ADVERTISEMENT

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭೇಟಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 8:10 IST
Last Updated 11 ಏಪ್ರಿಲ್ 2012, 8:10 IST

ಯಲಬುರ್ಗಾ: ಪಟ್ಟಣದ ಹೊರವಲಯದಲ್ಲಿರುವ ಕೆಂಪುಕೆರೆ, ತಾಲ್ಲೂಕಿನ ಚಿಕ್ಕೊಪ್ಪ ತಾಂಡಾದಲ್ಲಿರುವ ಗೋಶಾಲೆ ಹಾಗೂ ಬಂಡಿ ಗ್ರಾಮದ ಬಳಿ ಇರುವ ತೋಟಗಾರಿಕೆ ಬೆಳೆಗಳ ಅಭಿವೃದ್ದಿ ಕೇಂದ್ರಕ್ಕೆ ಸೋಮವಾರ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಭೇಟಿ ನೀಡಿ ಪರಿಶೀಲಿಸಿದರು.

ಕೆಂಪು ಕೆರೆಯ ಅಭಿವೃದ್ಧಿಗೊಳಿಸುವ ಹಿನ್ನೆಲೆಯಲ್ಲಿ ಅದರಿಂದಾಗು ಪ್ರಯೋಜನದ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಯಿಂದ ಸಂಪೂರ್ಣ ಮಾಹಿತಿ ಪಡೆದರು. ಹಾಗೆಯೇ ಗೋಶಾಲೆಯಲ್ಲಿ ಜಾನುವಾರುಗಳ ಆರೋಗ್ಯ ಸಂರಕ್ಷಣೆ ಬಗ್ಗೆ ಅನುಸರಿಸುವ ಕ್ರಮ ಹಾಗೂ ನೀರು ಪೂರೈಕೆಗೆ ಮಾಡಿಕೊಂಡ ವ್ಯವಸ್ಥೆಯನ್ನು ವೀಕ್ಷಿಸಿ ಸರಿಯಾದ ಸಮಯಕ್ಕೆ ನೀರು ಹಾಗೂ ಮೇವು ಪೂರೈಸುವಲ್ಲಿ ಹೆಚ್ಚು ಮುತುವರ್ಜಿ ತೋರಬೇಕು. ಅಲ್ಲದೇ ಜಾನುವಾರುಗಳಿಗೆ ಹೆಚ್ಚಿನ ನೆರಳಿನ ಅಗತ್ಯತೆ ಇದ್ದು ಕೂಡಲೇ ಛಾವಣಿ ವ್ಯವಸ್ಥೆ ಮಾಡಿ ಹೆಚ್ಚಿನ ನೆರಳು ಕಲ್ಪಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಾಣಿಸಿಕೊಂಡ ನೀರಿನ ಸಮಸ್ಯೆ ನಿವಾರಣೆಯಲ್ಲಿ ಗ್ರಾಪಂ ಸಂಪೂರ್ಣ ಜವಾಬ್ದಾರಿ ಹೊಂದಿವೆ. ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸದೇ ಹೋದರೆ ಮೇಲಧಿಕಾರಿಗಳ ಗಮನಕ್ಕೆ ತರುವುದು. ಅಷ್ಟಕ್ಕೂ ಕೆಲಸ ಮಾಡದೇ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಅವರ ವಿರುದ್ಧ ದೂರುಗಳು ಬಂದರೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತದೆ.
 
ಯಾವುದೇ ಕಾರಣಕ್ಕು ನೀರಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ತಹಸೀಲ್ದಾರ್ ಈ.ಡಿ. ಭೃಂಗಿ, ತಾಪಂ ಇಓ ಕೆ.ಬಿ. ಅಕ್ಕೋಜಿ ಹಾಗೂ ಇಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.