ADVERTISEMENT

ಅಧ್ಯಕ್ಷೆ ಭಾಗೀರಥಿ, ಉಪಾಧ್ಯಕ್ಷೆ ಜಯಶ್ರೀ

ಕಾಂಗ್ರೆಸ್‌ ಮಡಿಲಿಗೆ ಯಲಬುರ್ಗಾ ಪಟ್ಟಣ ಪಂಚಾಯಿತಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 6:42 IST
Last Updated 14 ಸೆಪ್ಟೆಂಬರ್ 2013, 6:42 IST

ಯಲಬುರ್ಗಾ: ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಭಾಗೀರಥಿ ಮಲ್ಲಪ್ಪ ಜೋಗಿನ್‌ ಹಾಗೂ ಉಪಾಧ್ಯಕ್ಷರಾಗಿ ಜಯಶ್ರೀ ಶರಣಪ್ಪ ಅರಕೇರಿ ಅವಿರೋಧವಾಗಿ ಆಯ್ಕೆಯಾದರು.

ಶುಕ್ರವಾರ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಸದಸ್ಯರಾದ ಈ ಇಬ್ಬರೂ ಯಾವುದೇ ಸ್ಪರ್ಧೆ ಎದುರಿಸದೇ ಸರಳ ಬಹುಮತ ಪಡೆದುಕೊಂಡರು.

11 ಸದಸ್ಯರ ಸಂಖ್ಯಾ ಬಲದಲ್ಲಿ 7 ಕಾಂಗ್ರೆಸ್‌, 2 ಬಿಜೆಪಿ, 1 ಜೆಡಿಎಸ್‌ ಹಾಗೂ 1 ಬಿಎಸ್‌ಆರ್‌ ಕಾಂಗ್ರೆಸ್‌ ಸದಸ್ಯರು ಇದ್ದಾರೆ. ಕಾಂಗ್ರೆಸ್‌ ಪಕ್ಷದ ಸದಸ್ಯರಿಗೆ ಸ್ಪಷ್ಟ ಬಹುಮತ ಹಾಗೂ ಮೀಸಲಾತಿ ಸಹ ಅನುಕೂಲವಾ ಗುವಂತೆ ಬಂದಿದ್ದರಿಂದ ಕಾಂಗ್ರೆಸ್‌ ಗೆಲುವಿನ ದಾರಿ ಸುಗಮವಾಗಿತ್ತು.

ಹಿಂದುಳಿದ ‘ಅ’ ವರ್ಗದ  ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಅರ್ಹತೆ ಪಡೆದಿದ್ದ ಒಬ್ಬರೇ ಸದಸ್ಯರಾಗಿದ್ದ ಭಾಗೀರಥಿ ಜೋಗಿನ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಸಾಮಾನ್ಯ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟು, ಮೂವರು ಮಹಿಳಾ ಕಾಂಗ್ರೆಸ್‌ ಸದಸ್ಯರ ಪೈಕಿ  ವರಿಷ್ಠರ ನಿರ್ಣಯದಂತೆ ಜಯಶ್ರೀ ಅರಕೇರಿಯೊಬ್ಬರು ನಾಮಪತ್ರ ಸಲ್ಲಿಸಿ ತಮ್ಮ ಸ್ಪರ್ಧೆ ಖಚಿತ ಪಡಿಸಿಕೊಂಡರು. ಆದರೆ, ನಿಗದಿತ ಅವಧಿಯಲ್ಲಿ ಪ್ರತಿಯಾಗಿ ಇತರೆ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ತಹಶೀಲ್ದಾರ್‌ ಎಂ.ಬಿ. ಬಿರಾದಾರ ಅವಿರೋಧ ಆಯ್ಕೆ ಘೋಷಿಸಿದರು.

ಕಂದಾಯ ಇಲಾಖೆಯ ವಿಜಯ ಕುಮಾರ, ಸಿಪಿಐ ಸುರೇಶ ತಳವಾರ, ಪಿಎಸ್‌ಐ ಸತೀಶ ಎಚ್‌.ಎಸ್‌. ಮುಖ್ಯಾ ಧಿಕಾರಿ ರಮೇಶ ಗೊಂಧಕರ ಇದ್ದರು.

ಕಾರ್ಯಕರ್ತರ ವಿಜಯೋತ್ಸವ
ಯಲಬುರ್ಗಾ:
ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಸದಸ್ಯರು ಅವಿರೋಧವಾಗಿ ಆಯ್ಕೆ ಯಾಗುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು ವಿವಿಧ ವೃತ್ತದ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚಿದರು.

ಶುಕ್ರವಾರ ಮಧ್ಯಾಹ್ನ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾಧಿ ಕಾರಿಗಳು ಅಂತಿಮವಾಗಿ ಫಲಿತಾಂಶ ಘೋಷಿಸುತ್ತಿದ್ದಂತೆ ಅಭಿಮಾನಿಗಳು ಹೊರಗೆ ಬಣ್ಣ ಎರಚಿ ಸಂಭ್ರಮಿಸಿದರು. ಶಾಸಕರ ಕಚೇರಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಮುಖಂಡರು ಹಾಗೂ ಕಾರ್ಯಕರ್ತರು ನೂತನ ಅಧ್ಯಕ್ಷೆ, ಉಪಾಧ್ಯಕ್ಷರನ್ನು ಅಭಿನಂದಿಸಿದರು.

ಅಧ್ಯಕ್ಷರಾಗಿ ಆಯ್ಕೆಯಾದ ಭಾಗೀರಥಿ ಮಾತನಾಡಿ, ಸದಸ್ಯರಾಗಿ ಮೊದಲನೆಯ ಅವಧಿಯಲ್ಲಿಯೇ ಅಧ್ಯಕ್ಷ ಸ್ಥಾನ ಬಂದಿದ್ದು ನನ್ನ ಪಾಲಿಗೆ ಬಯಸದೇ ಬಂದ ಭಾಗ್ಯವಾಗಿದೆ. ಅಧಿಕಾರಕ್ಕಿಂತಲೂ ಜನಸೇವೆ ಮುಖ್ಯ ಎಂದು ಭಾವಿಸಿ ಕೊಂಡು ಲಭ್ಯವಿರುವ ಅಧಿಕಾರದ ಅವಧಿಯಲ್ಲಿ ಹನ್ನೊಂದು ವಾರ್ಡಿನ  ಸದಸ್ಯರ ವಿಶ್ವಾಸ ಪಡೆದು ಪಟ್ಟಣದ ಸಮಗ್ರ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

ಉಪಾಧ್ಯಕ್ಷೆ ಜಯಶ್ರೀ ಮಾತನಾಡಿ, ಮಾದರಿ ಆಡಳಿತ ನೀಡುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.