ADVERTISEMENT

ಕೋಲಾರ | ಎತ್ತಿನಹೊಳೆಗೆ ಕಲ್ಲುನೆಟ್ಟು 12 ವರ್ಷ: ಒಂದು ಹನಿ ನೀರೂ ಬರಲಿಲ್ಲ!

ಕೆ.ಓಂಕಾರ ಮೂರ್ತಿ
Published 3 ಮಾರ್ಚ್ 2026, 5:36 IST
Last Updated 3 ಮಾರ್ಚ್ 2026, 5:36 IST
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1 ರಲ್ಲಿ ಸಕಲೇಶಪುರದ ಹೆಬ್ಬನಹಳ್ಳಿಯಲ್ಲಿರುವ ನೀರು ವಿತರಣಾ ನಾಲ್ಕು ತೊಟ್ಟಿಗಳಲ್ಲಿ ನೀರು ಉಕ್ಕಿದ್ದ ಕ್ಷಣ  
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1 ರಲ್ಲಿ ಸಕಲೇಶಪುರದ ಹೆಬ್ಬನಹಳ್ಳಿಯಲ್ಲಿರುವ ನೀರು ವಿತರಣಾ ನಾಲ್ಕು ತೊಟ್ಟಿಗಳಲ್ಲಿ ನೀರು ಉಕ್ಕಿದ್ದ ಕ್ಷಣ     

ಕೋಲಾರ: 03–03–2014… ಎತ್ತಿನಹೊಳೆ ನೀರನ್ನು ಬಯಲುಸೀಮೆ ಜಿಲ್ಲೆಗಳಾದ ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಹರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ಶಂಕುಸ್ಥಾಪನೆ ನೆರವೇರಿಸಿದ ದಿನ.

ಅದಾಗಿ ಇಂದಿಗೆ (03–03–2026) 12 ವರ್ಷಗಳೇ ಕಳೆದು ಹೋಗಿವೆ. ನಂತರ ಸಮ್ಮಿಶ್ರ ಸರ್ಕಾರ, ಆನಂತರ ಬಿಜೆಪಿ ಸರ್ಕಾರ, ಈಗ ಮತ್ತೊಮ್ಮೆ ಕಾಂಗ್ರೆಸ್‌ ಸರ್ಕಾರ ಬಂದಿದೆ. ಅಂದು ಭೂಮಿಪೂಜೆ ಮಾಡಿದವರೇ ಇಂದೂ ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ಕೋಲಾರ ಜನರ ಬಾಯಿಗೆ ಎತ್ತಿನಹೊಳೆಯ ಒಂದನಿ ನೀರೂ ಸೇರಿಲ್ಲ. ಭರವಸೆ ಮಾತು ಕೇಳಿ ಕೇಳಿ ಜನರು ಸುಸ್ತಾಗಿದ್ದಾರೆ.

ಆಡಳಿತ ಪಕ್ಷದ ಯಾವುದೇ ಜನಪ್ರತಿನಿಧಿಯನ್ನು ಕೇಳಿದರೂ ಮುಂದಿನ ವರ್ಷ ನೀರು ಹರಿಯವುದು ಖಚಿತವೆನ್ನುತ್ತಾರೆ. ಬಿಜೆಪಿಯವರು, ಜೆಡಿಎಸ್‌ನವರು ಮಾತನಾಡಲು ಮುಂದಾದರೆ ಅವರ ಅಧಿಕಾರಾವಧಿಯಲ್ಲಿ ಏನು ಮಾಡಿದರು ಎಂದು ಕಾಂಗ್ರೆಸ್‌ನವರು ಪ್ರಶ್ನಿಸುತ್ತಾರೆ.

ADVERTISEMENT

‘ಎತ್ತಿನಹೊಳೆ ನೀರನ್ನು ಬಯಲುಸೀಮೆ ಜಿಲ್ಲೆಗಳಿಗೆ ತರಲು ಸಾಧ್ಯವಿಲ್ಲವೆಂದು ಕೆಲ ವರದಿಗಳು ಹೇಳುತ್ತಿವೆ. ಕಾರ್ಯಸಾಧುವಲ್ಲದ ಯೋಜನೆಗೆ ಏಕೆ ಅಷ್ಟೊಂದು ಖರ್ಚು ಮಾಡುತ್ತಿದ್ದೀರಿ? ಜನರಿಗೆ ಮೋಸ ಮಾಡುತ್ತಿದ್ದೀರಾ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಈಚೆಗೆ ಕೋಲಾರದಲ್ಲಿ ನಡೆದಿದ್ದ ಜಲಾಗ್ರಹ ಹೋರಾಟದಲ್ಲಿ ಪ್ರಶ್ನಿಸಿದ್ದರು.

ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿಯ ಜನಪ್ರತಿನಿಧಿಗಳ ಜಗಳದಲ್ಲಿ ಜಿಲ್ಲೆಯ ಜನರು ಶುದ್ಧ ಕುಡಿಯುವ ನೀರಿಲ್ಲದೇ ಪರದಾಡುತ್ತಿದ್ದಾರೆ. ಕನಿಷ್ಠ ತಮ್ಮ ಪಾಲಿಗೆ ಬರಬೇಕಾದ ಕೃಷ್ಣಾ ನದಿ ನೀರನ್ನಾದರೂ ಕೊಡಿ ಎಂದು ಬೇಡುವ ಪರಿಸ್ಥಿತಿ ಎದುರಾಗಿದೆ.

ಈಚೆಗೆ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ 2027ಕ್ಕೆ ಎತ್ತಿನಹೊಳೆ ನೀರು ಹರಿಸುವುದಾಗಿ ಭರವಸೆ ನೀಡಿದ್ದಾರೆ.

ಬಂಗಾರಪೇಟೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಯಕ್ಕೆ ಸರಿಯಾಗಿ ಕಾಮಗಾರಿ ನಡೆದು ನೀರು ಹರಿಯಲಿದೆ ಎಂದಿದ್ದಾರೆ.

ಈಗಾಗಲೇ ಯೋಜನಾ ವೆಚ್ಚ ₹ 24 ಸಾವಿರ ಕೋಟಿ ದಾಟಿದ್ದು, ಈ ಬಗ್ಗೆ ಲೆಕ್ಕ ಕೊಡಿ ಎಂದು ಜೆಡಿಎಸ್‌, ಬಿಜೆಪಿ, ನೀರಾವರಿ ಹೋರಾಟಗಾರರು ಕೇಳುತ್ತಿದ್ದಾರೆ.

ಪ್ರಸ್ತುತ ಕೆ.ಸಿ ವ್ಯಾಲಿ ಯೋಜನೆಯಡಿ ಕೆರೆಗಳನ್ನು ತುಂಬಿಸಲಾಗುತ್ತಿದೆಯಾದರೂ ಅಂತರ್ಜಲ ವೃದ್ಧಿಗೆ ಸಹಾಯಕವಾಗಿದೆ. ಜೊತೆಗೆ ಮಣ್ಣು ಹಾಗೂ ತರಕಾರಿ ವಿಷಯುಕ್ತವಾಗುತ್ತಿವೆ, ಟೊಮೆಟೊ ಸೇರಿದಂತೆ ಇನ್ನಿತರ ಬೆಳೆಗಳ ಗುಣಮಟ್ಟ ಕಡಿಮೆ ಆಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿದೆ. ಮೂರನೇ ಹಂತದ ಶುದ್ಧೀಕರಣವೂ ನಡೆದಿಲ್ಲ.

ಜಿಲ್ಲೆಯಲ್ಲಿ ಯಾವುದೇ ನೈಸರ್ಗಿಕ ಹರಿಯುವ ಜಲಮೂಲಗಳಿಲ್ಲ. ಮೂರು ಸಾವಿರಕ್ಕೂ ಹೆಚ್ಚು ಕೆರೆಗಳಲ್ಲಿ ಸಂಗ್ರಹವಾಗುವ ನೀರು, ಕೊಳವೆಬಾವಿಯ ನೀರು ಕೃಷಿ ಮತ್ತು ಜೀವನಕ್ಕೆ ಅವಲಂಬಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಸಮಸ್ಯೆ ಹಾಗೆಯೇ ಉಳಿದಿದೆ.

ಚಿಕ್ಕಬಳ್ಳಾಪುರದಲ್ಲಿ ನಡೆದ ಎತ್ತಿನಹೊಳೆ ಯೋಜನೆಯ ಶಂಕುಸ್ಥಾಪನೆ ಸಮಾರಂಭದ ಆಹ್ವಾನ ಪತ್ರಿಕೆ

ಏನಿದು ಎತ್ತಿನಹೊಳೆ ಯೋಜನೆ?

ಸಕಲೇಶಪುರದ ಎತ್ತಿನಹೊಳೆ ಸೇರಿದಂತೆ ವಿವಿಧ ಹಳ್ಳಗಳಲ್ಲಿ ಸಂಗ್ರಹವಾಗುವ ನೀರನ್ನು ತಂದು ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಸೇರಿದಂತೆ ಏಳು ಜಿಲ್ಲೆಗಳ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಆಶಯದ ಯೋಜನೆ ಇದಾಗಿದೆ. 2014ರಲ್ಲಿ ಶಂಕುಸ್ಥಾಪನೆಯಾದ ಈ ಯೋಜನೆ ₹ 8 ಸಾವಿರ ಕೋಟಿಯಿಂದ ಈಗ ₹ 24 ಸಾವಿರ ಕೋಟಿಗೆ ಏರಿದೆ. ಈ ಯೋಜನೆಯಡಿ 24 ಟಿಎಂಸಿ ಅಡಿ ನೀರು ಲಭ್ಯವಾಗುವ ಬಗ್ಗೆ ಹೇಳಿತ್ತು. ಅದರಲ್ಲಿ 18 ಟಿಎಂಸಿ ಅಡಿ ನೀರನ್ನು ಕುಡಿಯುವ ಉದ್ದೇಶಕ್ಕೆ ಮೀಸಲಿಡಲು ಆಗ ಚಿಂತಿಸಲಾಗಿತ್ತು. ಉಳಿದ 10 ಟಿಎಂಸಿ ಅಡಿ ನೀರನ್ನು ಏಳು ಜಿಲ್ಲೆಗಳ ಕೆರೆಗಳನ್ನು ತುಂಬಿಸಲು ಬಳಸಲಾಗುತ್ತದೆ ಎಂದೂ ಹೇಳಿದ್ದರು. ಕೋಲಾರ ಜಿಲ್ಲೆಗೆ 2.8 ಟಿಎಂಸಿ ಅಡಿ ಕುಡಿಯುವ ನೀರನ್ನು ಹರಿಸುವ ಭರವಸೆ ನೀಡಿದ್ದರು. ಈ ವರೆಗೆ ಈ ಜಿಲ್ಲೆಗೆ ನೀರು ಮಾತ್ರ ಬರಲಿಲ್ಲ.

ಅಂದೇ ಪ್ರತಿಭಟಿಸಿದ್ದ ನಮ್ಮನ್ನು ಬಂಧಿಸಿದ್ದರು ಎತ್ತಿನಹೊಳೆ ಯೋಜನೆ ಕಾರ್ಯಸಾಧುವಲ್ಲವೆಂದು ಒಂದು ಹನಿಯೂ ನೀರು ಬರಲ್ಲವೆಂದು 2014ರ ಮಾರ್ಚ್‌ 3ರ ಶಂಕುಸ್ಥಾಪನೆಯ ದಿನವೇ ನಾವು ಪ್ರತಿಭಟನೆ ನಡೆಸಿದ್ದೆವು. ಹಲವಾರು ಲೋಪದೋಷಗಳಿಂದ ಕೂಡಿದ ಯೋಜನೆ ಎಂದು ಹೇಳಿದ್ದವು. ಆಗ ಪೊಲೀಸರು ಸುಮಾರು 500 ಜನರನ್ನು ಬಂಧಿಸಿದ್ದರು. 2 ವರ್ಷಗಳಲ್ಲಿ ನೀರು ಹರಿಸುವುದಾಗಿ ಅಂದು ಸಿದ್ದರಾಮಯ್ಯ ಭಾಷಣ ಮಾಡಿದ್ದರು. ಈಗ ನೋಡಿದರೆ 12 ವರ್ಷವಾದರೂ ನೀರು ಬರಲಿಲ್ಲ. ಈಗ ಅದೇ ಸರ್ಕಾರ ಯೋಜನೆ ಬಗ್ಗೆ ಉಲ್ಟಾ ಹೊಡೆಯುತ್ತಿದೆ. ಯೋಜನೆಯಲ್ಲಿ ಭ್ರಷ್ಟಾಚಾರ ಲೋಪವಾಗಿರುವ ಬಗ್ಗೆ ಸಿಎಜಿ ವರದಿಯೇ ಹೇಳಿದೆ. ಆದರೂ ಎರಡೂ ಜಿಲ್ಲೆಗಳು ಜನಪ್ರತಿನಿಧಿಗಳು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಜನರು ಕೂಡ ಜನಪ್ರತಿನಿಧಿಗಳ ಬುರುಡೆ ಮಾತು ಕೇಳಿರುವುದು ನೋವುಂಟು ಮಾಡಿದೆ
ಆರ್‌.ಆಂಜನೇಯರೆಡ್ಡಿ ಅಧ್ಯಕ್ಷ ಶಾಶ್ವತ ನೀರಾವರಿ ಹೋರಾಟ ಸಮಿತಿ

ಯೋಜನೆಯ ವೆಚ್ಚದ ಲೆಕ್ಕ ಕೊಡಿ

ಬಯಲುಸೀಮೆ ಜಿಲ್ಲೆಗೆ ನೀರು ತರುವುದಾಗಿ 12 ವರ್ಷಗಳಿಂದ ಎತ್ತಿನಹೊಳೆ ಯೋಜನೆಗೆ ಹಣ ಏರುತ್ತಲೇ ಇದೆ. ಅದು ನಮ್ಮ ತೆರಿಗೆ ಹಣ. ಈ ವರೆಗೆ ಎಷ್ಟು ಹಣ ಬಿಡುಗಡೆಯಾಗಿದೆ? ಎಷ್ಟು ಖರ್ಚಾಗಿದೆ ಎಂಬುದಕ್ಕೆ ಸರ್ಕಾರ ಲೆಕ್ಕ ಕೊಡಬೇಕು ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಈಚೆಗೆ ಕೋಲಾರದಲ್ಲಿ ನಡೆದಿದ್ದ ಜಲಾಗ್ರಹ ಹೋರಾಟದಲ್ಲಿ ಆಗ್ರಹಿಸಿದ್ದರು.

‘ಹೇಳಿದ್ದು ಎತ್ತಿನಹೊಳೆ; ಕೊಟ್ಟಿದ್ದು ಕೊಚ್ಚೆ ನೀರು’

ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನದಿಯ ನೀರು ಕೊಡುತ್ತೇವೆಂದು ಹೇಳಿ ಕಾಂಗ್ರೆಸ್‌ ಸರ್ಕಾರದವರು 2014ರಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಆದರೆ ಬೆಂಗಳೂರಿನ ಕೊಚ್ಚೆ ನೀರು ಕೊಟ್ಟರು. ಮೂರನೇ ಹಂತದ ಶುದ್ಧೀಕರಣ ಮಾಡಿ ಎಂದರೂ ಮಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕೃಷ್ಣಾ ನದಿಯ ನೀರು ಬಿಟ್ಟರೆ ಈ ಜಿಲ್ಲೆಗಳಿಗೆ ಬೇರೆ ದಾರಿ ಇಲ್ಲ ಎಂದು ಕೇಂದ್ರ ಸಚಿವ ಜೆಡಿಎಸ್‌ ವರಿಷ್ಠ ಎಚ್‌.ಡಿ.ಕುಮಾರಸ್ವಾಮಿ ಕಳೆದ ತಿಂಗಳು ಜಿಲ್ಲೆಗೆ ಭೇಟಿ ನೀಡಿದಾಗ ಹೇಳಿದ್ದರು.

ಒಂದೂವರೆ ವರ್ಷದಲ್ಲಿ ನೀರು

ಎತ್ತಿನಹೊಳೆ ಯೋಜನೆಯಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದ್ದು ಒಂದೂವರೆ ವರ್ಷದ ಒಳಗಾಗಿ ಜಿಲ್ಲೆಯ ನಂಗಲಿ ಗಡಿಯವರೆಗೆ ನೀರು ಹರಿಸುತ್ತೇವೆ ಎಂಬುದಾಗಿ ಸಚಿವ ಕೆ.ಎಚ್‌.ಮುನಿಯಪ್ಪ ಈಚೆಗೆ ಹೇಳಿದ್ದಾರೆ. ಈಗಾಗಲೇ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೆರೆಗಳನ್ನು ಆಯ್ಕೆ ಮಾಡಲಾಗಿದ್ದು ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.