ADVERTISEMENT

ಬರದಿಂದ ಸಾಗಿದ ಬತ್ತ ನಾಟಿ ಕಾರ್ಯ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 10:27 IST
Last Updated 5 ಆಗಸ್ಟ್ 2013, 10:27 IST

ಕಾರಟಗಿ: ತುಂತುರು ಮಳೆ,  ಏರಿದ ಜಲಾಶಯ ಮಟ್ಟ ಇತ್ಯಾದಿಗಳಿಂದ ಪ್ರದೇಶದಲ್ಲಿ ಬತ್ತ ನಾಟಿ ಕಾರ್ಯ ಬಿರುಸಾಗಿದೆ.
ಇದರಿಂದ ಖುಷ್ಕಿ ಜಮೀನಿನ ರೈತರು ಆಗಿರುವ ಅಲ್ಪ ಮಳೆಗೆ ಜಮೀನು ಸಿದ್ಧಪಡಿಸಿಕೊಂಡರಾದರೂ ಬಹುತೇಕ ರೈತರು ಬಿತ್ತುವ ಕಾರ್ಯದಿಂದ ದೂರ ಉಳಿದರು.

ಈಗ ಮತ್ತೆ ಚಾಲನೆ ದೊರೆತಿದೆ. ತುಂಗಭದ್ರಾ ಜಲಾಶದ ನೀರಿನ ಮೂಲದ ಭಾಗದಲ್ಲಿ ಭಾರಿ ಮಳೆಯಾಗಿದ್ದರಿಂದ, ತುಂಗೆ ಭರ್ತಿ ಭರ್ತಿಯಾದ ಬಳಿಕ ಬಿಟ್ಟ ನೀರಿನಿಂದ ತುಂಗಭದ್ರಾ ಜಲಾಶಯ ಈಚಿನ ವರ್ಷಗಳಿಗೆ ಹೋಲಿಸಿದರೆ ಒಂದು ತಿಂಗಳು ಮೊದಲೆ ಭರ್ತಿಯಾಗಿದೆ.

ಒಳ ಹರಿವು ಅಧಿಕವಾಗುತ್ತಿರುವುದರಿಂದ ತುಂಗಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಜುಲೈ 10ರಂದು ಜಲಾಶಯದಿಂದ ಮುಖ್ಯಕಾಲುವೆಗಳಿಗೆ ನೀರು ಬಿಡಲು ತೀರ್ಮಾನಿಸಿತು. ಜುಲೈ 2 ಅಥವಾ 3ನೇ ವಾರದಲ್ಲಿ ನೀರು ಬಿಡುವ ಸಂಪ್ರದಾಯದಂತೆ ರೈತರು ಬತ್ತದ ಸಸಿಗಳ ಸಿದ್ಧತೆ ಮಾಡಿಕೊಂಡಿದ್ದರು. ನೀರು 15 ದಿನ ಮೊದಲೇ ಬಂದಿದ್ದರಿಂದ ಜಮೀನನಲ್ಲಿ ನಾಟಿ ಪೂರ್ವ ಕಾರ್ಯ ಕೈಗೊಂಡಿದ್ದರು.

ಕಳೆದ ವಾರದಿಂದ ಬತ್ತದ ನಾಟಿ ಕಾರ್ಯ ಈ ಭಾಗದಲ್ಲಿ ತುರುಸಿನಿಂದ ನಡೆದಿದೆ. ಬೆಳ್ಳಂಬೆಳಿಗ್ಗೆ ಬತ್ತದ ಸಸಿ ಕಿತ್ತಲು, ಬತ್ತ ನಾಟಿ ಮಾಡಲು ಗುಂಪುಗುಂಪಾಗಿ ಮಹಿಳೆಯರು ತೆರಳುತ್ತಿರುವ ದೃಶ್ಯಗಳು ಸಾಮಾನ್ಯ ಎನ್ನುವಂತಿವೆ. ನಾಟಿ ಕಾರ್ಯಕ್ಕೆಂದೇ ಮೊದಲು ಆಂಧ್ರದ ಗದ್ವಾಲ್‌ನಿಂದ ನೂರಾರು ಕೂಲಿಗಳ ತಂಡಗಳು ಬರುತ್ತಿದ್ದವು. ಕೆಲ ವರ್ಷಗಳಿಂದ ಇವರು ಬರದಿರುವದರಿಂದ ಸ್ಥಳೀಯ ಮಹಿಳೆಯರ ಗುಂಪುಗಳೇ ಅನಿವಾರ್ಯ ಎನ್ನುವಂತಾಗಿದೆ. ನಾಟಿ ಕಾರ್ಯಕ್ಕೆ ಕೂಲಿಗಳ ಕೊರತೆ ಒಂದೆಡೆ, ಅಧಿಕ ಕೂಲಿ ಇನ್ನೊಂದೆಡೆ ಎನ್ನುವ ಪರಿಸ್ಥಿತಿ ಇದೆ.

ಬತ್ತ ನಾಟಿ ಮಾಡಲು ಎಕರೆಗೆ  2 ಸಾವಿರ ರೂ. ಆಗಬಹುದು. ನಾಟಿ ಮಾಡುವವರೂ ದರ ನಿಗದಿ ಮಾಡಿ ತಿಳಿಸಿಲ್ಲ. ಒಬ್ಬರು ಕೊಟ್ಟಂತೆ ನಾವೂ ಕೊಡಬೇಕಾಗುತ್ತದೆ ಎಂದು ಯಮನ್‌ಸಿಂಗ್ ಹೇಳುತ್ತಾರೆ. ನಾಲೆಗೆ ನೀರು ಬಿಟ್ಟಾಗ ಮಳೆಯಾಗುವ ವಾಡಿಕೆ ಈ ಬಾರಿ ಹುಸಿಯಾಗಿದೆ. ಹೀಗಾಗಿ ನೀರಿಗಾಗಿ ಹೋರಾಟ, ಆಕ್ರೋಶ ಕೆಲ ರೈತರಿಂದ ಆರಂಭಗೊಂಡಿದೆ. ಜಮೀನನ್ನು ನಾಟಿಗೆ ಸಿದ್ಧಪಡಿಸಿಟ್ಟುಕೊಂಡ ರೈತರು ನಾಟಿಗೆ ಬರುವವರನ್ನು ಕಾಯಲೆಬೇಕಾದ ಸ್ಥಿತಿ ಇದೆ. ಇದೆಲ್ಲದರ ಮಧ್ಯೆ ಬತ್ತ ನಾಟಿ ಕಾರ್ಯ ತುರುಸಿನಿಂದ ನಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.