ADVERTISEMENT

ಕೊಪ್ಪಳ: ಶೇ 74. 77ರಷ್ಟು ದಾಖಲೆಯ ಮತದಾನ

ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆ: ಶಾಂತಿಯುತ

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 11:29 IST
Last Updated 9 ಜೂನ್ 2018, 11:29 IST
ಕೊಪ್ಪಳ: ಶೇ 74. 77ರಷ್ಟು ದಾಖಲೆಯ ಮತದಾನ
ಕೊಪ್ಪಳ: ಶೇ 74. 77ರಷ್ಟು ದಾಖಲೆಯ ಮತದಾನ   

ಕೊಪ್ಪಳ: ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಗೆ ಶುಕ್ರವಾರ ಜಿಲ್ಲೆಯ ವಿವಿಧ ಮತದಾನ ಕೇಂದ್ರಗಳಲ್ಲಿ ಮತದಾರರು ಉತ್ಸಾಹದಿಂದ ಭಾಗವಹಿಸಿ ಮತದಾನ ಮಾಡಿದರು.

ಜಿಲ್ಲೆಯಲ್ಲಿ ಒಟ್ಟಾರೆ ಶೇ 74.77ರಷ್ಟು ಮತದಾನವಾಗಿದ್ದು, ಕಳೆದ 2012 ರ ಚುನಾವಣೆಯಲ್ಲಿ ಶೇ 46ರಷ್ಟು ಮತದಾನವಾಗಿತ್ತು. ಈ ಬಾರಿ ಮತದಾನ ಪ್ರಮಾಣ ಶೇ 28.77 ರಷ್ಟು ಹೆಚ್ಚಳವಾಗಿದೆ. ಈಶಾನ್ಯ ಕ್ಷೇತ್ರದಲ್ಲಿಯೇ ಜಿಲ್ಲೆಯಲ್ಲಿ ಹೆಚ್ಚು ಮತದಾನವಾಗಿದೆ. ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿ ಜರುಗಿತು.

ಗಂಗಾವತಿ, ಕೊಪ್ಪಳದಲ್ಲಿ ತಲಾ ಮೂರು, ಯಲಬುರ್ಗಾ, ಕುಷ್ಟಗಿಯಲ್ಲಿ ತಲಾ ಎರಡು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಬೆಳಿಗ್ಗೆ 9ಕ್ಕೆ ಶೇ 2.37ರಷ್ಟು ಮತದಾನವಾಗಿತ್ತು. ಉದ್ಯೋಗಸ್ಥ ಮತದಾರರು ಬೆಳಿಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದ್ದು ಕಂಡು ಬಂತು. ಮಧ್ಯಾಹ್ನದ ವೇಳೆಗೆ ಶೇ 55.31ರಷ್ಟು ಮತದಾನವಾಗಿತ್ತು.

ADVERTISEMENT

6234 ಮತ ಚಲಾವಣೆ: ಜಿಲ್ಲೆಯಲ್ಲಿ ಒಟ್ಟು 8338 ಮತದಾರರು ಇದ್ದು, 6234 ಜನರು ಮತ ಚಲಾಯಿಸಿದ್ದಾರೆ. ಪುರುಷ- 4838, ಮಹಿಳೆ- 1396 ಮತದಾನ ಮಾಡಿದ್ದಾರೆ. ಇದರಿಂದಾಗಿ ಒಟ್ಟಾರೆ ಶೇ 74.77 ರಷ್ಟು ಮತದಾನವಾಗಿದೆ. ಮಹಿಳೆಯರಿಗಿಂತ ಪುರುಷರೇ ಹೆಚ್ಚು ಮತದಾನದಲ್ಲಿ ಆಸಕ್ತಿಯಿಂದ ಪಾಲ್ಗೊಂಡಿದ್ದು ಕಂಡುಬಂತು. ಯಲಬುರ್ಗಾ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ 78.27ರಷ್ಟು ಮತದಾನವಾಗಿದ್ದರೆ, ಗಂಗಾವತಿ ತಾಲೂಕಿನಲ್ಲಿ ಅತಿ ಕಡಿಮೆ ಶೇ 71.02 ರಷ್ಟು ಮತದಾನವಾಗಿದೆ. ಉಳಿದಂತೆ ಕೊಪ್ಪಳ ತಾಲ್ಲೂಕಿನಲ್ಲಿ ಶೇ 76.04, ಕುಷ್ಟಗಿ- ಶೇ 76.35, ಯಲಬುರ್ಗಾ- 78.27, ಗಂಗಾವತಿ- 71,00 ರಷ್ಟು ಮತದಾನವಾಗಿದೆ.

ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಈ ಬಾರಿಯ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ 74.77 ರಷ್ಟು ಮತದಾನ ಪ್ರಮಾಣ ದಾಖಲಾಗಿದ್ದು, ಕ್ಷೇತ್ರದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಉಳಿದಂತೆ ಕ್ಷೇತ್ರದ ಉಳಿದ ಜಿಲ್ಲೆಗಳಾದ ಬೀದರ್- ಶೇ 67. 50, ರಾಯಚೂರು- 67. 19, ಬಳ್ಳಾರಿ- 73. 70, ಕಲಬುರಗಿ- 55, ಯಾದಗಿರಿ- ಶೇ 72. 46 ರಷ್ಟು ಮತದಾನ ದಾಖಲಾಗಿದೆ.

ಮತ ಪ್ರಮಾಣ ಹೆಚ್ಚಳಕ್ಕೆ ಕಾರಣ: ಸಂಬಂಧಿಸಿದ ಮತದಾರರಿಗೆ ಚುನಾವಣೆ ಅಧಿಕಾರಿಗಳು, ತಹಶೀಲ್ದಾರ್ ಕಚೇರಿ ಸಿಬ್ಬಂದಿ, ಕರ ವಸೂಲಿಗಾರರು ಹಾಗೂ ಗ್ರಾಮ ಲೆಕ್ಕಿಗರ ಮೂಲಕ ಮತದಾರರ ಮನೆ ಬಾಗಿಲಿಗೆ ತಿಳಿವಳಿಕೆ ಪತ್ರವನ್ನು ಕಳುಹಿಸಲಾಗಿತ್ತು. ಮತಗಟ್ಟೆ ಸಂಖ್ಯೆ, ಮಾದರಿ ಪತ್ರವನ್ನು ವಿತರಿಸಿ ಕ್ರಮ ಕೈಗೊಂಡಿದ್ದರಿಂದ ಮತದಾನ ಹೆಚ್ಚಳವಾಗಿದೆ ಎಂದು ಜಿಲ್ಲಾ ಚುನಾವಣೆ ಅಧಿಕಾರಿಗಳೂ ಆದ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ತಿಳಿಸಿದರು.

ವಿವಿಧ ಪಕ್ಷದ ಮುಖಂಡರು ಹಾಗೂ ಪಕ್ಷೇತರ ಅಭ್ಯರ್ಥಿಗಳ ಪರ ಬೆಂಬಲಿಗರು ಮತದಾನ ಕೇಂದ್ರದ ಹೊರಗೆ ನಿಂತುಕೊಂಡು ತಮ್ಮ ಅಭ್ಯರ್ಥಿಗಳ ಪರ ಮತಚಲಾಯಿಸುವಂತೆ ಮನವಿ ಮಾಡುತ್ತಿರುವುದು ಕಂಡು ಬಂತು.

ಕೊಪ್ಪಳದ ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ಎರಡು ಹಾಗೂ ತಹಶೀಲ್ದಾರ್ ಕಚೇರಿಯಲ್ಲಿ ಒಂದು ಮತದಾನ ಕೇಂದ್ರ ತೆರೆಯಲಾಗಿತ್ತು. ಬೆಳಿಗ್ಗೆ 8ಕ್ಕೆ ಆರಂಭವಾದ ಮತದಾನ ಮಧ್ಯಾಹ್ನ 12ರ ವೇಳೆಗೆ ಬಿರುಸಿನಿಂದ ನಡೆಯಿತು. ಸರ್ಕಾರಿ ನೌಕರರು, ನಿವೃತ್ತ ನೌಕರರು, ಪದವೀಧರರು ಸಾಲಾಗಿ ನಿಂತು ಮತಚಲಾಯಿಸಿದ್ದು, ವಿಶೇಷವಾಗಿತ್ತು.

ಯಾವುದೇ ಅಹಿತಕರ ಘಟನೆಗೆ ಆಸ್ಪದವಾಗದಂತೆ ಪೊಲೀಸರು ಸೂಕ್ತ ಬಿಗಿ, ಬಂದೋಬಸ್ತ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.