ADVERTISEMENT

ಶಿಥಿಲಗೊಂಡ ಕೊಠಡಿಗಳು: ಕಲಿಕೆಗೆ ತೊಂದರೆ

ಉಮಾಶಂಕರ ಬ.ಹಿರೇಮಠ
Published 12 ಜನವರಿ 2018, 8:53 IST
Last Updated 12 ಜನವರಿ 2018, 8:53 IST
ಯಲಬುರ್ಗಾ ತಾಲ್ಲೂಕು ಬಂಡಿಹಾಳ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದ ದುಸ್ಥಿತಿ
ಯಲಬುರ್ಗಾ ತಾಲ್ಲೂಕು ಬಂಡಿಹಾಳ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದ ದುಸ್ಥಿತಿ   

ಯಲಬುರ್ಗಾ: ತಾಲ್ಲೂಕಿನ ಬಂಡಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಗತ್ಯ ಕೊಠಡಿಗಳಿದ್ದರೂ ಬಳಕೆಗೆ ಯೋಗ್ಯವಿಲ್ಲದಂತಾಗಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ.

ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ 225 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು 14 ಕೊಠಡಿಗಳಿದ್ದು, ಅವು ಹಾಳಾಗಿವೆ. ಅವುಗಳಲ್ಲಿ 50 ವರ್ಷದಷ್ಟು ಹಳೆಯದಾದ ಮೂರು ಕೊಠಡಿಗಳು ಮಾತ್ರ ಬಳಕೆಗೆ ಯೋಗ್ಯವಾಗಿವೆ. ಅದರಲ್ಲಿ ಒಂದು ಕಚೇರಿ ಇದ್ದು, ಉಳಿದ ಎರಡರಲ್ಲಿ ತರಗತಿಗಳು ನಡೆಯುತ್ತವೆ.

10 ವರ್ಷಗಳ ಹಿಂದೆ ನಿರ್ಮಾಣಗೊಂಡ ನಾಲ್ಕೈದು ಕೊಠಡಿಗಳ ಕಟ್ಟಡ ಬಹುತೇಕ ಹಾಳಾಗಿದೆ. ಉಪಯೋಗಕ್ಕೆ ಯೋಗ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದರಿಂದ ಹಳೆಯ ಕಟ್ಟಡದಲ್ಲಿಯೇ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಮುಖ್ಯೋಪಾಧ್ಯಾಯರು ಹೇಳಿದರು.

ADVERTISEMENT

ದುರಸ್ತಿ ಕೈಗೊಳ್ಳಲು ಸಾಧ್ಯವಾಗದ ಹಂತಕ್ಕೆ ತಲುಪಿರುವ ಶಾಲಾ ಕಟ್ಟಡಗಳ ನೆಲ ಕುಸಿದಿದೆ. ಚಾವಣಿಯ ಸಿಮೆಂಟ್ ಉದುರುತ್ತಿದೆ. ಮಳೆಯ ನೀರು ಒಳಗೆ ನುಗ್ಗುತ್ತದೆ. ನಾಲ್ಕು ಕಡೆಯ ಗೋಡೆಗಳಲ್ಲೂ ದೊಡ್ಡ ದೊಡ್ಡ ಬಿರುಕುಗಳಿವೆ. ಯಾವುದೇ ಸಂದರ್ಭದಲ್ಲಿ ಬೀಳುವ ಸಾಧ್ಯತೆ ಇರುವುದರಿಂದ ಆತಂಕಗೊಂಡ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈ ಕೊಠಡಿಗಳನ್ನು ಬಳಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಪಾಲಕರು.

ಮಕ್ಕಳಿಗೆ ಅನುಗುಣವಾಗಿ ಕೊಠಡಿಗಳಿಲ್ಲದ ಕಾರಣ ಪಾಠ ಸರಿಯಾಗಿ ನಡೆಯುತ್ತಿಲ್ಲ. ವಿವಿಧ ತರಗತಿಯ ಮಕ್ಕಳಿಗೆ ಪ್ರತ್ಯೇಕವಾಗಿ ಪಾಠ ಮಾಡಲು ಸಾಧ್ಯವಾಗದೆ ಶಾಲೆಯ ಹೊರಾಂಗಣದಲ್ಲಿ ಪಾಠ ಮಾಡಬೇಕಾಗಿದೆ. ಈ ಅವ್ಯವಸ್ಥೆಯಿಂದಾಗಿ ಶಿಕ್ಷಕರಿಗೆ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಶೈಕ್ಷಣಿಕ ಅಭಿವೃದ್ಧಿ ಎಷ್ಟರಮಟ್ಟಿಗೆ ಸಾಧ್ಯ ಎಂಬ ಪ್ರಶ್ನೆ ಪಾಲಕರಲ್ಲಿ ಮೂಡಿದೆ.

ಇತರ ಶಾಲೆಗಳಿಗೆ ಮಂಜೂರಾದಂತೆ ಈ ಶಾಲೆಗೂ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಅನುದಾನವೂ ಮಂಜೂರಾಗಿದೆ. ಆದರೆ, ಶೌಚಾಲಯ ಕಾಮಗಾರಿ ಪೂರ್ಣಗೊಳಿಸದೆ ಹಣ ಲೂಟಿ ಮಾಡಿದ್ದಾರೆ. ಈ ಅಪೂರ್ಣಗೊಂಡ ಕಟ್ಟಡದ ಸುತ್ತ ಸಾರ್ವಜನಿಕರು ಬಹಿರ್ದೆಸೆಗೆ ಹೋಗುತ್ತಾರೆ. ಕಾರಣ ಕಾಂಪೌಂಡ್‌ ನಿರ್ಮಿಸಬೇಕಾಗಿದೆ ಎಂದು ಶ್ರೀಶೈಲಗೌಡ, ಕೊಟ್ರೇಶ ಶ್ರೀಗಿರಿ ಒತ್ತಾಯಿಸಿದ್ದಾರೆ.

ಶಿಕ್ಷಣಾಧಿಕಾರಿ ಒಮ್ಮೆಯೂ ಶಾಲೆಗೆ ಭೇಟಿ ನೀಡದೇ ಬೇಜವಾಬ್ದಾರಿ ತನದಿಂದ ನಡೆದುಕೊಳ್ಳುತ್ತಿದ್ದಾರೆ. ಕೂಡಲೇ ಹಳೆಯ ಕಟ್ಟಡವನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಿ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಾಣ ಮಾಡಬೇಕಾಗಿದೆ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸದಿದ್ದರೆ ಶಾಸಕರ ಕಚೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಧರಣಿ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

* * 

ಶಾಲೆಯ ದುಸ್ಥಿತಿಯನ್ನು ಸ್ಥಳೀಯ ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅವರು ಶೈಕ್ಷಣಿಕ ಸುಧಾರಣೆಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ
ಶರಣು ಕಳಸಪ್ಪನವರ
ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.