
ಮಾಲೂರು: ಎತ್ತಿನಹೊಳೆ ಕುಡಿಯುವ ಯೋಜನೆಗೆ ಕೋಲಾರ-ಚಿಕ್ಕಬಳ್ಳಾಪುರದ ಕೆಲವೆಡೆ ಭೂಮಿ ಪಡೆಯುವ ಕೆಲಸ ಆಗಬೇಕಿದೆ. ಉಳಿದಂತೆ ಆ ಭಾಗದಲ್ಲಿ ಪೈಪ್‌ಲೈನ್ ಕೆಲಸ ಮುಗಿದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ನಗರದ ಕುಪ್ಪಶೆಟ್ಟಿ ಬಾವಿ ಬಳಿಯ ಕನ್ನಡ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಿದ್ದ 47 ದಿನಗಳ ಅದ್ದೂರಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎತ್ತಿನ ಹೊಳೆ ಯೋಜನೆ ಪ್ರಗತಿಯಲ್ಲಿದ್ದು, ಈ ಕಾಮಗಾರಿಯನ್ನು ಪೂರ್ಣಗೊಳಿಸುವ ಕೆಲಸ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
‘ಗಣೇಶೋತ್ಸವ ಕಾರ್ಯಕ್ರಮಗಳಿಗೆ ಹೆಚ್ಚಾಗಿ ಹೋಗಲ್ಲ. ಆದರೆ 25 ವರ್ಷಗಳ ಹಿಂದೆ ಮಾಲೂರಿಗೆ ಇದೇ ಗಣೇಶೋತ್ಸವ ಕಾರ್ಯಕ್ರಮಕ್ಕೆ ಬಂದಿದ್ದೆ. ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದೆ. ಅದರಿಂದ ಈ ಕಾರ್ಯಕ್ರಮಕ್ಕೆ ಬರುವಂತಾಗಿ ಬಂದಿದ್ದೇನೆ’ ಎಂದರು.
‘ಕಮಲ ಕೆಸರಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚೆನ್ನ. ದಾನ ಮಾಡುವ ಕೈಗೆ ಅಧಿಕಾರ ಕೊಟ್ಟಿದ್ದರಿಂದ ಐದು ಗ್ಯಾರಂಟಿ ನೀಡಲಾಗಿದೆ. ಇದರಿಂದ ಜನತೆಗೆ ಅನುಕೂಲವಾಗಿದೆ. ಆದರೆ, ಅನ್ನ ಭಾಗ್ಯ ಯೋಜನೆಯಲ್ಲಿ ತಲಾ 10 ಕೆ.ಜಿ ಅಕ್ಕಿ ಕೊಡುತ್ತಿದ್ದು, ನೂರಾರು ಮೂಟೆ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದೆ ಎಂಬ ಮಾಹಿತಿ ಇದೆ. ಹಾಗಾಗಿ ಅದನ್ನು ತಪ್ಪಿಸಲು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ಐದು ಕೆಜಿ ಅಕ್ಕಿ ಜೊತೆಗೆ ಬೇಳೆ, ಎಣ್ಣೆ, ಸಕ್ಕರೆ, ಉಪ್ಪು ಕೊಡಬೇಕೆಂದು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದರು.
ಸ್ಥಳೀಯ ಶಾಸಕ ಕೆ.ವೈ.ನಂಜೇಗೌಡರು ಎರಡನೇ ಬಾರಿ ಕಡಿಮೆ ಮತಗಳಿಂದ ಗೆದ್ದಿದ್ದಾರೆ. ಕೋರ್ಟ್‌ನಲ್ಲಿ ಮರು ಎಣಿಕೆ ಮಾಡಬೇಕೆಂದು ಆದೇಶ ಮಾಡಲಾಗಿದೆ. ಎಣಿಕೆಯಲ್ಲಿ ಯಾವುದೇ ಅಕ್ರಮ ನಡೆಯಲು ಸಾಧ್ಯವಿಲ್ಲ ಎಂದರು.
ಮಾಲೂರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರಿಗೆ ಮಾರಿಕಾಂಬ ದೇಗುಲ ಸಮಿತಿ ಪೂರ್ಣ ಕುಂಭ ಸ್ವಾಗತ ನೀಡಿ ಸ್ವಾಗತಿಸಿತು.
ಶಾಸಕ ಕೆ.ವೈ.ನಂಜೇಗೌಡ, ತಹಶೀಲ್ದಾರ್ ಎಂ.ವಿ.ರೂಪ, ಮಾಜಿ ಶಾಸಕ ಎ.ನಾಗರಾಜು, ಸಿ.ಲಕ್ಷ್ಮಿನಾರಾಯಣ್, ವಿಜಯಲಕ್ಷ್ಮಿ, ಸುನೀಲ್ ನಂಜೇಗೌಡ, ಕೆ.ಎಚ್.ಚನ್ನರಾಯಪ್ಪ, ಬಾಳಿಗಾನಹಳ್ಳಿ ಶ್ರೀನಿವಾಸ್, ಹನುಮಂತಪ್ಪ, ವಿಜಯನರಸಿಂಹ, ಆಂಜಿನಪ್ಪ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.