ ವಿಚಾರವಾಗಿ ಕಾರ್ಮಿಕರು ಮತ್ತು ಖಾಸಗಿ ಏಜೆನ್ಸಿಗಳ ನಡುವೆ ಸೃಷ್ಟಿಯಾದ ವಿವಾದವು ಕಂಪನಿಯ ಜತೆಗೆ ಕಾರ್ಮಿಕರ ಬದುಕಿಗೂ ಕೊಳ್ಳಿ ಇಟ್ಟಿದೆ. ಡಿ.12ರ ಘಟನೆ ನಂತರ ಕಂಪನಿಯಲ್ಲಿ ಐ–ಫೋನ್‌ ಮತ್ತು ಬಿಡಿ ಭಾಗಗಳ ಉತ್ಪಾದನೆ ಸ್ಥಗಿತಗೊಂಡಿದ್ದು, ಕಾರ್ಮಿಕರು ನಿರುದ್ಯೋಗಿಗಳಾಗಿ ಕೆಲಸಕ್ಕೆ ಅಲೆಯುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಕಂಪನಿ ಪುನರಾರಂಭವಾದರೂ ಆಡಳಿತ ಮಂಡಳಿಯು ದಾಂದಲೆ ಕಾರಣಕ್ಕೆ ಹಳೇ ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರಿಸುತ್ತದೆಯೇ ಅಥವಾ ಹೊಸ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ. ದಾಂದಲೆ ಸಂಬಂಧ ಪೊಲೀಸರು ಈವರೆಗೆ 149 ಕಾರ್ಮಿಕರನ್ನು ಬಂಧಿಸಿದ್ದಾರೆ.

ಸಾವಿರಾರು ಕಾರ್ಮಿಕರು ಪೊಲೀಸ್‌ ಬಂಧನ ಭೀತಿಯಿಂದ ಊರು ತೊರೆದಿದ್ದಾರೆ. ಕಂಪನಿ ಪುನರಾರಂಭವಾಗಿ ಕೆಲಸಕ್ಕೆ ಮರಳಿದರೂ ಪೊಲೀಸರಿಗೆ ಸಿಕ್ಕಿ ಬೀಳುವ ಭೀತಿ ಕಾರ್ಮಿಕರನ್ನು ಕಾಡುತ್ತಿದೆ. ಇದರಿಂದ ಬೇರೆಡೆ ಕೆಲಸಕ್ಕೆ ಸೇರುವ ಅನಿವಾರ್ಯತೆಗೆ ಸಿಲುಕಿರುವ ಕಾರ್ಮಿಕರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

3 ತಿಂಗಳು ಬೇಕು: ‘ಕಂಪನಿಯ ಮೊಬೈಲ್‌ ಉತ್ಪಾದನಾ ಘಟಕ ಸಂಪೂರ್ಣ ಧ್ವಂಸವಾಗಿದೆ ಮತ್ತು ಯಂತ್ರೋಪಕರಣ ಹಾಳಾಗಿವೆ. ಹೊಸ ಯಂತ್ರೋಪಕರಣ ಅಳವಡಿಸಿ ಉತ್ಪಾದನಾ ಘಟಕವನ್ನು ಮೊದಲ ಸ್ಥಿತಿಗೆ ತರಲು ಕನಿಷ್ಠ 3 ತಿಂಗಳ ಕಾಲಾವಕಾಶ ಬೇಕು. ಕಂಪನಿ ಪುನರಾರಂಭಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಆಡಳಿತ ಮಂಡಳಿಯಲ್ಲಿ ಚರ್ಚೆ ನಡೆದಿದೆ’ ಎಂದು ಕಂಪನಿ ಪ್ರತಿನಿಧಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪತಿ ಮತ್ತು ನಾನು ವಿಸ್ಟ್ರಾನ್‌ ಕಂಪನಿಯಲ್ಲಿ ಕೆಲಸಕ್ಕೆ ಸೇರಿ 15 ದಿನವಾಗಿದೆ. ಕಂಪನಿ ಮುಚ್ಚಿರುವುದರಿಂದ ದಿಕ್ಕು ತೋಚದಂತಾಗಿದೆ. ಕಂಪನಿ ಪುನರಾರಂಭದ ಬಗ್ಗೆ ಯಾವುದೇ ಮಾಹಿತಿಯಿಲ್ಲ’ ಎಂದು ಮಹಿಳಾ ಉದ್ಯೋಗಿಯೊಬ್ಬರು ಅಳಲು ತೋಡಿಕೊಂಡರು.

ಇಷ್ಟೆಲ್ಲಾ ಗೊಂದಲದ ನಡುವೆ ಕಂಪನಿ ವ್ಯವಸ್ಥಾಪಕ ಸೆಂಥಿಲ್‌ಕುಮಾರ್‌ ಅವರು ಕಾಯಂ ನೌಕರರ ಮೊಬೈಲ್‌ಗೆ ಸಂದೇಶ ಕಳುಹಿಸಿ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ. ಕಾಯಂ ನೌಕರರಲ್ಲಿ ಹಲವರು ಸೋಮವಾರ ಕೆಲಸಕ್ಕೆ ಹಾಜರಾಗಿದ್ದು, ಕಂಪನಿ ಪುನರಾರಂಭದ ಆಶಾಭಾವನೆ ಮೂಡಿದೆ.

ಅತಿ ಹೆಚ್ಚು ಹೂಡಿಕೆ
ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿರುವ ಕೋಲಾರ ಜಿಲ್ಲೆಯ 8 ಕೈಗಾರಿಕಾ ಪ್ರದೇಶಗಳಲ್ಲಿ 19,261 ಕೈಗಾರಿಕೆಗಳಿವೆ. ಈ ಕೈಗಾರಿಕೆಗಳಲ್ಲಿ ಸುಮಾರು ₹ 7,477 ಕೋಟಿ ಬಂಡವಾಳ ಹೂಡಿಕೆಯಾಗಿದ್ದು, 1.64 ಲಕ್ಷ ಮಂದಿ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ತೈವಾನ್‌ ಮೂಲದ ವಿಸ್ಟ್ರಾನ್‌ ಕಂಪನಿಯು ಜಿಲ್ಲೆಯಲ್ಲಿ ಅತಿ ಹೆಚ್ಚು (₹ 3 ಸಾವಿರ ಕೋಟಿ) ಬಂಡವಾಳ ಹೂಡಿಕೆ ಮಾಡಿದ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಂಪನಿಯು ಅಲ್ಪಾವಧಿಯಲ್ಲಿ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸಿತ್ತು. ಕೋವಿಡ್‌ ಸಂಕಷ್ಟದ ಸಂದರ್ಭದಲ್ಲೂ ಪ್ರತಿನಿತ್ಯ ಸಾವಿರಾರು ನೌಕರರ ನೇಮಕಾತಿ ನಡೆಸಿತ್ತು. 26 ವರ್ಷದೊಳಗಿನ ಐಟಿಐ, ಡಿಪ್ಲೊಮಾ ಮತ್ತು ಬಿ.ಇ ಪದವೀಧರರನ್ನು ಹೆಚ್ಚಿನ ಪ್ರಮಾಣದಲ್ಲಿ ಕೆಲಸಕ್ಕೆ ಸೇರಿಸಿಕೊಂಡಿತ್ತು. ಇದರಿಂದ ಜಿಲ್ಲೆಯಲ್ಲಿ ಕಾರ್ಮಿಕರ ಮಹಾ ವಲಸೆ ತಪ್ಪಿತ್ತು.

ವಿಸ್ಟ್ರಾನ್‌ ಕಂಪನಿಯಲ್ಲಿ ನಿಯಮಗಳ ಉಲ್ಲಂಘನೆ
ಬೆಂಗಳೂರು:
ವಿಸ್ಟ್ರಾನ್‌ ಕಂಪನಿಯು ನರಸಾಪುರದಲ್ಲಿ ಕೆಲವು ನಿಯಮಗಳನ್ನು ಉಲ್ಲಂಘಿಸಿರುವುದನ್ನು ಕಾರ್ಖಾನೆ, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಇಲಾಖೆ ಸಿದ್ಧಪಡಿಸಿರುವ ವರದಿಯೊಂದು ಉಲ್ಲೇಖಿಸಿದೆ.

ಒಟ್ಟು ಐದು ಸಾವಿರ ಜನರಿಗೆ ಉದ್ಯೋಗ ನೀಡಲು ಅನುಮತಿ ಪಡೆದಿದ್ದರೂ, ಕಿರು ಅವಧಿಯಲ್ಲಿ 10,500 ಜನರಿಗೆ ಅದು ಅನುಮತಿ ಇಲ್ಲದೆಯೇ ಉದ್ಯೋಗ ನೀಡಿದೆ. ಸರ್ಕಾರದ ಒಪ್ಪಿಗೆ ಇಲ್ಲದೆಯೇ ಹೊಸ ಕಟ್ಟಡಗಳ ನಿರ್ಮಾಣ ಆರಂಭಿಸಿದೆ ಎಂದು ವರದಿ ಹೇಳಿದೆ.
ಮಹಿಳಾ ಕಾರ್ಮಿಕರಿಗೆ ಓವರ್‌ಟೈಂ ಕೆಲಸ ಮಾಡಲು ಅವಕಾಶ ಇಲ್ಲದಿದ್ದರೂ, ಅವರಿಗೆ ಹಾಗೆ ಮಾಡಲು ಕಾರ್ಖಾನೆ ಆವರಣದಲ್ಲಿ ಅವಕಾಶ ಇತ್ತು.

ವೇತನ ಪಾವತಿಯಲ್ಲಿನ ವ್ಯತ್ಯಾಸದ ಬಗ್ಗೆ ಗುತ್ತಿಗೆದಾರ ಕಂಪನಿಗಳ ಹಾಗೂ ಮಾನವ ಸಂಪನ್ಮೂಲ ವಿಭಾಗದ ಗಮನಕ್ಕೆ ತಂದಾಗ, ‘ಈ ಸಮಸ್ಯೆ ಬಗೆಹರಿಸಲಾಗುವುದು. ಮುಂದಿನ ತಿಂಗಳ ವೇತನದ ಜೊತೆಯಲ್ಲಿ ವ್ಯತ್ಯಾಸದ ಮೊತ್ತವನ್ನು ಪಾವತಿಸಲಾಗುವುದು’ ಎಂದು ಹೇಳಲಾಗಿತ್ತು. ಆದರೆ, ಆ ಕೆಲಸ ಆಗಿಲ್ಲ ಎಂದು ವರದಿ ಹೇಳಿದೆ.

‘ಹೌಸ್‌ಕೀಪಿಂಗ್‌ ವಿಭಾಗದ ಗುತ್ತಿಗೆ ನೌಕರರಿಗೆ ವೇತನ ಪಾವತಿ ಆಗಿಲ್ಲ. ಅವರು ದಿನಕ್ಕೆ 12 ತಾಸು, ವಾರದಲ್ಲಿ ಆರು ದಿನ ಕೆಲಸ ಮಾಡಬೇಕಿದೆ. ಅವರಿಗೆ ಎಂಟು ತಾಸು ಕೆಲಸಕ್ಕೆ ಎಷ್ಟು ವೇತನವೋ ಅಷ್ಟನ್ನು ಮಾತ್ರ ನೀಡಲಾಗುತ್ತಿದೆ’ ಎಂದು ಕೂಡ ವರದಿ ಹೇಳಿದೆ.

*
ವಿಸ್ಟ್ರಾನ್‌ ಕಂಪನಿಯನ್ನು ಜಿಲ್ಲೆಯಲ್ಲೇ ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಹಂತದಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ. ಕಂಪನಿಯು ಜಿಲ್ಲೆಯಿಂದ ಖಂಡಿತ ಹೊರ ಹೋಗುವುದಿಲ್ಲ. ಕಾರ್ಮಿಕರು ಆತಂಕಪಡಬೇಕಿಲ್ಲ.
–ಸುರೇಶ್‌, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.