ADVERTISEMENT

ಗದ್ದೇರಹಟ್ಟಿ: `ಅರಣ್ಯ ಹಕ್ಕು ಸಮಿತಿ' ಅಸ್ತಿತ್ವಕ್ಕೆ

ಒಕ್ಕಲೆಬ್ಬಿಸುವುದರ ವಿರುದ್ಧ ಸಂಘಟನಾತ್ಮಕ ಹೋರಾಟ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 6:21 IST
Last Updated 7 ಸೆಪ್ಟೆಂಬರ್ 2013, 6:21 IST

ಕುಷ್ಟಗಿ: ಅರಣ್ಯ ಪ್ರದೇಶದಲ್ಲಿ ಅನೇಕ ತಲೆಮಾರುಗಳಿಂದಲೂ ವಾಸಿಸುತ್ತಿರುವವರನ್ನು ಒಕ್ಕಲೆಬ್ಬಿಸುವುದನ್ನು ತಡೆಯುವ ಸಲುವಾಗಿ ಮುಂದಿನ ದಿನಗಳಲ್ಲಿ ಕಾನೂನು ರೀತಿ ಮತ್ತು ಸಂಘಟನಾತ್ಮಕ ಹೋರಾಟ ನಡೆಸುವ ಉದ್ದೇಶದಿಂದ ತಾಲ್ಲೂಕಿನ ತಾವರಗೇರಾ ಗ್ರಾಮದ ಗದ್ದೇರಹಟ್ಟಿ ಅರಣ್ಯ ಗ್ರಾಮದಲ್ಲಿ ಶನಿವಾರ `ಅರಣ್ಯ ಹಕ್ಕು ಸಮಿತಿ' ರಚಿಸಲಾಯಿತು.

ಗದ್ದೇರಹಟ್ಟಿಯಲ್ಲಿ ಗುಡಿಸಲು, ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವ ಜನರನ್ನು ಅರಣ್ಯಭೂಮಿ ಎಂಬ ಕಾರಣಕ್ಕೆ ಎತ್ತಂಗಡಿಗೆ ಅರಣ್ಯ ಇಲಾಖೆ ಯತ್ನಿಸಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ರಾಜ್ಯ ದಲಿತ ಆದಿವಾಸಿಗಳ ಭೂಮಿ ಹಕ್ಕಿಗಾಗಿ ಆಂದೋಲನ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗ್ರಾಮಸಭೆಯಲ್ಲಿ ಅರಣ್ಯಭೂಮಿಯಲ್ಲಿ ಅನೇಕ ತಲೆಮಾರುಗಳಿಂದ ವಾಸಿಸುವ ಮತ್ತು ಸಾಗುವಳಿ ಮಾಡುವವರಿಗಾಗಿ ಇರುವ ಕಾನೂನಿನ ರಕ್ಷಣೆ ಕುರಿತು ತಿಳಿವಳಿಕೆ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಹೇಮರಾಜ್, ಅನುಸೂಚಿತ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ ಕಾಯ್ದೆ 2006 ನಿಯಮ 2008 ತಿದ್ದುಪಡಿ ಮತ್ತು 2012ರ ಕಾಯ್ದೆ ಪ್ರಕಾರ ಅರಣ್ಯಭೂಮಿಯಲ್ಲಿ ಮೂರು ತಲೆಮಾರುಗಳಿಂದ ವಾಸಿಸುವ ಅರಣ್ಯವಾಸಿಗಳಿಗೆ ಭೂಮಿ ಹಕ್ಕುಪತ್ರ ನೀಡಬೇಕಾಗುತ್ತದೆ. ಅಲ್ಲದೇ ಈ ಕಾಯ್ದೆ ಅಡಿ ರಚನೆಯಾಗುವ ಗ್ರಾಮ ಅರಣ್ಯ ಹಕ್ಕು ಸಮಿತಿ ನಿರ್ಧಾರಗಳಿಗೆ ಕಾಯ್ದೆಯಲ್ಲಿ ಹೆಚ್ಚಿನ ಮಾನ್ಯತೆ ನೀಡಲಾಗಿದೆ ಎಂದರು.

ಹೀಗಾಗಿ ಅರಣ್ಯ ಇಲಾಖೆಯವರು ಅನುಮತಿ ಪಡೆಯದೆ ಅರಣ್ಯ ಪ್ರವೇಶಿಸಿ ಅಲ್ಲಿನ ನಿವಾಸಿಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಕೆಲಸ ಕಾಮಗಾರಿಗಳನ್ನು ತೆಗೆದುಕೊಳ್ಳುವಂತಿಲ್ಲ. ಅಲ್ಲದೇ ಅಲ್ಲಿಯ ನಿವಾಸಿಗಳ ಬೇಕು ಬೇಡಿಕೆಗಳನ್ನು ಪರಿಶೀಲಿಸುವ ಮತ್ತು ಠರಾವು ಮಾಡುವ ಅಧಿಕಾರವೂ ಗ್ರಾಮ ಅರಣ್ಯ ಸಮಿತಿಗೆ ಇದೆ. ಒಂದು ವೇಳೆ ಈ ಕಾಯ್ದೆಯನ್ನು ಉಲ್ಲಂಘಿ ಸುವ ಯಾವುದೇ ಇಲಾಖೆಯ ಯಾರೇ ಅಧಿಕಾರಿಗಳ ವಿರುದ್ಧ ಸಮುದಾಯ ಹಕ್ಕು ಉಲ್ಲಂಘನೆ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ವಿವರಿಸಿದರು.
ಸಭೆ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯಿತಿ ಸದಸ್ಯ ಸುವರ್ಣಮ್ಮ ಕುಂಬಾರ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸಹಕರಿಸುವುದಾಗಿ ಹೇಳಿದರು.

ಗ್ರಾಮ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷರನ್ನಾಗಿ ದುರಗನಗೌಡ ಗೌಡ್ರ ಮತ್ತು ಕಾರ್ಯದರ್ಶಿಯನ್ನಾಗಿ ಮಹೇಶ ಅವರನ್ನು ಆಯ್ಕೆ ಮಾಡಲಾಯಿತು.

ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಮಲ್ಲಯ್ಯ ಸಾಲಿಮಠ, ಗ್ರಾಮ ಪಂಚಾಯಿತಿ ಸದಸ್ಯ ಸುಬೋದಗೌಡ, ಸಿಬ್ಬಂದಿ ಶ್ರೀನಿವಾಸ, ಅರಣ್ಯ ಇಲಾಖೆಯ ಅಬ್ದುಲ್ ಸಲಾಮ್, ಲಕ್ಷ್ಮಣ ಯಂಕಪ್ಪ ಗದ್ದಿ, ಮುದಿಯಪ್ಪ ಕುಸೆಕಾಳ, ದುರುಗನಗೌಡ ಗದ್ದಿ ಮತ್ತಿತರರು ಇದ್ದರು. ನರಿಯಪ್ಪ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.