ADVERTISEMENT

ಗೂಡ್ಸ್‌ನಲ್ಲಿ ಪ್ರಯಾಣಿಕರ ಸಾಗಣೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 9:20 IST
Last Updated 25 ಫೆಬ್ರುವರಿ 2012, 9:20 IST

ಕುಷ್ಟಗಿ; ಖಾಸಗಿಯವರಿಗೆ ಸೇರಿದ ಗೂಡ್ಸ್ ಮತ್ತಿತರೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದಲ್ಲದೇ ಮನಬಂದಂತೆ ತುಂಬುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದಾರೆ.

ಪಟ್ಟಣ ಹಾಗೂ ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿರುವ ನೂರಾರು ತ್ರಿಚಕ್ರ ಮತ್ತು ನಾಲ್ಕು ಚಕ್ರಗಳ ಟಂ ಟಂ ಮತ್ತಿತರೆ ವಾಹನಗಳಲ್ಲಿ ಈ ರೀತಿ ಮೋಟಾರು ವಾಹನ ಕಾಯ್ದೆಗೆ ವಿರುದ್ಧವಾಗಿ ಸಾಗಿಸುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.

ಅಲ್ಲದೇ ಈ ವಾಹನಗಳಲ್ಲಿ ಜಾನುವಾರುಗಳನ್ನು ತುಂಬಿದಂತೆ ಮಹಿಳೆಯರು, ಮಕ್ಕಳು ಇತರೆ ಪ್ರಯಾಣಿಕರನ್ನು ಸಾಗಿಸಲಾಗುತ್ತಿದೆ. ಇಂಥ ವಾಹನಗಳ ಬಹುತೇಕ ಚಾಲಕರ ಬಳಿ ಚಾಲನಾ ಪರವಾನಿಗೆ ಇರುವುದೇ ಅಪರೂಪ. ಆದರೆ ಪ್ರಾದೇಶಿಕ ಸಾರಿಗೆ ಇಲಾಖೆ ಸಿಬ್ಬಂದಿ ಕೆಲ ಸಂದರ್ಭಗಳಲ್ಲಿ ತಪಾಸಣೆ ನಡೆಸಿದರೂ ಕಠಿಣ ಕ್ರಮಕ್ಕೆ ಮುಂದಾಗದಿರುವುದರಿಂದ ಅನಧಿಕೃತ ಮತ್ತು ಸಾರಿಗೆ ನಿಯಮಗಳ ಉಲ್ಲಂಘನೆ ಹಾಗೆಯೇ ಮುಂದುವರೆದಿದೆ.

ಅಲ್ಲದೇ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ನಿಲ್ಲುವ ಇಂಥ ಹತ್ತಾರು ವಾಹನಗಳು ಜನರನ್ನು ತುಂಬಿಕೊಳ್ಳುತ್ತಿರುವುದು, ಠಾಣೆ ಮುಂದೆಯೇ ವಾಹನಗಳು ಹೋಗುತ್ತಿದ್ದರೂ ಪೊಲೀಸರು ಸಹ `ಮೌನ~ಕ್ಕೆ ಶರಣಾಗುತ್ತಿರುವುದು ಅಚ್ಚರಿ ಮೂಡಿಸಿದೆ.

ಈ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿರುವುದರಿಂದ ಸಂಚಾರ ವ್ಯವಸ್ಥೆಗೆ ಅಡ್ಡಿಯಾಗುತ್ತಿದ್ದರೂ ಪೊಲೀಸರು ಸುಗಮ ಸಂಚಾರಕ್ಕೆ ಪ್ರಯತ್ನಿಸುತ್ತಿಲ್ಲ ಎಂಬ ಆರೋಪ ನಾಗರಿಕರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.