ADVERTISEMENT

ಮೃತ ಪಿಎಸ್ಐ ಪರಶುರಾಮ್ ಕುಟುಂಬಕ್ಕೆ ₹50 ಲಕ್ಷ ನೆರವು: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2024, 23:15 IST
Last Updated 7 ಆಗಸ್ಟ್ 2024, 23:15 IST
ಕೊಪ್ಪಳ ಜಿಲ್ಲೆಯ ಸೋಮನಾಳ ಗ್ರಾಮದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್‌ ಅವರು ಮೃತ ಪಿಎಸ್‌ಐ ಪರಶುರಾಮ್ ಛಲವಾದಿ ಕುಟುಂಬದವರಿಗೆ ಸಾಂತ್ವನ ಹೇಳಿದರು
ಕೊಪ್ಪಳ ಜಿಲ್ಲೆಯ ಸೋಮನಾಳ ಗ್ರಾಮದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್‌ ಅವರು ಮೃತ ಪಿಎಸ್‌ಐ ಪರಶುರಾಮ್ ಛಲವಾದಿ ಕುಟುಂಬದವರಿಗೆ ಸಾಂತ್ವನ ಹೇಳಿದರು   

ಕಾರಟಗಿ (ಕೊಪ್ಪಳ ಜಿಲ್ಲೆ): ಯಾದಗಿರಿಯಲ್ಲಿ ಸಂಶಯಾಸ್ಪದವಾಗಿ ಮೃತಪಟ್ಟ ಪಿಎಸ್ಐ ಪರಶುರಾಮ್ ಛಲವಾದಿ ಕುಟುಂಬದವರಿಗೆ ಗೃಹ ಇಲಾಖೆ ಹಾಗೂ ಮುಖ್ಯಮಂತ್ರಿಯಿಂದ ₹50 ಲಕ್ಷ ವಿಶೇಷ ನೆರವು ನೀಡಲಾಗುವುದು ಎಂದು ಗೃಹಸಚಿವ ಜಿ. ಪರಮೇಶ್ವರ ಘೋಷಿಸಿದರು.

ತಾಲ್ಲೂಕಿನ ಸೋಮನಾಳ ಗ್ರಾಮದಲ್ಲಿ ಬುಧವಾರ ‌ಪರಶುರಾಮ್ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ‌ ಮಾಧ್ಯಮದವರ ಜೊತೆ ಮಾತನಾಡಿ, ‘ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಆದಷ್ಟು ಬೇಗನೆ ವಿಶೇಷ ನೆರವು ಬಿಡುಗಡೆ ಮಾಡಿಸುವೆ’ ಎಂದು ತಿಳಿಸಿದರು.

‘ವಿರೋಧ ಪಕ್ಷಗಳು ರಾಜಕೀಯ ಕಾರಣಕ್ಕಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸುತ್ತಿವೆ. ಇದು ಸಿಬಿಐಗೆ ವಹಿಸುವಷ್ಟು ಅರ್ಹವಾಗಿಲ್ಲ. ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿದ್ದು, ಅವರು ಪರಿಣಾಮಕಾರಿಯಾಗಿ ತನಿಖೆ ಮಾಡುತ್ತಾರೆ‌. ಅಧಿಕಾರದಲ್ಲಿದ್ದಾಗ ಸಿಐಡಿ‌ ಸಮರ್ಥವಾಗಿದೆ ಎಂದು ಬಿಜೆಪಿಯವರೇ ಹೇಳಿದ್ದರು. ವಿರೋಧ ಪಕ್ಷದ ಸ್ಥಾನಕ್ಕೆ ಬಂದಾಕ್ಷಣ ಸಿಐಡಿ ದುರ್ಬಲವಾಯಿತೇ’ ಎಂದು ಪ್ರಶ್ನಿಸಿದರು.

ADVERTISEMENT

‘ಪರಶುರಾಮ್‌ ಪತ್ನಿ ಶ್ವೇತಾ ಬಿಇ ಪದವೀಧರೆಯಾಗಿದ್ದು, ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಅಥವಾ ಜೆಸ್ಕಾಂನಲ್ಲಿ ಕೆಲಸ ಕೊಡುವಂತೆ ಮನವಿ ಮಾಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು. 

‘ಸಿಐಡಿ ತಂಡ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಲೆ ಹಾಕುತ್ತಿದೆ‌. ತನಿಖೆಯಿಂದ ಪರಶುರಾಮ್ ಕುಟುಂಬಕ್ಕೆ ಸಂಪೂರ್ಣ ನ್ಯಾಯ ಸಿಗುತ್ತದೆ. ಇದನ್ನು ಅವರ ಕುಟುಂಬದವರಿಗೂ ಮನವರಿಕೆ ಮಾಡಿಕೊಡಲಾಗಿದೆ. ಎಫ್ಐಆರ್‌ನಲ್ಲಿ ಉಲ್ಲೇಖವಾಗಿರುವ ಯಾದಗಿರಿ ಶಾಸಕ ಹಾಗೂ ಅವರ ಪುತ್ರನ ವಿರುದ್ಧದ ಆರೋಪ ಸಾಬೀತಾದರೆ ಬಂಧಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.